ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘ ನಾಡು ನುಡಿಗಾಗಿ ಶ್ರಮಿಸುತ್ತ, ಕನ್ನಡ ಕಟ್ಟಿದ ಸಂಸ್ಥೆ. ಇಂತಹ ಸಂಸ್ಥೆಗೆ ರಾಜ್ಯ ಸರ್ಕಾರ ಆದ್ಯತೆಯನುಸಾರ ಅನುದಾನ ದೊರಕಿಸಿ ಕನ್ನಡಪರ ಚಟುವಟಿಕೆಗೆ ಬೆಂಬಲಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಚಂದ್ರಕಾಂತ ಬೆಲ್ಲದ ಒತ್ತಾಯಿಸಿದರು.
ಪುನರಾಯ್ಕೆಯಾಗುತ್ತಿದ್ದಂತೆಯೇ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ಅನುದಾನ ತರುವ ಪ್ರಯತ್ನ ಸಂಘ ನಿರಂತರವಾಗಿ ಮಾಡಿಕೊಂಡು ಬಂದಿದೆ. ಆದರೆ, ಸರ್ಕಾರ ಪೂರಕವಾಗಿ ಸ್ಪಂದಿಸಬೇಕು. ಕೇಳುವುದಕ್ಕಿಂತ ಮುಂಚೆಯೇ ಕರ್ನಾಟಕದ ಹೆಮ್ಮೆಯ ಸಂಸ್ಥೆಗೆ ತಾನೇ ಅನುದಾನ ದೊರಕಿಸಬೇಕು ಎಂದು ಆಶಿಸುತ್ತೇನೆ ಎಂದು ಹೇಳಿದರು.
ಬೆಮಬಲಿಗರ ಪ್ರೀತಿ , ವಿಶ್ವಾಸ, ಮಾಡಿದ ಕಾರ್ಯಚಟುವಟಿಕೆಗಳು ಸಂಘಕ್ಕೆ ಪುನರಾಯ್ಕೆಯಾಗುವಲ್ಲಿ ಮಹತ್ವದ ಪಾತ್ರವಹಿಸಿದೆ. ನನ್ನನ್ನು ಬೆಂಬಲಿಸಿ ಪ್ರೀತಿ ತೋರಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಚುನಾವಣೆ ಎಂದ ಮೇಲೆ ಪ್ರತಿಸ್ಪರ್ಧಿಗಳು ಸಹಜ. ಹಾಗೆಯೇ ಸೋಲು ಗೆಲುವು ಇರುತ್ತದೆ. ಅರ್ಹರನ್ನು ಗುರುತಿಸಿ ಆಯ್ಕೆ ಮಾಡುವ ಸ್ವಾತಂತ್ರ್ಯ ಸದಸ್ಯರಿಗೆ ಇರುತ್ತದೆ. ಸದಸ್ಯರು ನನ್ನನ್ನು ಗುರುತಿಸಿ ಪುನರಾಯ್ಕೆ ಮಾಡಿದ್ದಾರೆ ಎಂದು ಹೇಳಿದರು.