ತಮ್ಮ ಮಕ್ಕಳನ್ನು ಉಳಿಸಿಕೊಳ್ಳಲು ಸರ್ಕಾರವನ್ನು ಗುರಿಯಾಗಿಸಿದ್ದಾರೆ

0
13

ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್‌ ನ ಮುಖಂಡರು ತಮ್ಮ ಮಕ್ಕಳನ್ನು ಉಳಿಸಿಕೊಳ್ಳಲು ನಮ್ಮ ಚುನಾಯಿತ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಸಚಿವರೊಂದಿಗಿನ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ–ಜೆಡಿಎಸ್‌ ಪಕ್ಷಗಳ ಪಿತೂರಿಗೆ ನಾವು ಜಗ್ಗುವುದಿಲ್ಲ. ನಾವು ಜನರ ಬಳಿಗೆ ಹೋಗುತ್ತೇವೆ. ಅವರಿಗೆ ವಾಸ್ತವಾಂಶ ವಿವರಿಸುತ್ತೇವೆ. ಒಗ್ಗಟ್ಟಿನಿಂದ ಹೋರಾಡುತ್ತೇವೆ. ಕರ್ನಾಟಕದ ರಾಜಕಾರಣದಲ್ಲಿ ನಡೆಯುತ್ತಿರುವ ಗಂಭೀರ ಬೆಳವಣಿಗೆಗಳ ಕುರಿತು ರಾಜ್ಯದ ಸಚಿವರೊಂದಿಗೆ ಚರ್ಚಿಸಲಾಯಿತು. ಕರ್ನಾಟಕ ರಾಜ್ಯ ಬಿಜೆಪಿಯು ಸರ್ಕಾರಗಳನ್ನು ಉರುಳಿಸುವ ಇತಿಹಾಸವನ್ನು ಹೊಂದಿದೆ. ಕೇಂದ್ರ ನಾಯಕರ ಪಿತೂರಿಯಿಂದ 2018ರಲ್ಲಿ ಕಾಂಗ್ರೆಸ್- ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಉರುಳಿಸಿದ್ದೇ ಕರ್ನಾಟಕ ಬಿಜೆಪಿ. ಅದೇ ರೀತಿಯ ಸ್ಪಷ್ಟ ಉದ್ದೇಶದಿಂದ ಈಗಲೂ ಕರ್ನಾಟಕ ಕಾಂಗ್ರೆಸ್‌ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ.
ತಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಈ ಕೆಲಸ ಮಾಡುತ್ತಿದ್ದಾರೆ. ಪ್ರಜ್ವಲ್‌ ರೇವಣ್ಣ ಪ್ರಕರಣ ಬೆಳಕಿಗೆ ಬಂದಾಗಲೇ ಇಡೀ ದೇಶ ಕಾಂಗ್ರೆಸ್‌ ಸರ್ಕಾರದ ವಿರುದ್ಧದ ಪಿತೂರಿಯನ್ನು ಗಮನಿಸಿದೆ. ಬಿಜೆಪಿ ಹಾಗೂ ಜೆಡಿಎಸ್‌ ನ ಮುಖಂಡರು ತಮ್ಮ ಮಕ್ಕಳನ್ನು ಉಳಿಸಿಕೊಳ್ಳಲು ನಮ್ಮ ಚುನಾಯಿತ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ. ಎಲ್ಲರಿಗೂ ಸಿದ್ದರಾಮಯ್ಯನವರ ಪ್ರಾಮಾಣಿಕತೆಯ ಅರಿವಿದೆ. ಅವರು ಮುಖ್ಯಮಂತ್ರಿ ಪದವಿಗೆ ಹೊಸಬರಲ್ಲ. ಅವರ ರಾಜಕೀಯ ಬದುಕು, ತತ್ವ ಸಿದ್ಧಾಂತ, ಹಿನ್ನೆಲೆ, ಅವರು ಹಿಂದೆ ಹೇಗಿದ್ದರು, ಈಗ ಹೇಗಿದ್ದಾರೆ ಎಂಬುದು ಕರ್ನಾಟಕದ ಜನತೆಗೆ ಚೆನ್ನಾಗಿ ತಿಳಿದಿದೆ.

ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಬಡವರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಬಿಜೆಪಿ ಮತ್ತು ಜೆಡಿಎಸ್‌ ನವರಿಗೆ ಇದು ರಾಜಕೀಯವಾಗಿ ನಷ್ಟ ಉಂಟು ಮಾಡುತ್ತದೆ ಹಾಗೂ ವಿವಿಧ ಪ್ರಕರಣಗಳ ತನಿಖೆಯಿಂದ ವೈಯಕ್ತಿಕವಾಗಿಯೂ ಅವರಿಗೆ ತೊಂದರೆಯಾಗಲಿದೆ ಎಂಬುದು ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ವಿರುದ್ಧ ಕೆಲವು ಆರೋಪಗಳನ್ನು ಮಾಡುವ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ ನಡೆಸಿದ್ದಾರೆ. ದುರದೃಷ್ಟವಶಾತ್‌ ರಾಜ್ಯದ ರಾಜ್ಯಪಾಲರು ಬಿಜೆಪಿ ಪಿತೂರಿಯ ಸಾಧನವಾಗಿದ್ದಾರೆ. ಮುಖ್ಯಮಂತ್ರಿಯವರಿಗೆ ಕಾರಣ ಕೇಳಿ ನೋಟೀಸ್‌ ನೀಡುವ ಮೂಲಕ ಸರ್ಕಾರ ಅಸ್ಥಿರಗೊಳ್ಳಲಿದೆ ಎಂಬ ಭಾವನೆ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್‌ ಪಕ್ಷವು ಈ ಪಿತೂರಿ ವಿರುದ್ಧ ಹೋರಾಡಲು ತೀರ್ಮಾನಿಸಿದ್ದು, ಕರ್ನಾಟಕದ ಜನತೆಗೆ ವಾಸ್ತವಾಂಶದ ಅರಿವು ಮೂಡಿಸಲು ನಿರ್ಧರಿಸಿದೆ. ಸಚಿವರು, ಶಾಸಕರು ಜಿಲ್ಲೆ, ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಜನರಿಗೆ ಸರ್ಕಾರದ ಸಾಧನೆಗಳನ್ನು ವಿವರಿಸಿ, ಗ್ಯಾರಂಟಿ ಯೋಜನೆಗಳನ್ನು ಮುಗಿಸುವ ಬಿಜೆಪಿ-ಜೆಡಿಎಸ್‌ ನ ಹುನ್ನಾರವನ್ನು ಬಯಲಿಗೆಳೆಯಲಾಗುವುದು.

