ಕಲಬುರಗಿಯಲ್ಲಿ ಕಕ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ

0
238


ಕಲಬುರಗಿ: ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಸಡಗರ ಸಂಭ್ರಮ‌ ಮನೆ ಮಾಡಿದರೆ, ಕಲಬುರಗಿಯಲ್ಲಿ ಮತ್ತೆ ಪ್ರತ್ಯೇಕ ರಾಜ್ಯದ ಕೂಗು ಮೊಳಗಿತು. ಅಲ್ಲದೆ ತೆಲಂಗಾಣ ಮಾದರಿ ಪ್ರತ್ಯೇಕ ರಾಜ್ಯ ಹೋರಾಟ ಆರಂಭಿಸುತ್ತೇವೆ ಎಂದು ಹೋರಾಟಗಾರರು ಗುಡುಗುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.
ಅಭಿವೃದ್ಧಿ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿರುವುದರಿಂದ ಆಕ್ರೋಶಗೊಂಡ ಹೋರಾಟಗಾರರು ‘ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ’ಕ್ಕೆ ಆಗ್ರಹಿಸಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಿದರು.
ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯಿಂದ ಪದಾಧಿಕಾರಿಗಳು ಸದಸ್ಯರು ನಗರದ ಕೋರ್ಟ್ ಸರ್ಕಲ್ ಬಳಿ ಜಮಾಗೊಂಡು ಪ್ರತ್ಯೇಕ ರಾಜ್ಯದ ಬಾವುಟದೊಂದಿಗೆ ಎಂ.ಎಸ್.ಪಾಟೀಲ್ ನರಿಬೋಳ ನೇತೃತ್ವದಲ್ಲಿ ಮೆರವಣಿಗೆ ಹೊರಟರು.
ಸರದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ತೆರಳಿ ಅಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ಧ್ವಜಾರೋಹಣ ಮಾಡಲು ಹೋಗುತ್ತಿದ್ದವರನ್ನು ಪೊಲೀಸರು ಯುನೈಟೆಡ್ ಆಸ್ಪತ್ರೆಯ ಬಳಿ ತಡೆದು ನಿಲ್ಲಿಸಿದರು. ಮಾರ್ಗ ಮಧ್ಯದಲ್ಲಿ ೨0 ಕ್ಕೂ ಹೆಚ್ಚು ಜನ ಹೋರಾಟಗಾರರನ್ನು ಪೊಲೀಸರು ಬಂಧಿಸಿ ವಾಹನದಲ್ಲಿ‌ ಕರೆದುಕೊಂಡು ಹೋದರು.
ಸಮಿತಿ ಅಧ್ಯಕ್ಷ ಎಂ.ಎಸ್ .ಪಾಟೀಲ್, ಮುಖಂಡರಾದ ಉದಯಕುಮಾರ ಜೇವರ್ಗಿ, ವಿನೋದಕುಮಾರ ಜೇನೆವರಿ , ಲಕ್ಷ್ಮೀ ಕಾಂತ ಸ್ಚಾದಿ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.
ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು.

Previous articleಇಳಕಲ್ ಗೆ ಮೂರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು
Next articleಮನಸ್ಸು ಒಂದಾಗಿರುವಾಗ ಸಮ ಬದುಕು ಕಷ್ಟವೇನಲ್ಲ