ಯಲಬುರ್ಗಾ: ತಾಲೂಕಿನ ಹಿರೇಮ್ಯಾಗೇರಿ ಗ್ರಾಪಂ ಕಚೇರಿಯಲ್ಲೇ ಪಿಡಿಒ ಮೇಲೆ ಗ್ರಾಪಂ ಸದಸ್ಯೆ ಹಲ್ಲೆ ಮಾಡಿರುವ ಘಟನೆ ಹಿನ್ನೆಲೆ, ಸದಸ್ಯತ್ವ ರದ್ದು ಮಾಡಲು ಕೊಪ್ಪಳ ಜಿಪಂ ಸಿಇಒ, ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಪಿಡಿಒ ರತ್ನಮ್ಮ ಗುಂಡಣ್ಣವರ ಅವರ ಮೇಲೆ ಕಳೆದ ಮಾ. 27 ರಂದು ಗ್ರಾಪಂ ಸದಸ್ಯೆ ಶಾಂತಮ್ಮ ಬಂಡಿವಡ್ಡರ ಹಲ್ಲೆ ಮಾಡಿದ್ದರು. ಘಟನೆ ಬಗ್ಗೆ ಸರಕಾರಿ ನೌಕರರು ಮತ್ತು ಪಂಚಾಯತ್ ರಾಜ್ ನೌಕರರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬೇರೆ ಬೇರೆ ಸಂಘಟನೆಗಳು ಎಲ್ಲೆಡೆ ಹೋರಾಟ ಮಾಡಿ, ಸದಸ್ಯತ್ವ ರದ್ದು ಮಾಡುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆ ಕೊಪ್ಪಳ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ.
ಕಾರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43 (ಎ) 1(1) ರಡಿ ಕ್ರಮ ಜರುಗಿಸಬೇಕು ಎಂದು ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಹಲ್ಲೆಗೆ ಒಳಗಾದ ಪಿಡಿಒ ರತ್ನಮ್ಮ ಗುಂಡಣ್ಣವರ ಅವರ ಮನವಿ, ಯಲಬುರ್ಗಾ ಪಿಎಸ್‌ಐ ಅವರು ದಾಖಲಿಸಿರುವ ಎಫ್‌ಐಆರ್, ಹಲ್ಲೆ ಮಾಡಿರುವ ದೃಶ್ಯ ಸೆರೆ ಆಗಿರುವ ಸಿಸಿ ಕ್ಯಾಮೆರಾ ಫುಟೇಜ್ ಮತ್ತು ನಾನಾ ಸಂಘಟನೆಗಳು ಸದಸ್ಯತ್ವ ರದ್ದು ಮಾಡುವಂತೆ ಸಲ್ಲಿಸಿರುವ ಮನವಿ ಉಲ್ಲೇಖಿಸಿ, ಜಿಪಂ ಸಿಇಒ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಾದೇಶಿಕ ಆಯುಕ್ತರು ಸಂಬಂಧಿಸಿದ ಆರೋಪಿತರಿಗೆ ನೊಟೀಸ್ ಜಾರಿ ಮಾಡಿ, ಮುಂದಿನ ಕ್ರಮ ಜರುಗಿಸಲಿದ್ದಾರೆ