ಇದಕ್ಕಾಗಿ ಇಂದು ಸಭೆ ನಡೆಸಿದ್ದು, ರಾಜ್ಯದ ಬಡಜನರ ಕುರಿತು ಕಾಂಗ್ರೆಸ್‌ ಸರ್ಕಾರಕ್ಕೆ ಅತೀವ ಕಾಳಜಿ ಇದ್ದು, ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಲಾಗುವುದು. ಈ ಯೋಜನೆಗಳ ಕುರಿತು ನಮಗೆ ಹೆಮ್ಮೆ ಇದೆ. ಬಿಜೆಪಿ ಭ್ರಷ್ಟಾಚಾರದ ಕುರಿತು ಮಾತನಾಡುತ್ತಿರುವುದು ಅತ್ಯಂತ ಹಾಸ್ಯಾಸ್ಪದ. ಬಿ ವೈ ವಿಜಯೇಂದ್ರ ಅವರ ಮೇಲೆ ಎಷ್ಟು ಆರೋಪಗಳಿವೆ? ಪ್ರಜ್ವಲ್‌ ರೇವಣ್ಣ ವಿರುದ್ಧ ಎಷ್ಟು ಆರೋಪಗಳಿವೆ? ಅಂಥವರು ತಾವೇ ಅತ್ಯಂತ ಸಭ್ಯರೆಂಬ ಸೋಗಿನಲ್ಲಿ ತಮ್ಮ ರಾಜಕೀಯ ಜೀವನದುದ್ದಕ್ಕೂ ಜನಪರ ಕಾಳಜಿ ಹೊಂದಿದ ರಾಜ್ಯದ ಮುಖ್ಯಮಂತ್ರಿ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ರಾಜ್ಯದ ಬಡ ಜನರ ಜೊತೆ ನಿಂತ ಮುಖ್ಯಮಂತ್ರಿಯವರನ್ನು ಮುಗಿಸಲು ಮುಂದಾಗಿದ್ದಾರೆ. ಆರೋಪಗಳ ಕುರಿತು ಕಾನೂನು ತನ್ನದೇ ಕ್ರಮ ವಹಿಸಲಿದೆ. ಈ ಬಗ್ಗೆ ನಮಗೆ ಯಾವುದೇ ಅಳುಕಿಲ್ಲ. ನಿಜವಾಗಿಯೂ ಸಮಸ್ಯೆ ಇದ್ದರೆ ಕಾನೂನಿನ ಮೊರೆ ಹೋಗಲಿ. ಅದರ ಬದಲಾಗಿ ಪ್ರತಿದಿನ ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವುದು ಸರಿಯಲ್ಲ. ಬಿಜೆಪಿಯವರು ಗ್ಯಾರಂಟಿ ಯೋಜನೆಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಬಡವರ ಪರವಾಗಿದೆ ಎಂದು ಬಿಜೆಪಿ ಅವರಿಗೂ ಗೊತ್ತಿದೆ. ಕರ್ನಾಟಕದಲ್ಲಿ ಹಿಂದಿನ ಚುನಾವಣೆಯು ಬಡವರು-ಶ್ರೀಮಂತರ ನಡುವೆ ಇತ್ತು. ಆದ್ದರಿಂದಲೇ 135 ಸೀಟುಗಳೊಂದಿಗೆ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದ್ದೇವೆ.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡಿರುವ ತಾರತಮ್ಯ ಕುರಿತು ಯಾರೂ ಮಾತನಾಡುತ್ತಿಲ್ಲ. ನಿರ್ಮಲಾ ಸೋತಾರಾಮನ ಅವರು ಇಲ್ಲಿಂದಲೇ ಆಯ್ಕೆಯಾಗಿದ್ದರೂ ಯಾವುದೇ ನೆರವು ಒದಗಿಸಿಲ್ಲ. ಸೀಮಿತ ಸಂಪನ್ಮೂಲದೊಂದಿಗೆ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ ಬೆಂಬಲ ನೀಡುವ ಬದಲಿಗೆ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ನಾವು ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದರು.

Previous articleನಿಶ್ಚಿಂತೆಗಾಗಿ ದೇವರಿಗೆ ಭಾರ ಹಾಕಿ
Next articleಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಆತ್ಮಹತ್ಯೆ