ಬೆಂಗಳೂರು: ಸಾರಿಗೆ ನೌಕರರ ಹೆಸರಿನಲ್ಲಿ ಜಮೆ ಮಾಡಬೇಕಾದ ಸುಮಾರು 2800 ಕೋಟಿ ರೂಪಾಯಿ ಭವಿಷ್ಯ ನಿಧಿ ಹಣ ಪಾವತಿಸಲಾಗದೆ ಬಾಕಿ ಉಳಿಸಿಕೊಂಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಸಾರಿಗೆ ನೌಕರರ ಭವಿಷ್ಯವನ್ನ ಕತ್ತಲೆಗೆ ದೂಡುತ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸಾರಿಗೆ ನಿಗಮಗಳು ದಿವಾಳಿ!, ಸಿಎಂ ಸಿದ್ದರಾಮಯ್ಯನವರೇ, ತಮ್ಮ ಸರ್ಕಾರದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ, ಸಾರಿಗೆ ನೌಕರರ ಪಿಎಫ್ ಹಣ ಯಾಕೆ ಬಾಕಿ ಉಳಿಸಿಕೊಂಡಿದ್ದೀರಿ? ನಿವೃತ್ತ ನೌಕರರ ಹಿಂಬಾಕಿ ಪಾವತಿಸದೆ ಯಾಕೆ ವಿಳಂಬ ಮಾಡುತ್ತಿದ್ದೀರಿ? ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಬಗ್ಗೆ ಈ ಕೊಡಲೇ ಶ್ವೇತ ಪತ್ರ ಹೊರಡಿಸಿ ಸತ್ಯಾಂಶವನ್ನ ಜನರ ಮುಂದಿಡಿ. ಮುಷ್ಕರ ಕೈಗೊಳ್ಳಲು ಹೊರಟಿರುವ ಸಾರಿಗೆ ಸಿಬ್ಬಂದಿಗಳ ಬೇಡಿಕೆ ಈಡೇರಿಸಿ ಮುಷ್ಕರ ನಡೆಸದಂತೆ ಮನವೊಲಿಸಿ ಎಂದಿದ್ದಾರೆ.