ಕಾಂಗ್ರೆಸ್ ಹಗಲುಸುಳ್ಳು ಹೇಳುವ ಸರ್ಕಾರ

0
41

ದಾವಣಗೆರೆ: ರಾಜ್ಯದ ಕಾಂಗ್ರೆಸ್ ಸರ್ಕಾರ ಕರ್ನಾಟಕ ಆರ್ಥಿಕವಾಗಿ ಸದೃಢವಾಗಿದೆ ಎಂದು ರಾಜ್ಯಪಾಲರ ಮುಂದೆ ಭಾಷಣದ ವೇಳೆ ಅವರಿಂದ ಸುಳ್ಳು ಹೇಳಿಸಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆರೋಪಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇವಲ ಚುನಾವಣೆ ಗೆಲ್ಲುವ ಇರಾದೆಯಿಂದ ರಾಜ್ಯವನ್ನು ಆರ್ಥಿಕವಾಗಿ ಕುಸಿಯುವಂತೆ ಮಾಡಿರುವ ಅಪಕೀರ್ತಿ ಸಿಎಂ ಸಿದ್ಧರಾಮಯ್ಯ ಅವರಿಗೆ ಸಲ್ಲುತ್ತದೆ. ಹಾಗಿದ್ದರೂ ಆರ್ಥಿಕವಾಗಿ ರಾಜ್ಯ ಸದೃಢವಾಗಿದೆ ಎಂದು ರಾಜ್ಯಪಾಲರಿಂದ ಸುಳ್ಳು ಭಾಷಣ ಮಾಡಿಸುವ ಇದೊಂದು ಹಗಲುಸುಳ್ಳು ಹೇಳುವ ಸರ್ಕಾರ ಎಂದು ಟೀಕಿಸಿದರು.

ಯಾವುದೇ ರಾಜ್ಯ ಸರ್ಕಾರ ವಿತ್ತೀಯ ಹೊಣೆಗಾರಿಕೆ ಅಧಿನಿಯಮವನ್ನು ಅನುಸರಿಸುತ್ತದೆ ಎಂದರೆ ಆಗ ಅದು ಆರ್ಥಿಕವಾಗಿ ಸದೃಢತೆ ಹೊಂದಿದೆ ಎನ್ನಬಹುದು. ಆದರೆ, ಸಿಎಂ ಸಿದ್ಧರಾಮ್ಯಯ್ಯ ನೇತೃತ್ವದ ಈ ಸರ್ಕಾರ ವೇತನ ನೀಡಲು ಕೂಡ ಸಾಲ ಮಾಡುತ್ತಿದೆ. ವೇತನ ನೀಡಲು ಕೂಡ ಸಾಲ ಮಾಡುತ್ತಿದೆ ಎಂದರೆ ಆ ಸರ್ಕಾರ ದಿವಾಳಿಯಾಗಿದೆ ಅಂತರ್ಥ ಎಂದರು.

ರಾಜ್ಯ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ. ಸಿದ್ಧರಾಮಯ್ಯ ಸುಳ್ಳು ಹೇಳಿ ಅಧಿಕಾರ ನಡೆಸುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಅರುಣಾಚಲ ಪ್ರದೇಶಕ್ಕಾದ ಗತಿಯೇ ಕರ್ನಾಟಕಕ್ಕೂ ಆಗುವ ಸಂಭವವಿದೆ. ಈ ಸರ್ಕಾರ ಮುಂದೆ ದೇವರ ಹುಂಡಿಗಳಲ್ಲಿರುವ ಕಾಣಿಕೆಯನ್ನೂ ಬಿಡದೆ ಸರ್ಕಾರ ನಡೆಸಲು ಹಣ ಹೊಂದಿಸುತ್ತದೆ ಎಂದು ಭವಿಷ್ಯ ನುಡಿದರು.

Previous articleವಿಧಾನಸೌಧದೊಳಗೆ ಪಾನ್ ಮಸಾಲ ಉಗುಳಿದ ಶಾಸಕ
Next articleಸಿಂಹದ ಮರಿಯೊಂದಿಗೆ ಪ್ರಧಾನಿ