ಬಾಗಲಕೋಟೆ: ಕ್ರಿಕೆಟ್ ಬಾಲ್ ವಿಚಾರವಾಗಿ ಜಗಳವಾಡಿದ ಯುವಕನೋರ್ವ ನೆರೆ ಮನೆಯಲ್ಲಿ ವಾಸಿಸುತ್ತಿದ್ದ ಶಿಕ್ಷಕನನ್ನು ಹುಡುಕಿಕೊಂಡು ಹೋಗಿ ಗಾಜಿನ ಬಾಟಲಿಯಿಂದ ಇರಿದಿರುವ ಘಟನೆ ಜಮಖಂಡಿ ತಾಲೂಕಿನ ಸಾವಳಗಿಯಲ್ಲಿ ನಡೆದಿದೆ.
ಪವನ್ ಜಾಧವ (21) ಆರೋಪಿ. ಈತನ ಮನೆ ಪಕ್ಕದಲ್ಲಿ ಅದೇ ಗ್ರಾಮದ ಬಿಎಲ್‌ಡಿಇ ಸಂಸ್ಥೆಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುವ ರಾಮಪ್ಪ ಪೂಜಾರಿ (36) ವಾಸಿಸುತ್ತಿದ್ದು, ಪವನ್ ಕ್ರಿಕೆಟ್ ಆಡುವ ವೇಳೆ ಬಾಲ್ ರಾಮಪ್ಪ ಅವರ ಮನೆ ಬಳಿ ಬಿದ್ದಿದೆ. ಈ ವೇಳೆ ಆರೋಪಿ ಪವನ್, ರಾಮಪ್ಪ ಅವರ ಮನೆಗೆ ತೆರಳಿ ಬಾಲ್ ಕೇಳಿದಾಗ ಅವರು ಬಾಲ್ ಬಂದಿಲ್ಲ ಎಂದಿದ್ದಾರೆ. ಇದು ಮಾತಿಗೆ, ಮಾತು ಬೆಳೆದು ಜಗಳವಾಗಿದೆ. ನಂತರ ರಾಮಪ್ಪ ಅವರ ಶಾಲೆಗೆ ತೆರಳಿದ ಪವನ್ ಪೂಜಾರಿ ಅವರನ್ನು ವಾಚಾಮಗೋಚರವಾಗಿ ನಿಂದಿಸಿದ್ದಲ್ಲದೇ ತನ್ನ ಹಿಂಬದಿಯ ಕಿಸೆಯಿಂದ ಒಡೆದ ಬಿಯರ್ ಬಾಟಲಿನ ಗಾಜಿನಿಂದ ರಾಮಪ್ಪ ಅವರ ಮುಖ ಹಾಗೂ ತಲೆಗೆ ಮನ ಬಂದಂತೆ ಇರಿದು ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಪವನ್ ಹಲ್ಲೆ ನಡೆಸಿರುವ ದೃಶ್ಯ ಶಾಲೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಚೂರಿ ಇರಿತಕ್ಕೆ ಒಳಗಾಗಿರುವ ರಾಮಪ್ಪ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.