ಸಿತಾರ್ ತಂತಿಗಳು ಮೌನ… ಸಂಗೀತ ಕ್ಷೇತ್ರ ಮ್ಲಾನ

0
66

ಭಾನುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾದ ನುಡಿನಮನ

– ಬಿ.ಅರವಿಂದ
ಸದ್ದಿಲ್ಲದೆ ಹೊರಟೇಬಿಟ್ಟಿರಲ್ಲ ಜೋಶಿ ಸರ್…
ಸಂಗೀತಲೋಕ ಹಾಗೂ ಸ್ನೇಹಿತವಲಯ ಆಪ್ತತೆಯಿಂದ ಕರೆಯುತ್ತಿದ್ದ ಅಜ್ಜಪ್ಪ ಯಾನೆ ಸಿತಾರ್ ಶ್ರೀನಿವಾಸ ಜೋಶಿ ತಣ್ಣಗೆ ತಮ್ಮ ಪಾಡಿಗೆ ತಾವು ಬದುಕಿ, ಬೌದ್ಧಿಕ ಸ್ತರದಲ್ಲಿ ಶ್ರೇಷ್ಠ ಕಲಾವಿದರಾಗಿ ಸಾಧಿಸಿ, ಕೊನೆಗೆ ಸಣ್ಣ ಸದ್ದೂ ಇಲ್ಲದಂತೆ ತೆರಳಿದ್ದಾರೆ. ಸಂತೆಯಲ್ಲಿ ನಿಂತೂ ‘ಸದ್ದು’ ಮಾಡದ, ‘ಸದ್ದು’ಗಳ ಬಗ್ಗೆ ತಲೆಬಿಸಿ ಮಾಡಿಕೊಳ್ಳದ ಹಾಗೂ ‘ಸದ್ದು’ಗಳಿಗೆ ಮನ್ನಣೆ ನೀಡದೆ ನಿರ್ಲಿಪ್ತರಾಗಿ ಬದುಕಿದ ಸಾತ್ತ್ವಿಕ ಜೀವವೊಂದು ಇದರೊಂದಿಗೆ ಮಾಯವಾಗಿದೆ. ಸಿತಾರ್ ಮಾತ್ರವಲ್ಲ, ಹಿಂದೂಸ್ತಾನಿ ಸಂಗೀತಜ್ಞಾನ ಪರಂಪರೆಯ ಪ್ರಮುಖ ಕೊಂಡಿ ಕಳಚಿದೆ.

ಪ್ರಸಾರ ಭಾರತಿಯ ಅಧಿಕೃತ ಭಾಷೆಯಲ್ಲಿ ಪಂ. ಶ್ರೀನಿವಾಸ ಜೋಶಿ ‘ಹಿರಿಯ ಸಿತಾರ್’ ಕಲಾವಿದ. ಒಟ್ಟಾರೆ ಸಂಗೀತದ ಪರಿಭಾಷೆ ಮತ್ತು ಕಲಾವಿದರ ವಲಯದಲ್ಲಿ ಈ ಸೀಮಿತತೆ ಮೀರಿ ಮೇರುಪರ್ವತದಂತಿದ್ದ ‘ಪರಿಪೂರ್ಣ ಹಿಂದೂಸ್ತಾನಿ ಸಂಗೀತಶಾಸ್ತ್ರಜ್ಞ’. ಮೇಲ್ನೋಟಕ್ಕೆ ನಾಸ್ತಿಕ. ವಾಸ್ತವ ಬದುಕಿನಲ್ಲಿ ಸದಾ ಸಂಗೀತವನ್ನು ಧೇನಿಸುತ್ತ, ಭಕ್ತಿ-ಬದ್ಧತೆಗಳೊಂದಿಗೆ ಸಂಗೀತವನ್ನು ಆರಾಧಿಸುತ್ತಿದ್ದ ಸಂಗೀತಜೀವಿ. ತಮ್ಮ ಸುತ್ತಲಿನ ಗದ್ದಲದ ಲೋಕದಲ್ಲಿ ಹಮ್ಮುಬಿಮ್ಮುಗಳಿಂದ, ಆಡಂಬರ ತೋರಿಕೆಗಳಿಂದ ಬಹುದೂರ ಇದ್ದ ಸರಳ ಸಂತ.

