ಅವೆಲ್ಲ ಯಾಕೆ ಈಗ…??

0
25

ಛಪ್ಪನ್ನೈವತ್ತಾರು ದೇಶಗಳಲ್ಲಿ ನನ್ನ ಮಾತು ಕೇಳಿ ಹರೆದುಹೋಗುವ ಹಾವು ನಿಂತು ನೋಡಿ ಮುಂದೆ ಸಾಗುತ್ತದೆ. ನನ್ನ ಮಾತು ಕೇಳಿ ಬೇರೆ ಬೇರೆ ದೇಶಗಳಲ್ಲಿನ ಜನರು ಹನುಮಂತದೇವರಿಗೆ ನಡೆದುಕೊಳ್ಳುತ್ತಾರೆ. ನನ್ನ ಮಾತು ಕೇಳಿ ಬೇರೆ ಬೇರೆ ರಾಜ್ಯದವರು ಜ್ವರಕ್ಕೆ ಮಾತ್ರೆ ತೆಗೆದುಕೊಳ್ಳುತ್ತಾರೆ. ನನ್ನ ಮಾತು ಕೇಳಿಯೇ ಸೋದಿ ಮಾಮಾ ಅಷ್ಟು ಚಂದ ಮಾತಾಡುತ್ತಾನೆ… ನನ್ನ ಮಾತು ಅಂದರೇನೇ ಹಾಗೆ ಎಂದು ತಿಗಡೇಸಿ ಟಿವಿಯಲ್ಲಿ ವಾರ್ತೆ ಓದುವ ಹಾಗೆ ಹೇಳುತ್ತಿದ್ದ. ಅದನ್ನು ಕೇಳಿದ ಕೆಲವರು ಇದ್ದರೂ ಇರಬಹುದು ಎಂದು ಅ.ದುಕೊಂಡರೆ ಇನ್ನೂ ಹಲವರು ಉರುಳುಸ್ತಿದಾನೆ ಎಂದು ಆಡಿಕೊಳ್ಳುತ್ತಿದ್ದರು. ತಿಗಡೇಸಿ ಎದುರಿಗೆ ಬಂದರೆ ಸಾಕು… ಸಂದಿಗೊಂದಿ ಬಿದ್ದು ಅವನಿಂದ ತಪ್ಪಿಸಿಕೊಳ್ಳುವ ಜನರಿಗೇನೂ ಕಮ್ಮಿ ಇರಲಿಲ್ಲ. ದಿನಾಲೂ ಮುಂಜಾನೆ ಕೆಲವರನ್ನು ಕರೆದುಕೊಂಡು ಹೊಟೆಲ್‌ಗೇ ಹೋಗಿ ತಿಂಡಿ ಕೊಡಿಸಿ ಚಾ ಕುಡಿಸುತ್ತಿದ್ದ. ಅವರಲ್ಲಿ ಕೆಲವರು ಟಿಫಿನ್ ಟೀ ಆಗುವವರೆಗೆ ಆತನ ಮಾತು ಕೇಳಿ ನಂತರ ಇಲ್ಲೇ ಸ್ವಲ್ಪ ಕೆಲಸ ಇದೆ ಎಂದು ಪಾರಾಗಿ ಹೋಗುತ್ತಿದ್ದರು. ಅವತ್ತು ಕರಿಲಕ್ಷುಂಪತಿ ಯಾವುದೋ ಊರಿಗೆ ಅರ್ಜಂಟ್ ಹೊರಟಿದ್ದ ಆತನನ್ನು ನಿಲ್ಲಿಸಿಕೊಂಡು ನನ್ನ ಮಾತು ಕೇಳಿಯೇ ಎಲ್ಲ ಪಕ್ಷದವರು ಟಿಕೆಟ್ ಕೊಡುತ್ತಾರೆ. ಈ ಸಿನೆಮಾ ನಟ ನಟಿಯರು ಇಂಥ ಸಿನೆಮಾಕ್ಕೆ ಹೀರೋ ಆಗಲಾ… ಹಿರೋಯಿನ್ ಆಗಲಾ ಎಂದು ನನ್ನನ್ನೇ ಕೇಳುತ್ತಾರೆ. ಆ ಲೇವಣ್ಣ ಲಿಂಬೆಹಣ್ಣುಗಳನ್ನು ಯಾವ ಜೇಬಿನಲ್ಲಿಟ್ಡುಕೊಳ್ಳಲಿ ಎಂದು ನನ್ನ ಕೇಳಿಯೇ ಇಟ್ಟುಕೊಳ್ಳುತ್ತಾನೆ ಎಂದು ಹೇಳುತ್ತಿದ್ದಾಗ ಕರಿಲಕ್ಷುಂಪತಿ ಹೋಗುವ ಊರಿನ ಬಸ್ಸು ಹೋಯಿತು. ರಾತ್ರಿವರೆಗೂ ಬಸ್ಸು ಇರಲಿಲ್ಲ. ಮನಸ್ಸಿನಲ್ಲಿಯೇ ತಿಗಡೇಸಿಯನ್ನು ಶಪಿಸಿದ ಕರಿಲಕ್ಷುಂಪತಿ ಇವನಿಗೆ ಪಾಠ ಕಲಿಸಬೇಕು ಎಂದು ಅಂದುಕೊಂಡು.. ಅವನ ಮಾತು ಕೇಳುವ ಹಾಗೆ ನಟಿಸುತ್ತಿದ್ದ. ಅಯ್ಯೋ ಲಕ್ಷುಂಪತಿ… ಆ ಮದ್ರಾಮಣ್ಣ ಇದಾನಲ್ಲ.. ವಕ್ಫು ಆಗಿರಬಹುದು… ಮೂಡಾ ಆಗಿರಬಹುದು… ಕುಮೀರ್ ಗುಹ್ಮದ್‌ಗೆ ಏನಾದರೂ ಗುಪ್ತವಾಗಿ ಹೇಳಬೇಕಾದರೆ ನನ್ನೇ ಕೇಳುತ್ತಾರೆ. ನಾನು ಹೇಳಿದ್ದೇ ಫೈನಲ್… ಮೊನ್ನೆ ಸುಮಾರಣ್ಣನಿಗೆ ಅಂದನಲ್ಲ ಆ ಕುಮೀರ… ನನ್ನ ಕೇಳಿಯೇ ಅಂದಿದ್ದು ಅಂದ. ಕೂಡಲೇ ಕರಿಲಕ್ಷುಂಪತಿ ಅಲ್ಲ ತಿಗಡೇಸಿ ಮಾಮಾ ಎಲ್ಲರೂ ನಿನ್ನ ಮಾತು ಕೇಳುತ್ತಾರಾ ಅಂದಾಗ… ಅದರಲ್ಲಿ ಡೌಟೇ ಬೇಡ… ನಂದೊಂದೇ ಮಾತು ಸಾಕು ಎಲ್ಲರಿಗೂ ಅಂದ. ಆಗ ಕರಿಲಕ್ಷುಂಪತಿ ಅಲ್ಲ ಮಾಮಾ ಮೊನ್ನೆ ನಿಮ್ಮ ಪತ್ನಿ ನಿಮಗೆ ಒನಕೆಯಿಂದ ಬೆನ್ನುಮೂಳೆ ಮುರಿಯುವ ಹಾಗೆ ಹೊಡೆದು ಊರಿಗೆ ಹೋದಳಂತೆ… ನಿಮ್ಮ ದೊಡ್ಡಮಗನು ಮನೆಬಿಟ್ಟು ಹೋಗು ಅಂತ ನಿಮನ್ನು ದರದರ ಎಳೆದು ಹಾಕಿದನಂತೆ… ನಿಮ್ಮ ಕಿರಿಮಗ ಇಸ್ಪೀಟಾಟದಲ್ಲಿ ನಿಮ್ಮ ಹೊಲವನ್ನೇ ಕಟ್ಟಿ ಸೋತನಂತೆ… ಅವರು ಯಾರೂ ನಿಮ್ಮ ಮಾತು ಕೇಳಲಿಲ್ಲವೇ ಅಂದಾಗ ಹುಳ್ಳಗೇ ಮುಖ ಮಾಡಿದ ತಿಗಡೇಸಿ ಅವೆಲ್ಲ ಯಾಕೆ…. ನನಗೆ ಅರ್ಜಂಟ್ ಇದೆ ಎಂದು ಹೋದ. ಅಂದಿನಿಂದ ತಿಗಡೇಸಿ ಮೌನಾನುಷ್ಠಾನ ಕೈಗೊಂಡಿದ್ದಾನೆ.

Previous articleಬಂಡೀಪುರ ಅರಣ್ಯ ರಾತ್ರಿ ವಾಹನ ಸಂಚಾರ ಅನಗತ್ಯ
Next articleವಿದ್ಯುತ್ ಅಪಘಾತ ಹೆಚ್ಚಳ ಹೈಕೋರ್ಟ್ ಚಾಟಿ