21ನೇ ವಯಸ್ಸಿಗೆ 4 ಸಾವಿರ ಕೋಟಿಯ ಕಂಪನಿ ಕಟ್ಟಿದ ಬೆಂಗ್ಳೂರು ಹುಡುಗ

0
55
ನವೆಂಬರ್ 25ರಂದು ಸಂಯಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕನ್ನಡ ನಾಡಿನ ಚಿನ್ನದ ಸಾಧಕರು ಅಡಿ ಪ್ರಕಟವಾದ ಲೇಖನ

ಕಾಲೇಜು ಅರ್ಧಕ್ಕೆ ಬಿಟ್ಟು ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಕೈವಲ್ಯ | ಝೆಪ್ಟೊ ಎಂಬ ಇ-ಗ್ರಾಸರಿ ಕಂಪನಿ ಕಟ್ಟಿದ ಝೆನ್‌ಜಿ ಕಿಡ್

ದೇಶದಲ್ಲಿ ಹಲವು ಯುವಕರು ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಿದ್ದಾರೆ. ಸಣ್ಣ ವಯಸ್ಸಿನಲ್ಲೇ ದೊಡ್ಡ ಕಂಪನಿಯ ಬಾಸ್‌ಗಳಾಗಿದ್ದಾರೆ. ತಮ್ಮ ಕಠಿಣ ಪರಿಶ್ರಮ, ಸಾಧಿಸಬೇಕೆಂಬ ಛಲ, ದಿಟ್ಟ ನಡೆ, ದೃಢ ನಿರ್ಧಾರದಿಂದ ಅನೇಕರು ಸ್ವಂತ ಕಂಪನಿಗಳನ್ನೇ ಆರಂಭಿಸಿದ ಸಾಕಷ್ಟು ಉದಾಹರಣೆ ನಮ್ಮ ನಡುವೆ ಇವೆ. ಬೆಂಗಳೂರಿನಲ್ಲಿ ಆರಂಭವಾದ ಫ್ಲಿಪ್‌ಕಾರ್ಟ್ ಈಗ ದೇಶದ ನಂಬರ್ 1 ಇ-ಕಾಮರ್ಸ್ ಕಂಪನಿ. ಹೀಗೆ ಶುರುವಾದ ಹಲವು ಸ್ಟಾರ್ಟ್ಅಪ್‌ಗಳು ದೊಡ್ಡ ಉದ್ಯಮವಾಗಿ ಬೆಳೆದಿವೆ.

ಇದೇ ರೀತಿ ಬೆಂಗಳೂರಿನ ಹುಡುಗ ಕೈವಲ್ಯ ವೋಹ್ರಾ ಆರಂಭಿಸಿದ ಇ-ಗ್ರಾಸರಿ ಕಂಪನಿ ಝೆಪ್ಟೊ ಈಗ ಸಾವಿರಾರು ಕೋಟಿ ರೂ. ಬೆಲೆಬಾಳುವ ಪ್ರಮುಖ ಕಂಪನಿಯಾಗಿ ಬೆಳೆದು ನಿಂತಿದೆ. ಕೈವಲ್ಯ 2003 ಮಾರ್ಚ್ 15ರಂದು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರು. ಆರಂಭಿಕ ಶಿಕ್ಷಣವನ್ನು ಬೆಂಗಳೂರಿನಲ್ಲೇ ಪೂರೈಸಿದ ಕೈವಲ್ಯ ಉನ್ನತ ಶಿಕ್ಷಣಕ್ಕೆಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಕ್ಕೆ ಸೇರಿದರು.