ಎಪ್ಪತ್ನಾಲ್ಕು ವರ್ಷಗಳ (ಜನನ: 1951) ಅರ್ಥಪೂರ್ಣ ಬದುಕಿನಲ್ಲಿ ಅಜ್ಜಪ್ಪ ಸಂಗೀತಕ್ಕಾಗಿ ತಪಿಸಿದ್ದೇ ಬಹುಪಾಲು. ಹುಬ್ಬಳ್ಳಿಯ ಜೋಶಿ ಅವರಿಗೆ ಚಿಕ್ಕಂದಿನಿಂದ ಹಾಡುವ ಗೀಳು ಅಂಟಿತ್ತು. 1971ರಲ್ಲಿ ಕರ್ನಾಟಕ ವಿದ್ಯುತ್ ಮಂಡಳಿಯಲ್ಲಿ (ಕೆಇಬಿ) ನೌಕರಿಯೊಂದಿಗೆ ಆರಂಭಗೊಂಡ ಜವಾಬ್ದಾರಿಯ ಜೀವನ ಹಾಡಬೇಕು ಎಂಬ ರಚನಾತ್ಮಕ ಗೀಳಿಗೆ ಕೊನೆಯನ್ನೇನೂ ಹಾಡಲಿಲ್ಲ.

ಧಾರವಾಡದಲ್ಲಿ ಆ ದಿನಗಳಲ್ಲಿ ದಕ್ಷಿಣ ಭಾರತದ ಖ್ಯಾತ ಸಿತಾರ್ ವಾದಕ ಉಸ್ತಾದ್ ಬಾಲೇಖಾನ್ ಸಿತಾರ್ ಕಲಿಸುತ್ತಿದ್ದರು. 1972ರಲ್ಲಿ ಶ್ರೀನಿವಾಸ ಜೋಶಿ ಬಾಲೇಖಾನರ ‘ಭಾರತೀಯ ಸಂಗೀತ ವಿದ್ಯಾಲಯ’ದ ಮೆಟ್ಟಿಲುಗಳನ್ನು ಏರಿದಾಗ, ಹಾಡುವುದನ್ನು ಶಾಸ್ತ್ರೀಯವಾಗಿ ಕಲಿಯಲೇಬೇಕು, ಗಾಯನದಲ್ಲಿ ಆತ್ಮಸಂತೋಷವನ್ನು ಕಾಣಬೇಕು ಎಂಬ ಗುರಿಯೊಂದೇ ಕಣ್ಣೆದುರಿತ್ತು.

‘ಅಂದು ನಾನು ವಿದ್ಯಾಲಯಕ್ಕೆ ಹೋದಾಗ ಬೇರೆ ವಿದ್ಯಾರ್ಥಿಗಳಿಗೆ ಸಿತಾರ್ ಪಾಠ ನಡೆಯುತ್ತಿತ್ತು. ಏನಪ್ಪ ಏಕೆ ಬಂದೆ ಎಂದು ಬಾಲೇಖಾನ್ ಕೇಳಿದರು. ಹಿಂದೂಸ್ತಾನಿ ಗಾಯನ ಕಲಿಯಲು ಬಂದಿರುವುದಾಗಿ ಹೇಳಿದೆ. ನಾವು ಇಲ್ಲಿ ಸಿತಾರ್ ಮಾತ್ರ ಕಲಿಸುವುದು, ಗಾಯನ ಕಲಿಸುವುದಿಲ್ಲಪ್ಪ ಎಂದಾಗ ಕೆಳಗಿಳಿದು ಬಂದೆ. ಆದರೆ ಇಳಿದುಬಂದ ಮೇಲೆ ಏನನ್ನಿಸಿತೋ ಗೊತ್ತಿಲ್ಲ. ಮತ್ತೆ ವಿದ್ಯಾಲಯ ಇದ್ದ ಅಟ್ಟದ ಮೆಟ್ಟಿಲನ್ನೇರಿ ಹೋಗಿ ಸಿತಾರ್ ಕಲಿಯುವೆ ಎಂದುಬಿಟ್ಟೆ. ಹೀಗೆ ಬಾಲೇಖಾನ್ ಗುರುಗಳು ನನ್ನನ್ನು ಸಿತಾರ್ ವಾದಕನನ್ನಾಗಿ ಮಾಡಿದರು’ ಎಂದು ಜೋಶಿ ಆಗಾಗ ನೆನಪು ಮಾಡಿಕೊಳ್ಳುತ್ತಿದ್ದರು.

