3ನೇ ಆವೃತ್ತಿಯ ಭಾರತ ಇಂಧನ ಸಪ್ತಾಹ-2025 ಇಂದಿನಿಂದ ಇದೇ 14ರವರೆಗೆ ನಡೆಯಲಿದೆ.
ಬೆಂಗಳೂರು: ಫೆ.11ರಿಂದ ಫೆ.14ರವರೆಗೆ ನಡೆಯಲಿರುವ ಇಂಡಿಯಾ ಎನರ್ಜಿ ವೀಕ್ 2025 ಕಾರ್ಯಕ್ರಮದ ಆರಂಭದ ದಿನವಾದ ಇಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯು 2047ರ ವೇಳೆಗೆ ಇಂಧನ ಸ್ವಾತಂತ್ರ್ಯ ಮತ್ತು 2070ರ ವೇಳೆಗೆ ನಿವ್ವಳ ಇಂಗಾಲ ಶೂನ್ಯತೆ ಸಾಧಿಸುವ ಭಾರತದ ದೃಷ್ಟಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ತನ್ನ ಬದ್ಧತೆಯನ್ನು ಸಾರಿದೆ. ಇಂಡಿಯಾ ಎನರ್ಜಿ ವೀಕ್ (ಐಇಡಬ್ಲ್ಯೂ) ಕಾರ್ಯಕ್ರಮವು ಇಂಧನ ಸ್ವಾವಲಂಬನೆಯನ್ನು ಸಾಧಿಸಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ನೆರವಾಗುವ ಪ್ರಾಯೋಗಿಕ ಮತ್ತು ಅತ್ಯುತ್ತಮ ಇಂಧನ ಶಕ್ತಿ ಉತ್ಪನ್ನಗಳನ್ನು ಪ್ರದರ್ಶಿಸುವ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಈ ಕಾರ್ಯಕ್ರಮದಲ್ಲಿ ಜಾಗತಿಕ ಮಟ್ಟದ ರಾಜಕೀಯ ನಾಯಕರು, ನೀತಿ ನಿರೂಪಕರು, ಸಂಪನ್ಮೂಲ ವ್ಯಕ್ತಿಗಳು, ತಜ್ಞರು ಮತ್ತು ಗ್ರಾಹಕರು ಭಾಗವಹಿಸಿದ್ದು, ಈ ಸಂದರ್ಭದಲ್ಲಿ ಹೊಸ ವಿದ್ಯುತ್ ತಂತ್ರಜ್ಞಾನಗಳು, ಉದ್ಯಮದ ಟ್ರೆಂಡ್‌ಗಳು ಮತ್ತು ಪಾಲಿಸಿಗಳ ಕುರಿತು ಸಂವಹನ ನಡೆಸಲಾಯಿತು.
ಗ್ರೀನ್ ಎನರ್ಜಿ ಮೂಲಕ ಕಾರ್ಯನಿರ್ವಹಿಸುವ ಸುಸ್ಥಿರ ಸಾರಿಗೆ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ಕಡೆಗೆ ಗಮನವನ್ನು ಕೇಂದ್ರೀಕರಿಸಿರುವ ಟಿಕೆಎಂ ಸಂಸ್ಥೆಯು ಕಾಲದ ಅಗತ್ಯಕ್ಕೆ ತಕ್ಕಂತೆ ವೇಗ ಮತ್ತು ಪ್ರಮಾಣದಲ್ಲಿ ಬದಲಾವಣೆಯನ್ನು ಉಂಟು ಮಾಡುವ ಸಲುವಾಗಿ ತನ್ನ ಬಹು ಮಾರ್ಗ ವಿಧಾನದ ಮೂಲಕ ವಿವಿಧ ಪರ್ಯಾಯ ಪವರ್ ಟ್ರೇನ್‌ಗಳನ್ನು ಸಿದ್ಧಪಡಿಸುತ್ತಿದೆ. ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವುದರ ಜೊತೆಗೆ ಫಾಸಿಲ್ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಮೂಲಕ ಸಾರಿಗೆ ಕ್ಷೇತ್ರಕ್ಕೆ ಒಳಿತು ಮಾಡುವ ಅನೇಕ ಹಸಿರು ಇಂಧನ ಶಕ್ತಿಗಳಿವೆ. ಅವುಗಳಲ್ಲಿ ವಿದ್ಯುದೀಕರಣ ಮತ್ತು ಪರ್ಯಾಯ ಇಂಧನಗಳು ಕೂಡ ಸೇರಿವೆ. ಭಾರತದ ವೈವಿಧ್ಯಮಯ ಗ್ರಾಹಕ ಸಮೂಹ ಮತ್ತು ಅವರ ಅಗತ್ಯತೆಗಳು, ಮೂಲಸೌಕರ್ಯ ಸಿದ್ಧತೆ ಮತ್ತು ಸರ್ಕಾರದ ‘ಆತ್ಮ ನಿರ್ಭರ’ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಟಿಕೆಎಂ ಸಂಸ್ಥೆಯು ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಪೂರಕವಾಗಿ ದೇಶಕ್ಕೆ ಅಗತ್ಯವಿರುವ ವಿವಿಧ ಶುದ್ಧ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಿದೆ.