ಬಿಸ್ಕತ್ ಸಾಮ್ರಾಜ್ಯ ಕಟ್ಟಿ ದೇಶಕ್ಕೆ ಪರಿಚಿತನಾದ ಮಂಡ್ಯದ ಗಂಡು

0
51
ನವೆಂಬರ್ 30ರಂದು ಸಂಯಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕನ್ನಡ ನಾಡಿನ ಚಿನ್ನದ ಸಾಧಕರು ಅಡಿ ಪ್ರಕಟವಾದ ಲೇಖನ

ಓದಿದ್ದು ಎಂಜಿನಿಯರಿಂಗ್, ಆದರೆ ಆಗಿದ್ದು ಉದ್ಯಮಿ | ಬ್ರಿಟಾನಿಯಾದ ಬಹುತೇಕ ಉತ್ಪನ್ನ ತಯಾರು ಮಾಡ್ತಾರೆ ರಾಜ್ಯದ ಕೃಷ್ಣಪ್ಪ

ಇದು ಮಂಡ್ಯದ ಜಿಲ್ಲೆಯ ಬೊಮ್ಮನದೊಡ್ಡಿಯ ಕೃಷ್ಣಪ್ಪ ಎಂಬ ಉದ್ಯಮ ಸಾಧಕ ಕಟ್ಟಿದ ಬಿಸ್ಕತ್ ಸಾಮ್ರಾಜ್ಯದ ಕತೆ. ಕೃಷ್ಣಪ್ಪ ಅವರು ಗ್ರಾಮೀಣ ಹಿನ್ನೆಲೆಯಿಂದ ಬಂದವರು. ಕರೀಗೌಡ ಮತ್ತು ಚನ್ನಮ್ಮ ದಂಪತಿ ಪುತ್ರನಾಗಿ ಜನಿಸಿದ ಇವರದ್ದು ಮೂಲತಃ ಕೃಷಿ ಕುಟುಂಬ. ಪದವಿಪೂರ್ವ ಶಿಕ್ಷಣ ಮುಗಿಸಿ ಎಂಜಿನಿಯರಿಂಗ್ ಓದಿದ ಇವರಿಗೆ ತಾಯಿ ಯಾವಾಗಲೂ ಹೇಳುತ್ತಿದ್ದದ್ದು ಒಂದೇ ಮಾತು-`ಮಗನೇ, ನೀನು ಯಾವಾಗಲೂ ಉದ್ಯೋಗ ಕೊಡವವನ ಜಾಗದಲ್ಲಿ ಇರಬೇಕು ಹಾಗೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು’ ಎಂದು.

ಎಂಜಿನಿಯರಿಂಗ್ ಮುಗಿಸಿ ಲ್ಯಾಂಡ್ ಡೆವಲಪ್‌ಮೆಂಟ್ ಕ್ಷೇತ್ರವನ್ನು ಪ್ರವೇಶಿಸಿದ ಕೃಷ್ಣಪ್ಪ ಅವರು ಉತ್ತಮ ಲಾಭ ಗಳಿಸಿ ಯಶಸ್ಸಿನತ್ತ ಹೆಜ್ಜೆ ಹಾಕುತ್ತಿದ್ದರಾದರೂ, ಯಾವುದೋ ಒಂದು ಶೂನ್ಯತೆ ಹಾಗೂ ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ತಾಯಿಯ ಮಾತು ಅವರನ್ನು ಸದಾ ಕಾಡುತ್ತಿತ್ತು. ಆಗಲೇ ಅವರು ಆಹಾರ ಸಂಸ್ಕರಣಾ ವಲಯಕ್ಕೆ ಧುಮುಕಲು ನಿರ್ಧಾರ ಮಾಡಿದರು.