‘ಏನನ್ನಿಸಿತೋ’ ಎಂಬುದಲ್ಲ ಅಥವಾ ಕಾಟಾಚಾರಕ್ಕೆ ಆಯ್ಕೆ ಮಾಡಿಕೊಂಡದ್ದೂ ಅಲ್ಲ. ವಾಸ್ತವವಾಗಿ ಜೋಶಿ ಸ್ವಭಾವವೇ ಸಂಗೀತ ಪ್ರಧಾನವಾಗಿತ್ತು. ಸಂಗೀತದ ಯಾವ ಪ್ರಕಾರವಾದರೇನು, ರಾಗಗಳ ಸಾಗರದಲ್ಲಿ ಸಿತಾರ್ ಕೂಡ ಒಡನಾಡಿಯೇ ಅಲ್ಲವೇ, ಖುಷಿಗೆ ಹಾಡಿಕೊಂಡರಾಯಿತು ಎಂಬುದು ಜೋಶಿ ಅವರ ಅಂತರ್ಯದ ಭಾವವಾಗಿತ್ತು. ಹೀಗಾಗಿಯೇ ಅವರು ಸಿತಾರ್ ಆದರೂ ಸರಿಯೇ ಎಂದದ್ದು.

ಸಿತಾರ್ ವಾದನದಲ್ಲಿ ‘ಧಾರವಾಡ ಘರಾಣಾ’ ಪರಂಪರೆಯ ಅತೀ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದು; ಬಾಲೇಖಾನ್ ಬಳಿ ಕಲಿಯುತ್ತ, ನೌಕರನ ಜೀವನ ಸಾಗಿಸುತ್ತ ಸಂಗೀತ ವಿಷಯದಲ್ಲಿ ಮೊದಲ ರ್‍ಯಾಂಕ್‌ನೊಂದಿಗೆ ಪದವಿ ತೇರ್ಗಡೆಯಾಗಿದ್ದು; ಪ್ರಸಾರ ಭಾರತಿಯ ಅತ್ಯುನ್ನತ ದರ್ಜೆಯ ಕಲಾವಿದರಾಗಿ ದೆಹಲಿ ಕೋಲ್ಕತ್ತಾ ಆಗ್ರಾ ಪುಣೆ ಮುಂಬೈ ಗ್ವಾಲಿಯರ್ ಹೀಗೆ ಸಿತಾರ್‌ನ ಗಟ್ಟಿ ನೆಲದಲ್ಲಿ ಸೈ ಎನಿಸಿಕೊಂಡಿದ್ದು;  ರಾಜ್ಯದ ಹಾಗೂ ದೇಶದ ಎಲ್ಲ ಪ್ರಮುಖ ಸಂಗೀತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದು ಇವೇ ಮೊದಲಾದವು ಜೋಶಿಯವರ ಸಾಧನೆಗಳು.

ಸಂಗೀತ ವಲಯಕ್ಕೆ ಹಾಗೂ ಕೆಲವು ಆಪ್ತ ವಲಯಕ್ಕೆ ತಿಳಿದಿರುವಂತೆ, ಶ್ರೀನಿವಾಸ ಜೋಶಿ ಅವರಿಗೆ ‘ಸಿತಾರಿಸ್ಟ್’ ಜೊತೆ ಇನ್ನೆರಡು ಕಲಾತ್ಮಕ ಮುಖಗಳಿದ್ದವು. ‘ಪರಿಪೂರ್ಣ ಸಂಗೀತಜ್ಞ’ ಮತ್ತು ‘ರಂಗಸಂಗೀತ ನಿರ್ದೇಶನ’ ಎಂಬ ಈ ಎರಡು ಧನಾತ್ಮಕ ಅಂಶಗಳು ಅವರ ವ್ಯಕ್ತಿತ್ವದ ಸಾತ್ತ್ವಿಕ ಸೌಂದರ್ಯಕ್ಕೆ ಕಳೆಗಟ್ಟಿದ್ದವು.

ತಮ್ಮ ಕಂಠವನ್ನು ಹಾಗೂ ಗಾಯನದ ಕಡೆಗಿನ ತುಡಿತವನ್ನು ಜೋಶಿ ಅವರು ವಿನಿಯೋಗಿಸಿದ್ದು ಸಿತಾರ್‌ನ ಜೊತೆಗೆ ಗಾಯನ ಪ್ರಕಾರದ ಶಿಷ್ಯರನ್ನು ತಯಾರು ಮಾಡುವುದಕ್ಕೆ, ಸಂಗೀತ ನಿರ್ದೇಶನಕ್ಕೆ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಕಾರವನ್ನು ಶ್ರೀಮಂತಗೊಳಿಸುವುದಕ್ಕೆ, ಎಷ್ಟರ ಮಟ್ಟಿಗೆ ಎಂದರೆ, ಖಯಾಲಿಗೆ ಹಾಡುವಾಗ ಕೇಳಿದವರು ಅಥವಾ ಶಿಷ್ಯರಿಗೆ ಗಾಯನ ಕಲಿಸುವಾಗ ಆಲಿಸಿದವರು, ‘ಜೋಶಿ ಸಿತಾರ್ ವಾದಕರೋ ಅಥವಾ ಗಾಯಕರೋ’ ಎನ್ನುವಂತಾಗುತ್ತಿತ್ತು. ರಾಗಗಳ ಮೇಲಿನ ಹಿಡಿತ, ತಿಳಿವಳಿಕೆ, ಕಲಿಸುತ್ತಿದ್ದ ರೀತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸೃಷ್ಟಿಶೀಲ ಸೂಕ್ಷ್ಮತೆ ನಿಬ್ಬೆರಗು ಮೂಡಿಸುವಂತಿತ್ತು.

