ಬೆಳಗಾವಿ: ಬೆಳಗಾವಿ ಕಾಂಗ್ರೆಸ್ ಕಚೇರಿ ಕ್ರೆಡಿಟ್ ಪಾಲಿಟಿಕ್ಸ್ ಇದೀಗ ಸುರ್ಜೆವಾಲಾ ಎದುರಿನಲ್ಲಿಯೇ ಶುಕ್ರವಾರ ಮತ್ತೊಮ್ಮೆ ಭುಗಿಲೆದ್ದಿದೆ. ಗಾಂಧಿ ಭಾರತ ಸಮಾವೇಶದ ಪೂರ್ವಭಾವಿ ಸಭೆಯ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಈ ಹಿಂದಿನ ಸಭೆಗೆ ಸ್ಥಳೀಯ ನಾಯಕರು, ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಸಭೆಯಲ್ಲಿದ್ದ ಕಾರ್ಯಕರ್ತರು ಆಕ್ಷೇಪ ಎತ್ತಿದರು.
ಇದೇ ವೇಳೆ ಬೆಳಗಾವಿ ಕಾಂಗ್ರೆಸ್ ಕಚೇರಿ ಕಟ್ಟಡದ ನಿರ್ವಹಣೆ ಖರ್ಚು ವೆಚ್ಚಗಳನ್ನು ಸತೀಶ ಜಾರಕಿಹೊಳಿ ಅವರೇ ಇಂದಿಗೂ ನೋಡಿಕೊಳ್ಳುತ್ತಿದ್ದಾರೆ ಎಂದು ಸಭೆಯಲ್ಲಿ ಬಾಬುಲಾಲ್ ಭಗವಾನ್ ಮಾಹಿತಿ ನೀಡಿದರು. ಈ ಸಭೆಗೆ ಜಿಲ್ಲೆಯ ಕೈ ಶಾಸಕರು ಯಾಕೆ ಬಂದಿಲ್ಲ ಎಂದು ಅವರು ಪ್ರಶ್ನೆ ಮಾಡಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸತೀಶ ಜಾರಕಿಹೊಳಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.
ಇಲ್ಲಿನವರೆಗೂ ಸ್ಥಳೀಯ ಕಾರ್ಯಕರ್ತರನ್ನು ಕರೆದು ಯಾವುದೇ ಸಭೆ ನಡೆಸಿಲ್ಲ; ಜವಾಬ್ದಾರಿಯನ್ನೂ ಹಂಚಿಲ್ಲ. ಸಭೆ ಮಾಡಿರುವುದಾಗಿ ಹೇಗೆ ಹೇಳುತ್ತೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸುರ್ಜೇವಾಲಾ ಮಾತನಾಡಿ, ಜಿಲ್ಲಾಮಂತ್ರಿಯನ್ನು ಖುಷಿ ಪಡಿಸುವುದಕ್ಕೆ ನೀವೆಲ್ಲಾ ಹೀಗೆ ಮಾತನಾಡುತ್ತಿದ್ದೀರಿ ಎಂದರು. ಈ ವೇಳೆ ಎದ್ದು ನಿಂತ ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ ನಮ್ಮ ನಾಯಕರ ಬಗ್ಗೆ ಹೀಗೆಲ್ಲ ಮಾತನಾಡಬೇಡಿ. ಅವರಿಗಾಗಿ ನಾವು ಜೀವ ಕೊಡಲೂ ಸಿದ್ಧ. ಇಷ್ಟು ಜನ ಬಂದು ಸೇರಿರುವುದೇ ಅವರಿಗಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ವತಃ ವೇದಿಕೆಯಲ್ಲಿದ್ದವರೇ ಎದ್ದು ನಿಂತು ಆಯಿಷಾರನ್ನು ಶಾಂತವಾಗಿ ಕುಳಿತುಕೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಡಿಕೆಯವರೇ ಇದು ಕನಕಪುರ ಅಲ್ಲ; ಬೆಳಗಾವಿ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.
ಆದರೆ ತಮ್ಮ ಕಣ್ಣ ಮುಂದೆಯೇ ಇಷ್ಟೆಲ್ಲಾ ರಾದ್ಧಾಂತ ನಡೆಯುತ್ತಿದ್ದರೂ ಸಚಿವ ಸತೀಶ ಜಾರಕಿಹೊಳಿ ಅವರು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ಕುಳಿತುಕೊಂಡರು. ಕೊನೆಗೆ ಸುರ್ಜೇವಾಲಾ ಅವರೇ ಕೈ ಮುಗಿದು ಹಳೆಯದ್ದನೆಲ್ಲಾ ಬಿಟ್ಟುಬಿಡಿ. ಎಲ್ಲವನ್ನೂ ಸರಿಪಡಿಸೋಣ. ಈಗ ಎಲ್ಲರೂ ಒಗ್ಗಟ್ಟಾಗಿ ಗಾಂಧಿ ಭಾರತ ಸಮಾವೇಶ ಕಾರ್ಯಕ್ರಮ ಯಶಸ್ವಿಯಾಗಿಸೋಣ ಎಂದು ಕರೆ ನೀಡಿದರು. ನಂತರ ಸಭೆ ಶಾಂತವಾಯಿತು.