ಕಾಲೇಜಿನಲ್ಲಿದ್ದಾಗಲೇ ಉದ್ಯಮದ ಕನಸು: ಸ್ಟ್ಯಾನ್‌ಫೋರ್ಡ್ ಯುನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಓದುತ್ತಿದ್ದ ಕೈವಲ್ಯನಿಗೆ ತನ್ನದೇ ಸ್ವಂತ ಕಂಪನಿ ಆರಂಭಿಸುವ ಆಲೋಚನೆ. ಆಗ ಕಾಲೇಜಿನಲ್ಲಿಯೇ ಪರಿಚಿತನಾದ ಗೆಳೆಯ ಆದಿತ್ ಪಾಲಿಚ್ ಜತೆ ಅರ್ಧಕ್ಕೆ ಓದು ನಿಲ್ಲಿಸಿ ಮುಂಬೈಗೆ ತೆರಳಿ ಕಿರಾಣ ಕಾರ್ಟ್ ಎಂಬ ಸ್ಟಾರ್ಟ್ಅಪ್ ಆರಂಭಿಸುತ್ತಾರೆ. ಅದೇ ಕಂಪನಿ ಈಗ ಝೆಪ್ಟೊ ಹೆಸರಿನೊಂದಿಗೆ ಇ-ಗ್ರಾಸರಿ ಕಂಪನಿಯಾಗಿ ಹೆಸರುವಾಸಿವಾಗಿದೆ.

2020-21ರಲ್ಲಿ ಕೋವಿಡ್ ಮಹಾಮಾರಿ ಅಬ್ಬರ ಜೋರಾಗಿತ್ತು. ಆ ಸಂದರ್ಭದಲ್ಲಿಯೇ ಜನರಿಗೆ ಅಗತ್ಯ ವಸ್ತುಗಳನ್ನು ಕಾಂಟ್ಯಾಕ್ಟ್‌ಲೆಸ್ ಡಿಲಿವರಿ ಮಾಡುವ ಉದ್ದೇಶದಿಂದ ಇಬ್ಬರು ಸೇರಿ ಝೆಪ್ಟೊ ಕಂಪನಿ ಹುಟ್ಟು ಹಾಕಿದರು. ಇದೀಗ ದೇಶದ ಪ್ರಮುಖ ಇ-ಗ್ರಾಸರಿ ಕಂಪನಿಗಳಾದ ಅಮೆಜಾನ್, ಸ್ವಿಗ್ಗಿ, ಇನ್‌ಸ್ಟಾಮಾರ್ಟ್‌, ಬ್ಲಿಂಕಿಟ್, ಬಿಗ್ ಬಾಸ್ಕೆಟ್, ಜಿಯೋ ಮಾರ್ಟ್‌ನಂತಹ ದೈತ್ಯ ಕಂಪನಿಗಳಿಗೆ ಝೆಪ್ಟೊ ಪ್ರತಿಸ್ಪರ್ಧಿಯಾಗಿದೆ.

ಅಂದುಕೊಂಡಷ್ಟು ಸುಲಭವಿರಲಿಲ್ಲ: ಝೆಪ್ಟೊ ಸಹಸ್ಥಾಪಕ ಕೈವಲ್ಯ ವೊಹ್ರಾ ಹೇಳುವಂತೆ ಸ್ಟ್ಯಾನ್‌ಫೋರ್ಡ್ ಯುನಿವರ್ಸಿಟಿಯಲ್ಲಿ ಓದುತ್ತಿದ್ದಾಗ ಸ್ವಂತ ಆರಂಭಿಸುವ ಆಲೋಚನೆ ಬಂದಿತು. ಏನನ್ನೂ ಯೋಚಿಸದೆ ಗೆಳಯ ಜೊತೆ ಕಾಲೇಜು ಬಿಟ್ಟು ಕಂಪನಿ ಆರಂಭಿಸಲು ಮುಂಬೈಗೆ ತೆರಳಿದೆವು. ಆಗಲೇ ಗೊತ್ತಾಗಿತ್ತು ಸ್ಟಾರ್ಟ್ಅಪ್ ಅನ್ನೋದು ಅಂದುಕೊಂಡಷ್ಟು ಸುಲಭದ ಮಾತಲ್ಲ ಎನ್ನುತ್ತಾರೆ ಕೈವಲ್ಯ.