ಇದರೊಂದಿಗೆ ವಿಮರ್ಶಾತ್ಮಕವಾಗಿ ಹಿಂದೂಸ್ತಾನಿ ಸಂಗೀತದ ಎಲ್ಲ ಪ್ರಕಾರಗಳ ಬಗ್ಗೆ, ವ್ಯಾಪ್ತಿ-ವಿಸ್ತಾರಗಳ ಬಗ್ಗೆ ಜೋಶಿ ನಮ್ಮ ನಾಡಿನ ಅತ್ಯಪರೂಪದ ‘ಅಥಾರಿಟಿ’ಯಾಗಿದ್ದರು. ಹಿಂದೂಸ್ತಾನಿ ಸಂಗೀತದ ಬಗ್ಗೆ ಇನ್ನಿಲ್ಲದ ‘ತಪ’ ಅವರದ್ದು. ಹೀಗಾಗಿಯೇ ಅವರೊಬ್ಬ ಪರಿಪೂರ್ಣ ಸಂಗೀತಜ್ಞ. ಅಭಿಜಾತ ಪ್ರತಿಭೆ-ಪರಿಶ್ರಮ ಹಾಗೂ ಮುಖ್ಯವಾಗಿ ಪ್ರೀತಿಯಿಂದ ಕೂಡಿದ ಬದ್ಧತೆಗಳು ಅಜ್ಜಪ್ಪನನ್ನು ‘ಸಂಗೀತಜ್ಞ’ರ ಮೇಲ್ಪಂಕ್ತಿಯಲ್ಲಿ ಇರಿಸಿದ್ದವು.

ಗಾಯನ ಕ್ಷೇತ್ರದ ಮೇರು ಶಿಖರ ಪಂ. ಭೀಮಸೇನ ಜೋಶಿ ಅವರೇ ಒಮ್ಮೆ ಕಾರ್ಯಕ್ರಮ ಮುಗಿದ ಮೇಲೆ, ‘ಅಜ್ಜಪ್ಪ ಹೆಂಗ ಬಂತು…’ ಎಂದು ಕೇಳಿದ್ದರು. ಶ್ರೀನಿವಾಸ ಜೋಶಿ ಯಾವ ಸ್ತರದ ಕಲಾವಿದ ಎಂಬುದನ್ನು ತೋರಿಸಲು ಇದೊಂದೇ ಉದಾಹರಣೆ ಸಾಕು. ಏಕೆಂದರೆ ಶ್ರೀನಿವಾಸ ಜೋಶಿ ಕಛೇರಿ ಕೇಳುತ್ತಿದ್ದಾರೆ ಎಂದರೆ, ಎಷ್ಟೇ ದೊಡ್ಡ ಹಾಡುಗಾರ ಅಥವಾ ವಾದಕರಿರಲಿ, ಅವರ ಸಡಗರ ಇಮ್ಮಡಿಸುತ್ತಿತ್ತು. ಜೋಶಿ ಅವರಿಂದ ದೊರೆಯುತ್ತಿದ್ದ ಸಜ್ಜನಿಕೆಯ ವಿಮರ್ಶೆ, ಎಡವಿದಲ್ಲಿ ತಿದ್ದಿಕೊಳ್ಳಬೇಕಾದ ಬಗೆಗಿನ ಮಾರ್ಗದರ್ಶನಗಳು ಇದಕ್ಕೆ ಕಾರಣ. 

