ದಾವಣಗೆರೆ: ರೌಡಿಶೀಟರ್ ಸಂತೊಇಷ್ ಆಲಿಯಾಸ್ ಕಣುಮಾನ ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಚಾವಳಿ ಸಂತೋಷ್ ಎಂಬಾತನಿಗೆ ಪೊಲೀಸರು ಫೈರಿಂಗ್ ಮಾಡಿರುವ ಕೊಲೆ ಆರೋಪಿ. ರೌಡಿಶೀಟರ್ ಸಂತೋಷ್ ಆಲಿಯಾಸ್ ಕಣುಮನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನ ಆರೋಪಿಗಳು ಹೊಳಲ್ಕೆರೆ ಡಿವೈಎಸ್ಪಿ ದಿನಕರ್ ಮುಂದೆ ಶರಣಾಗತಿ ಆಗಿದ್ದರು.
ಇದರಲ್ಲಿ ಪ್ರಮುಖ ಆರೋಪಿಯಾದ ಚಾವಳಿ ಸಂತೋಷ್ ಆವರಗೆರೆ ಗ್ರಾಮದ ಬಳಿ ತನ್ನ ಮೊಬೈಲ್ ಬಿಸಾಡಿದ್ದ ಬಗ್ಗೆ ವಿಚಾರಣೆ ವೇಳೆ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಬುಧವಾರ ಚಾವಳಿ ಸಂತೋಷ್ ನನ್ನು ನಗರದ ಆವರಗೆರೆ ಬಳಿ ಮೊಬೈಲ್ ಬಿಸಾಕಿದ್ದ ಸ್ಥಳ ಪಂಚನಾಮೆ ಮಾಡಲು ಕರೆದೊಯ್ಯಲಾಗಿತ್ತು. ಪಂಚನಾಮೆ ಮಾಡಿದ ಮೇಲೆ ಚಾವಳಿ ಸಂತೋಷ್ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ.
ಆಗ ವಿದ್ಯಾನಗರ ಠಾಣೆ ಮುಖ್ಯ ಪೇದೆ ಬೋಜಪ್ಪ ಮತ್ತು ಡಿವೈಎಸ್ಪಿ ಆತನನ್ನು ಹಿಡಿಯಲು ಹೋದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.
ಓಡಬೇಡ ಎಂದು ಹೇಳುವ ಮೂಲಕ ಪೊಲೀಸರು ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ತಪ್ಪಿಸಿಕೊಳ್ಳಲು ಮುಂದಾದಾಗ ನಗರ ಡಿವೈಎಸ್ಪಿ ಶರಣ ಬಸವೇಶ್ವರ ಅವರು ಚಾವಳಿ ಸಂತೋಷ್ ನ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಗಾಯಗೊಂಡಿರುವ ಚಾವಳಿ ಸಂತೋಷ್ ನನ್ನು ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಆರೋಪಿಯ ಹಲ್ಲೆಯಿಂದ ಗಾಯಗೊಂಡಿರುವ ಮುಖ್ಯ ಪೇದೆ ಬೋಜಪ್ಪ ಮತ್ತು ಡಿವೈಎಸ್ಪಿ ಶರಣ ಬಸವೇಶ್ವರ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.