ಕರ್ನಲ್ ಸೋಫಿಯಾ ಖುರೇಷಿ ಮನೆ ಧ್ವಂಸ: ವದಂತಿ ಹರಡಿದ್ದು ಕೆನಡಾದ ಕಿಡಿಗೇಡಿ

0
20

ಬೆಳಗಾವಿ: ಕರ್ನಲ್ ಸೋಫಿಯಾ ಖುರೇಷಿ ಅವರ ಪತಿ ಮನೆ ಧ್ವಂಸ ಮಾಡಲಾಗಿದೆ ಎಂಬ ಸುಳ್ಳು ಸುದ್ದಿ ಹರಡಿದ್ದ ಕಿಡಿಗೇಡಿ ಕೆನಡಾ ದೇಶದವನಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಸೋಫಿಯಾ ಖುರೇಷಿಯವರ ಮಾವನ ಮನೆಯಿದ್ದು, ಆ ಮನೆಯ ಮೇಲೆ ಆರ್‌ಎಸ್‌ಎಸ್ ಬೆಂಬಲಿತ ಹಿಂದೂಗಳು ದಾಳಿ ಮಾಡಿ ಮನೆ ಧ್ವಂಸ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕಿಡಿಗೇಡಿ ಉದ್ಧಟತನ ಮೆರದಿದ್ದ. ಅನಿಸ್ ಉದ್ದೀನ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು ನನ್ನ ಗಮನಕ್ಕೆ ಬರುತ್ತಿದ್ದಂತೆಯೇ ಇದೊಂದು ಸುಳ್ಳು ಸುದ್ದಿ ಎಂದು ನಾನು ಕಮೆಂಟ್ ಮಾಡಿದ್ದೆ. ಈ ಕಮೆಂಟ್ ನೋಡಿದ ತಕ್ಷಣ ಆತ ಆ ಪೋಸ್ಟ್‌ ಡಿಲಿಟ್ ಮಾಡಿದ್ದಾನೆ ಎಂದರು.
ಅಲ್ಲದೇ, ಈ ರೀತಿ ಸುದ್ದಿ ಹರಡಿ ಗೊಂದಲಕ್ಕೆ ಕಾರಣನಾದ ಈ ಕಿಡಿಗೇಡಿ, ಕೆನಡಾದಲ್ಲಿ ಇರುವುದು ಗೊತ್ತಾಗಿದೆ. ಆತನ ಬಗ್ಗೆ ತನಿಖೆ ನಡೆಯುತ್ತಿದೆ. ಆತ ಭಾರತೀಯ ಮೂಲದವನಾಗಿದ್ದರೆ ಕೂಡಲೇ ಆತನ ವಿರುದ್ಧ ಎಫ್‌ಐಆರ್ ಮಾಡುತ್ತೇವೆ. ಆದರೆ, ಆತ ವಿದೇಶದವನಾಗಿದ್ದರಿಂದ ಈವರೆಗೂ ಎಫ್‌ಐಆರ್ ದಾಖಲು ಮಾಡಿಲ್ಲ ಎಂದು ಡಾ.ಭೀಮಾಶಂಕರ ಗುಳೇದ ಸ್ಪಷ್ಟಪಡಿಸಿದರು.
ಒಟ್ಟಾರೆಯಾಗಿ, ಈ ಸುಳ್ಳು ಸುದ್ದಿ ಹಿನ್ನೆಲೆಯಲ್ಲಿ ನಮ್ಮ ಪೊಲೀಸರನ್ನು ಖುರೇಷಿ ಅವರ ಮನೆಗೆ ಕಳುಹಿಸಿ, ಕುಟುಂಬಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಿ, ಎಚ್ಚರದಿಂದ ಇರುವಂತೆ ಮನವಿ ಮಾಡಿದ್ದೇವೆ. ಅವರ ಕುಟಂಬಕ್ಕೆ ಭದ್ರತೆಯನ್ನು ಒದಗಿಸಿದ್ದೇವೆ ಎಂದು ತಿಳಿಸಿದರು. ಇದೇ ರೀತಿ ಕರ್ನಲ್ ಸೋಫಿಯಾ ಖುರೇಷಿ ಅವರ ಕುಟುಂಬದ ವಿರುದ್ಧ ಸುಳ್ಳು ಸುದ್ದಿ ಹರಡಿದರೆ ಅಂತಹವರ ವಿರುದ್ಧ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಸಾಮಾಜಿಕ ಮಾಧ್ಯಮಗಳ ಮೇಲೆ ಸೈಬರ್ ಪೊಲೀಸರು ಕಣ್ಣಿಟ್ಟಿರುವುದಾಗಿ ಎಚ್ಚರಿಕೆ ನೀಡಿದರು.

Previous articleಪ್ರೊ. ಎಸ್. ಬಾಲಚಂದ್ರರಾವ್ ನಿಧನ
Next articleಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಮೂವರು ಆರೋಪಿಗಳ ಸೆರೆ