ಈ ಸಜ್ಜನಿಕೆ ಮತ್ತು ಸರಳತೆಗಳೊಂದಿಗೇ ಶ್ರೀನಿವಾಸ ಜೋಶಿ ಸಂಗೀತ ವಿದ್ಯೆಯನ್ನು ಸಿತಾರ್ ಹಾಗೂ ಗಾಯನ ಎರಡೂ ಪ್ರಕಾರಗಳಲ್ಲಿ ಧಾರೆ ಎರೆದರು. ಅವರ ಗರಡಿಯಲ್ಲಿ ಒಳ್ಳೆಯ ಸಿತಾರ್ ವಾದಕರಷ್ಟೇ ಅಲ್ಲ, ಅತ್ಯುತ್ತಮ ಶಾಸ್ತ್ರೀಯ ಗಾಯನ ಕಲಾವಿದರು ರೂಪುಗೊಂಡಿದ್ದಾರೆ. ಲಘು ಸಂಗೀತ ಪ್ರಕಾರದ ಹಾಡುಗಾರರೂ ಸೃಷ್ಟಿಯಾಗಿದ್ದಾರೆ. ಶಿಷ್ಯರೆಲ್ಲ ತಮ್ಮ ಮಿತಿಯಲ್ಲಿ ಒಳ್ಳೆಯ ಹೆಸರನ್ನೂ ಮಾಡಿದ್ದಾರೆ.

ಸುಮಾರು 60 ಹವ್ಯಾಸಿ ನಾಟಕಗಳಿಗೆ ಜೋಶಿ ನೀಡಿರುವ ಸಂಗೀತ ಈ ಪ್ರತಿಭಾವಂತ ರಂಗಕ್ಷೇತ್ರಕ್ಕೆ ಕೊಟ್ಟಿರುವ ಅಮೂಲ್ಯ ಕೊಡುಗೆ. ಮೃಚ್ಛಕಟಿಕ, ಹಯವದನ, ನಂದ ಭೂಪತಿ, ಗುಲಾಮನ ಸ್ವಾತಂತ್ರ್ಯ ಯಾತ್ರೆ, ವಾಸಾಂಸಿ ಜೀರ್ಣಾನಿ ಮೊದಲಾದ ಖ್ಯಾತ ನಾಟಕಗಳಿಗೆ ಜೋಶಿ ನೀಡಿರುವ ಸಂಗೀತ ಮತ್ತು ಅವರು ರಾಗಸಂಯೋಜನೆ ಮಾಡಿದ ಹಾಡುಗಳು ಇಂದಿಗೂ ಜನಪ್ರಿಯವಾಗಿ ಉಳಿದಿವೆ. ಹಾಗೆಯೇ ದಾಸರ ಪದಗಳು, ವಚನಗಳು, ಭಾವಗೀತೆಗಳಿಗೆ ನೀಡಿದ ಸಂಗೀತ ಅದ್ಭುತವಾಗಿದೆ.

ಅಜ್ಜಪ್ಪ ಶಿಷ್ಯರಿಗೆ ಅಕ್ಷರಶಃ ಓರ್ವ ತಂದೆಯಂತೆ ಸಂಗೀತ ಕಲಿಸಿದವರು. ಯಾವುದೇ ಶಿಷ್ಯರಿಂದಲೂ ನಯಾ ಪೈಸೆ ಶುಲ್ಕ ಸ್ವೀಕರಿಸದೆ ವಿದ್ಯೆಯನ್ನು ಧಾರೆ ಎರೆದ ನಿಜಾರ್ಥದ ಗುರು. ಸನ್ಮಾನ, ಪ್ರಚಾರ ಮತ್ತು ಪ್ರಶಸ್ತಿಗಳಿಂದ ಸಂಪೂರ್ಣ ದೂರವಿದ್ದ, ಲಾಬಿಗಳ ಸುಳಿಯ ಕಡೆ ಹೆಜ್ಜೆ ಹಾಕದ ನಿರ್ಲಿಪ್ತ. ತಮ್ಮನ್ನು ಕಡೆಗಣಿಸಿದ ಈ ವ್ಯವಸ್ಥೆಯ ಲಾಬಿಗಳ ಬಗ್ಗೆ ಎಳ್ಳಷ್ಟೂ ಕಹಿ ಇಟ್ಟುಕೊಳ್ಳಲಿಲ್ಲ. ಸಂಗೀತ ನನ್ನ ಆತ್ಮತೃಪ್ತಿಗಾಗಿ ಮಾತ್ರ ಎಂದು ತುಂಬಿದ ಕೊಡದಂತೆ ಬದುಕಿ, ಸಂಗೀತವನ್ನು ತುಂಬಿತುಂಬಿ ಕೊಟ್ಟು, ಒಳ್ಳೆಯ ನೆನಪುಗಳ ಬಿಟ್ಟು ತೆರಳಿದ್ದಾರೆ ಈ ಶ್ರೇಷ್ಠ ಕಲಾವಿದ.

Previous articleಯಶವಂತ ಹೋದಾ… ಮುಂದ?
Next articleಶೇ.71ರಷ್ಟು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣ

LEAVE A REPLY

Please enter your comment!
Please enter your name here