ಮುಂಬೈಗೆ ಬಂದಿಳಿದ ಕೈವಲ್ಯ ಮತ್ತು ಆದಿತ್ ಇಬ್ಬರು ಸೇರಿ 45 ನಿಮಿಷಗಳಲ್ಲಿ ಮನೆಮನೆಗೇ ಗ್ರಾಸರಿಗಳನ್ನು ಡಿಲಿವರಿ ಮಾಡುವ ನಿಟ್ಟಿನಲ್ಲಿ ಕಿರಾಣ್ ಮಾರ್ಟ್ ಎಂಬ ಸಂಸ್ಥೆ ಆರಂಭಿಸುತ್ತಾರೆ. ಇದೇ ಕಂಪನಿಯನ್ನು ಝೆಪ್ಟೊ ಎಂಬ ಹೆಸರಿನಲ್ಲಿ ದೇಶದ ಪ್ರಮುಖ ನಗರಗಳಿಗೆ ವಿಸ್ತರಿಸುತ್ತಾರೆ. ಇದೀಗ ಝೆಪ್ಟೊ ಬೆಂಗಳೂರು, ಮುಂಬೈ, ಚೆನ್ಯೈ, ಗುರುಗಾಂವ್, ದೆಹಲಿ ಸೇರಿದಂತೆ ದೇಶದ 10 ಮಹಾನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಒಟ್ಟು 1,600 ಜನರಿಗೆ ಕಾಯಂ ಉದ್ಯೋಗ ನೀಡಿರುವ ಝೆಪ್ಟೊ ಸಂಸ್ಥೆ ಕೇವಲ 10 ನಿಮಿಷಗಳಲ್ಲಿ ಮನೆ ಬಾಗಿಲಿಗೇ 7,000ಕ್ಕೂ ಹೆಚ್ಚು ವಸ್ತುಗಳನ್ನು ಡಿಲಿವರಿ ಮಾಡುತ್ತದೆ.

ದೇಶದ ಶ್ರೀಮಂತ ಯುವ ಉದ್ಯಮಿ: 21ನೇ ವಯಸ್ಸಿನಲ್ಲಿ ಝೆಪ್ಟೊ ಕಂಪನಿ ಆರಂಭಿಸಿದ ಕೈವಲ್ಯ ಈಗ ದೇಶದ ಯುವ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಐಎಫ್‌ಎಲ್ ವೆಲ್ತ್ ಹುರೂನ್ ಇಂಡಿಯಾ ರಿಚ್ ಲಿಸ್ಟ್ ಪ್ರಕಾರ, ಕೈವಲ್ಯ ವೊಹ್ರಾ ಸಂಪತ್ತಿನ ಮೌಲ್ಯ 3,600 ಕೋಟಿ ರೂ. ಕೈವಲ್ಯ ಜತೆ ಸೇರಿ ಝೆಪ್ಟೊ ಕಂಪನಿ ಸ್ಥಾಪಿಸಿದ ಆದಿತ್ ಪಾಲಿಚ್ ಸಂಪತ್ತಿನ ಮೌಲ್ಯ 4,300 ಕೋಟಿ ರೂ. ಇದೆ.

ಕಡೇಗೊದ್ಮಾಂತು: ಯಾವುದೇ ಕ್ಷೇತ್ರದಲ್ಲಿ ಯಶಸ್ಸಾಗಲು ಪರಿಶ್ರಮ, ದೃಢ ನಿರ್ಧಾರ, ಸಾಧಿಸಬೇಕೆಂಬ ಛಲ ಅಗತ್ಯ. ಪ್ರಾಮಾಣಿಕ ಪ್ರಯತ್ನದೊಂದಿಗೆ ಶ್ರಮಪಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ.

Previous articleಕೇಣಿ ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ಅಂಕೋಲಾ ಬಂದ್. ನಾಗರಿಕರಿಂದ ತೀವ್ರ ಆಕ್ರೋಶ
Next articleಧಾರವಾಡ: ಕನೇರಿ ಶ್ರೀಗಳಿಗೆ ಜಿಲ್ಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧ ತೆರುವು

LEAVE A REPLY

Please enter your comment!
Please enter your name here