ಬಗೆಹರಿಯದ ನೇಕಾರ ಬಿಕ್ಕಟ್ಟು-ಪರಿಹಾರಕ್ಕೆ ಹೆಚ್ಚಿದ ಒತ್ತಡ

0
14

ಬಾಗಲಕೋಟೆ: ರಾಜ್ಯದ ನೇಕಾರರಿಗೆ ನವೆಂಬರ್ ತಿಂಗಳಿನಿಂದ ಪ್ರತಿ 10 ಎಚ್‌ಪಿವರೆಗಿನ ನೇಕಾರರಿಗೆ ಸಂಪೂರ್ಣ ಉಚಿತ ವಿದ್ಯುತ್ ಒದಗಿಸುವಲ್ಲಿ ಸರ್ಕಾರ ಆದೇಶ ಮಾಡಿದ್ದು, ಅದರಂತೆ ಮಾಸಿಕ ಶೂನ್ಯ ಬಿಲ್ ದೊರಕುತ್ತಿರುವದು ಸ್ವಾಗತ. ಕಳೆದ ಏಪ್ರಿಲ್ ತಿಂಗಳಿಂದ ಅಕ್ಟೋಬರ್‌ವರೆಗಿನ ವಿದ್ಯುತ್ ಬಿಲ್ ಕಟ್ಟದೇಯಿರುವ ನೇಕಾರರ ಬಿಲ್ ಸಂಪೂರ್ಣ ಮನ್ನಾಗೊಳಿಸುವಂತೆ ಪಟ್ಟು ಹಿಡಿದಿರುವ ನೇಕಾರರು ಶೀಘ್ರ ಪರಿಹಾರಕ್ಕೆ ಸರ್ಕಾರಕ್ಕೆ ಒತ್ತಡ ಹೇರಿದ್ದಾರೆ. 6-7 ಕೋಟಿ ರೂ.ಗಳಷ್ಟು ಮಾತ್ರ ಬಾಕಿಯಿರುವ ನೇಕಾರರ ಹಣ ಸಂಪೂರ್ಣ ಮನ್ನಾ ಮಾಡುವ ಮೂಲಕ ಈಗಿರುವ ಉಚಿತ ವಿದ್ಯುತ್ ಯೋಜನೆ ಮುಂದುವರೆಸಬೇಕೆಂಬುದು ರಾಜ್ಯದ ನೇಕಾರರ ಬೇಡಿಕೆಯಾಗಿದ್ದು, ಸರ್ಕಾರದ ಹಣಕಾಸು ವಿಭಾಗದಲ್ಲಿ ಈ ಕುರಿತಾದ ವಿಷಯ ಇನ್ನೂ ಚಿಂತನೆಯಲ್ಲಿಯೇ ಇದೆ ಎಂದು ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.
ರಾಜ್ಯದ ಕೆಲ ಭಾಗಗಳಲ್ಲಿ ಇನ್ನೂ ನೇಕಾರರಿಗೆ ಶೂನ್ಯ ಬಿಲ್ ದೊರಕುವಲ್ಲಿ ತಾಂತ್ರಿಕ ದೋಷದಿಂದ ಬಿಲ್ ಕಟ್ಟುವಂತೆ ಹಣ ತೋರಿಸುತ್ತಿರುವದನ್ನು ಸರಿಪಡಿಸಿ ಶೂನ್ಯ ಬಿಲ್ ಒದಗಿಸಬೇಕೆಂದರು.
20 ಎಚ್‌ಪಿ ನೇಕಾರರಿಗೆ ನಿಯಮ ಸಡಿಲಿಸಿ
20 ಎಚ್‌ಪಿವರೆಗಿನ ನೇಕಾರರ ಮಾಲಿಕರಿಗೆ 1.25 ರೂ. ಪ್ರತಿ ಯೂನಿಟ್‌ಗೆ ವಿದ್ಯುತ್‌ನ್ನು 500 ಯುನಿಟ್‌ಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಪ್ರಸಕ್ತ 20 ಎಚ್‌ಪಿವರೆಗಿನ ಮಗ್ಗಗಳು 3 ಸಾವಿರ ಯುನಿಟ್‌ಗಳನ್ನು ಬಳಸುತ್ತಿವೆ. 500 ಯುನಿಟ್ ಮೇಲ್ಪಟ್ಟ ಪ್ರತಿ ಯುನಿಟ್‌ಗೆ 7-8 ರೂ.ಗಳವರೆಗಿನ ಆಕರಣೆ ನೇಕಾರರಿಗೆ ಹೊರೆಯಾಗುವಲ್ಲಿ ಕಾರಣವಾಗಿದ್ದು, ಯಾವುದೇ ನಿರ್ಬಂಧವಿಲ್ಲದೆ ಪ್ರತಿ ಯುನಿಟ್‌ಗೆ 1.25 ರೂ. ದರದಂತೆ ಆಕರಣೆ ಮಾಡಬೇಕೆಂಬುದು ನೇಕಾರರ ಆಗ್ರಹವಾಗಿದೆ.
`ಏಪ್ರಿಲ್‌ದಿಂದ ಅಕ್ಟೋಬರ್‌ವರೆಗಿನ ಬಾಕಿ ಬಿಲ್ ತುಂಬುವಲ್ಲಿ ನೇಕಾರರು ತಾರತಮ್ಯವೆಸಗುತ್ತಿದ್ದು, ದುಬಾರಿ ಬಿಲ್‌ಗೆ ವಿರೋಧ ವ್ಯಕ್ತವಾಗಿದೆ. ಪ್ರತಿ ಯೂನಿಟ್‌ಗೆ ಎಫ್‌ಎಸಿ ರೂ. 2.55, ಕನಿಷ್ಠ ಶುಲ್ಕ ರೂ. 140 ಹಾಗೂ ಜಿಎಸ್‌ಟಿ ವಿನಾಯಿತಿ ನೀಡುವ ಮೂಲಕ ಏಕರೂಪ ದರದಲ್ಲಿ ಯುನಿಟ್‌ಗೆ 1.25 ರೂ.ದಂತೆ ಆಕರಣೆ ಮಾಡಿದ್ದಲ್ಲಿ ವಿದ್ಯುತ್ ಶುಲ್ಕ ತುಂಬುವಲ್ಲಿ ನೇಕಾರರ ಬೆಂಬಲವಿದೆ.’

Previous articleಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ
Next articleಮದುವೆ ಆಮಂತ್ರಣದಲ್ಲಿ ಮೋದಿ ಪರ ಪ್ರಚಾರ