ಉತ್ತಮ ಸಾಧನೆಯಿಂದ ಉತ್ತಮ ಖ್ಯಾತಿ

0
12

ಉತ್ತಮಾಃ ಆತ್ಮನಾಃ ಖ್ಯಾತಾಃ' ಎಂಬುದಾಗಿ ಒಂದು ಸುಭಾಷಿತ ಹೇಳುತ್ತದೆ. ತನ್ನ ಸಾಧನೆಯಿಂದಲೇ ಖ್ಯಾತಿಯನ್ನು ಗಳಿಸಿದವರು ಉತ್ತಮರೆನಿಸುತ್ತಾರೆ. ಒಳ್ಳೆಯ ಸಾಧನೆಯಿಂದ ಬರುವ ಕೀರ್ತಿಯೇ ಖ್ಯಾತಿ. ಆ ಸಾಧನೆ ಕೆಲವೊಮ್ಮೆ ಪೂರ್ವಜರಿಂದ ಆಗಿದ್ದರೆ ಅದರಿಂದಲೂ ಒಂದು ವಿಧದ ಖ್ಯಾತಿ ಇರುತ್ತದೆ. ತನ್ನ ಮಗ ಅಥವಾ ಪತ್ನಿಯಿಂದ ಒಳ್ಳೆಯ ಸಾಧನೆಗಳಾಗಿದ್ದರಿಂದ ತನಗೆ ಒಂದು ರೀತಿಯ ಖ್ಯಾತಿ ಬರುವುದುಂಟು. ಇಂತಹ ಖ್ಯಾತಿಗಳಿಗಿಂತ ತನ್ನ ಸಾಧನೆಯ ಬಲದಿಂದಲೇ ಬಂದ ಖ್ಯಾತಿ ಶ್ರೇಷ್ಠವಾದದ್ದು. ಯಾಕೆಂದರೆ ಬೇರೆಯವರ ಸಾಧನೆಯಿಂದ ಬಂದ ಖ್ಯಾತಿ ಎಷ್ಟೆಂದರೂ ಅದು ತನ್ನದ್ದಲ್ಲ. ಉದಾಹರಣೆಗೆ ತಂದೆ ಉತ್ತಮವಾದ ಚಿತ್ರಕಾರನೆಂಬ ಖ್ಯಾತಿ ಪಡೆದಿದ್ದರೆ ಮಗನೂ ಚಿತ್ರಕಾರನಾಗಿದ್ದರೂ ಖ್ಯಾತಿ ತಂದೆಯಿಂದ ಪಡೆದಿದ್ದೆ? ತಂದೆಯ ಸಾಧನೆಗಿಂತಲೂ ಹೆಚ್ಚಿನ ಸಾಧನೆ ಮಾಡಿದರೆ ಮಾತ್ರವೇ ಆಗ ಮಗನ ಖ್ಯಾತಿ ನಿಜವಾಗುತ್ತದೆ. ತಂದೆಗಿಂತ ಕಡಿಮೆ ಸಾಧನೆ ಇರುವಾಗಲೇ ಖ್ಯಾತಿ ಬಂದರೆ ಆ ಸಾಧನೆಯಲ್ಲಿ ಎಲ್ಲೋ ಟೊಳ್ಳುತನ, ಅಂದರೆ ಗಟ್ಟಿತನದ ಕೊರತೆ ಬಹುತೇಕ ಇರುತ್ತದೆ. ಆದ್ದರಿಂದ ತನ್ನದೇ ಆದ ಗಟ್ಟಿಯಾದ ಸಾಧನೆಯಿಂದ ಬಂದ ಖ್ಯಾತಿಯೇ ನಿಜವಾದ ಖ್ಯಾತಿ. ಪರಿಸ್ಥಿತಿಯ ಅನುಕೂಲತೆ ಇಲ್ಲದಿದ್ದಾಗ ಅಥವಾ ವಿಘ್ನಗಳಿರುವ ಸಾಧನೆ ಗಟ್ಟಿಯಾದರೆ ಅದು ಹೆಚ್ಚು ಶ್ರೇಷ್ಠ. ಯಾಕೆಂದರೆ ಆ ವಿಘ್ನಗಳನ್ನು ಗೆಲ್ಲಲು ಒಂದು ವಿಧದ ಆತ್ಮಶಕ್ತಿ ಬೇಕಾಗುತ್ತದೆ.ದೈವಂ ನಿಹತ್ಯ ಕುರು ಪೌರುಷಂ ಆತ್ಮ ಆತ್ಮ ಶಕ್ತಾಯ’. ತನ್ನ ದುರದೃಷ್ಟದಿಂದ ಅಥವಾ ಬೇರೆ ಬೇರೆ ಕಾರಣಗಳಿಂದ ಎದುರಾಗುವ ವಿಘ್ನಗಳನ್ನು ತನ್ನ ಸಂಕಲ್ಪ ಶಕ್ತಿಯಿಂದ ಅಥವಾ ಆತ್ಮಶಕ್ತಿಯಿಂದ ಗೆಲ್ಲಬೇಕು. ಹೀಗೆ ಗೆಲ್ಲುತ್ತ ಮಾಡಿದ ಸಾಧನೆಯು ಶ್ರೇಷ್ಠವಾಗುತ್ತದೆ. ಹೆಜ್ಜೆ ಹೆಜ್ಜೆಗೂ ಬಂದ ವಿಘ್ನಗಳನ್ನು ದಾಟುವ ಮೂಲಕ ಗಂಗೆಯನ್ನು ಧರೆಗಿಳಿಸಿದ್ದರಿಂದಲೇ ಭಗೀರಥನಿಗೆ ಖ್ಯಾತಿ ಬಂತು.

Previous articleಶ್ರಮಜೀವಿಗೆ ಭಗವಂತನ ಗೆಳೆತನ ಸುಲಭ
Next articleಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