ಮುರುಘಾ ಶ್ರೀ ಜಾಮೀನು ಪ್ರಶ್ನಿಸಿದ್ದ ಅರ್ಜಿ ಪರಿಗಣನೆ

0
11
ಮುರುಘಾ ಶ್ರೀ

ಮೈಸೂರು: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಪೋಕ್ಸೋ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಸಲ್ಲಿಸಲಾಗಿರುವ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರಿಂ ಕೋರ್ಟ್ ಪರಿಗಣಿಸಿದೆ.
ಮೈಸೂರಿನ ಒಡನಾಡಿ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ, ಈ ಕುರಿತು ನಾಲ್ಕು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಸೂಚಿಸಿ ರಾಜ್ಯ ಸರ್ಕಾರ ಮತ್ತು ಸ್ವಾಮೀಜಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಮೂರ್ತಿಗಳಾದ ವಿಕ್ರಂನಾಥ್ ಮತ್ತು ಸತೀಶ್‌ಚಂದ್ರ ಶರ್ಮಾ ಅವರಿದ್ದ ದ್ವಿಸದಸ್ಯ ಪೀಠ ನಿರ್ದೇಶನ ನೀಡಿದೆ.
೨೦೨೨ರ ಆಗಸ್ಟ್ನಲ್ಲಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಠಾಣೆಗೆ ದೂರು ನೀಡಿ, ಶಿವಮೂರ್ತಿ ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆಂದು ಆರೋಪಿಸಿದ್ದರು. ದೂರನ್ನು ಚಿತ್ರದುರ್ಗ ವ್ಯಾಪ್ತಿಯ ಠಾಣೆಗೆ ವರ್ಗಾಯಿಸಲಾಗಿತ್ತು. ಇಲ್ಲಿ ಮತ್ತೊಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು.
ತನಿಖೆ ಬಳಿಕ ಶರಣರನ್ನು ಬಂಧಿಸಲಾಗಿತ್ತು. ಇವರ ವಿರುದ್ಧ ಪೋಕ್ಸೋ, ಎಸ್ಸಿ, ಎಸ್ಟಿ ದೌರ್ಜನ್ಯ ತಡೆ, ಬಾಲನ್ಯಾಯ ಕಾಯ್ದೆಯ ವಿವಿಧ ಕಲಂಗಳಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಚಿತ್ರದುರ್ಗ ಪೊಲೀಸರು ಅಲ್ಲಿನ ಸೆಷನ್ಸ್ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದ ಬಳಿಕ ಸ್ವಾಮೀಜಿ ಹೈಕೋರ್ಟ್ ಮೊರೆ ಹೋಗಿದ್ದರು. ಇಲ್ಲಿನ ಏಕಸದಸ್ಯ ಪೀಠ ಇವರಿಗೆ ಜಾಮೀನು ಮಂಜೂರು ಮಾಡಿತ್ತು. ಸದ್ಯ ಒಡನಾಡಿ ಸಂಸ್ಥೆ ಈ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಒಡನಾಡಿ ಪರ ಹಿರಿಯ ವಕೀಲರಾದ ಅಪರ್ಣಾ ಭಟ್ ಮತ್ತು ಕರಿಷ್ಮಾ ಮಾರಿಯಾ ವಾದ ಮಂಡಿಸಿದ್ದರು.

Previous articleನೀನು ನಿಮ್ಮಕ್ಕ ಅಲ್ಲ ನಮ್ಮಕ್ಕ….
Next articleಇಂದಿನಿಂದ ಸಂಸತ್ ಬಜೆಟ್ ಅಧಿವೇಶನ