ಮನಸ್ಸಿನಲ್ಲಿ ಈ ವಿಚಾರ ಮೂಡಿದ್ದೇ ತಡ ಆಹಾರ ಸಂಸ್ಕರಣಾ ಘಟಕವೊಂದನ್ನು ಆರಂಭಿಸಿ ಬಿಸ್ಕತ್ತುಗಳನ್ನು ತಯಾರಿಸಲು ನಿರ್ಧರಿಸಿದರು. ಅದರ ಹೆಸರು ಪ್ಯಾರಾಮೌಂಟ್ ನ್ಯೂಟ್ರಿಷನ್‌ನ ಇಂಡಿಯಾ ಪ್ರೈವೇಟ್ ಲಿಮಿಟೆಡ್. ಈ ವೇಳೆಗೆ ಬಿಸ್ಕತ್ ಸಾಮ್ರಾಜ್ಯದ ದೈತ್ಯ ಕಂಪನಿಯಾದ `ಬ್ರಿಟಾನಿಯಾ’ದಿಂದ ಕೃಷ್ಣಪ್ಪನವರು ಪ್ರಭಾವಿತರಾದರು ಹಾಗೂ ಶೀಘ್ರದಲ್ಲೇ ಅದರ ವ್ಯಾಪಾರ ಪಾಲುದಾರರೂ ಆದರು. ಅಲ್ಲಿಂದ ಇಲ್ಲಿಯವರೆಗೆ ಅವರು ಹಿಂದಿರುಗಿ ನೋಡಿದ್ದೇ ಇಲ್ಲ.

ಈಗ ದೊಡ್ಡ ಪ್ರಮಾಣದಲ್ಲಿ, ಅಂದರೆ ಜಾಗತಿಕ ಮಟ್ಟದಲ್ಲಿ ತಮ್ಮ ಉದ್ದಿಮೆಯನ್ನು ವಿಸ್ತರಿಸಲು ಕೃಷ್ಣಪ್ಪ ಅವರು ಆಲೋಚಿಸುತ್ತಿದ್ದಾರೆ.

ಉದ್ದಿಮೆ ಆರಂಭ ಹೇಗೆ?: ಕೃಷ್ಣಪ್ಪ ಅವರು ಆರಂಭದಲ್ಲಿ ಗ್ಲೂಕೋಸ್ ಬಿಸ್ಕತ್ತು (ಟೈಗರ್ ಬ್ರಾಂಡ್) ತಯಾರಿಕೆಯೊಂದಿಗೆ ತಮ್ಮ ಉದ್ದಿಮೆಯನ್ನು ಆರಂಭಿಸಿದರು. ಶೀಘ್ರದಲ್ಲೇ ಇವರ ಪ್ರಯತ್ನಗಳನ್ನು ಬ್ರಿಟಾನಿಯಾ ಗುರುತಿಸಿ ಪ್ರೋತ್ಸಾಹಿಸಿತು. ತಮ್ಮ ಎಲ್ಲಾ ಕೆಲಸಗಳನ್ನೂ ಯಾವುದೇ ದೋಷಗಳಿಲ್ಲದೆ, ದೋಷರಹಿತವಾಗಿ ಮಾಡುವುದು ಕೃಷ್ಣಪ್ಪ ಹಾಗೂ ಅವರ ಕಂಪನಿಯ ಬಲ.

ಇಂದು ಪ್ಯಾರಾಮೌಂಟ್ ಬ್ರಿಟಾನಿಯದ ಅತ್ಯಂತ ಆದ್ಯತೆಯ ಪಾಲುದಾರರಲ್ಲಿ ಒಂದಾಗಿದೆ ಮತ್ತು 18,000 ಕೋಟಿ ರೂ. ಹೂಡಿಕೆಯೊಂದಿಗೆ ಪ್ರಾರಂಭವಾದದ್ದು ಈಗ ರೂ. 35,000 ಕೋಟಿಗಳಷ್ಟಿದೆ. ಪ್ರಸ್ತುತ ಪ್ಯಾರಾಮೌಂಟ್ ಗ್ರೂಪ್ 1,00,000 ಮಿಲಿಯನ್ ಟನ್‌ಗಳಷ್ಟು ಪ್ರೀಮಿಯಂ ಗುಣಮಟ್ಟದ ವೈವಿಧ್ಯಮಯ ಬಿಸ್ಕತ್ತುಗಳನ್ನು ತಯಾರಿ ಮಾಡುತ್ತದೆ.

ಇಲ್ಲಿ ತಯಾರಾಗುವ ಬ್ರಿಟಾನಿಯ ಉತ್ಪನ್ನಗಳು: ಗುಡ್‌ಡೇ ನಟ್ಸ್ ಕುಕೀಸ್, ಗುಡ್‌ಡೇ ಗೋಡಂಬಿ, ಗುಡ್‌ಡೇ ಬಟರ್, ಗುಡ್‌ಡೇ ಚೋಕೊಚಿಪ್ಸ್, ಮಿಲ್ಕ್ ಬಿಕೀಸ್, ಬೌರ್ಬನ್, ಟ್ರೀಟ್ ಕ್ರೀಮ್ ಮತ್ತು ನ್ಯೂಟ್ರಿಚಾಯ್ಸ್ ಸೇರಿದಂತೆ ಇನ್ನೂ ಹಲವಾರು ಉತ್ಪನ್ನಗಳು ಇಲ್ಲಿ ರೆಡಿಯಾಗುತ್ತವೆ.
ಕೃಷ್ಣಪ್ಪ ಅವರ ಪತ್ನಿ ಶ್ರೀಮತಿ ಸುಮನ್ ಕೃಷ್ಣಪ್ಪ, ಎಂಎಸ್ ಸಂವಹನ ಪದವೀಧರೆ, ಪ್ಯಾರಾಮೌಂಟ್ ನ್ಯೂಟ್ರಿಷನ್‌ನ ನಿರ್ದೇಶಕರಲ್ಲಿ ಒಬ್ಬರು. ಅವರು 2010-11ರಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ್ ಅವರಿಂದ ಅತ್ಯುತ್ತಮ ಪ್ರಕಾಶಕರಿಗಾಗಿ ಸ್ವರ್ಣಕಮಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.

ಸಮಾಜ ಸೇವೆಯಲ್ಲೂ ಎತ್ತಿದ ಕೈ : ಕೃಷ್ಣಪ್ಪ ಅವರು ಸಮಾಜ ಸೇವೆಯನ್ನೂ ಮಾಡುತ್ತ ಬಂದಿದ್ದಾರೆ. ಅಬ್ಬನಕುಪ್ಪೆ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು, ಪ್ರತಿ ತಿಂಗಳು ಅನಾಥಾಶ್ರಮ ಮಕ್ಕಳಿಗೆ ಆಹಾರ ನೀಡುವುದು, ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳು ಮತ್ತು ನೋಟ್‌ಬುಕ್‌ಗಳ ವಿತರಣೆ, ಅಬ್ಬನಕುಪ್ಪೆ ಗ್ರಾಮದಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಹಾಕಿಸಿರುವುದು, ನಿರ್ಗತಿಕ ಮಕ್ಕಳಿಗೆ ಸಾಧ್ಯವಿರುವ ಎಲ್ಲಾ ಆರೈಕೆಯನ್ನು ಒದಗಿಸುತ್ತಿರುವುದು ಅವರ ಕೆಲ ಸಮಾಜಮುಖಿ ಕಾರ್ಯಗಳು.

ಈ ದಂಪತಿ ಸಮಾಜದ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಗುಂಪುಗಳಿಗೆ ಸೇವೆ ಸಲ್ಲಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ಬಂದವರ ಬಗ್ಗೆ ಕೃಷ್ಣಪ್ಪ ಅವರಿಗೆ ವಿಶೇಷ ಕಾಳಜಿ ಇದೆ ಮತ್ತು ವಿದ್ಯಾರ್ಥಿವೇತನದ ಮೂಲಕ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅನೇಕ ಕೊಡುಗೆಗಳನ್ನೂ ಅವರು ನೀಡಿದ್ದಾರೆ.

Previous article‘ಪುಷ್ಪಲೋಕʼದ ಸೊಬಗಿಗೆ ಮಾರುಹೋದ ಬೆಂಗಳೂರು: ರೂ.10 ಲಕ್ಷ ಟಿಕೆಟ್ ಸಂಗ್ರಹ, ಭರ್ಜರಿ ಹಿಟ್!
Next articleಗ್ಯಾಸ್ ಸಿಲಿಂಡರ್ ದರ ಮತ್ತೊಮ್ಮೆ ಇಳಿಕೆ

LEAVE A REPLY

Please enter your comment!
Please enter your name here