ಸಂಪಾದಕೀಯ: ಸಾರಿಗೆ ಸಿಬ್ಬಂದಿಯ ಮುಷ್ಕರ ಜನಸಾಮಾನ್ಯರಿಗೆ ದುಬಾರಿ

0
87

ಸಂಯುಕ್ತ ಕರ್ನಾಟಕ ದಿನಪತ್ರಿಕೆ ಬುಧವಾರದ ಸಂಪಾದಕೀಯ

ಹೈಕೋರ್ಟ್ ಮಧ್ಯಪ್ರವೇಶದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಮುಂದೂಡಿಕೆಯಾಗಿದೆ. ಆದರೆ ನೌಕರರ ಬೇಡಿಕೆ ಹಾಗೇ ಇದೆ. ಅದರಿಂದ ಯಾವಾಗ ಬೇಕಾದರೂ ಮತ್ತೆ ಮುಷ್ಕರ ನಡೆಸುವ ಭೀತಿ ಇದ್ದೇ ಇದೆ. ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದ ಮೇಲೆ ಸರ್ಕಾರಿ ಬಸ್‌ನಲ್ಲಿ ಸಂಚರಿಸುವವರ ಸಂಖ್ಯೆ ಅಧಿಕಗೊಂಡಿದೆ.

ಇಂದು ಜನಸಾಮಾನ್ಯರು ಬಹುತೇಕ ಕಡೆ ಬಸ್ ಸೌಲಭ್ಯ ಇಲ್ಲದೆ ಪರದಾಡಿದ್ದಾರೆ. ನೌಕರರು ತಮ್ಮ ಸಂಬಳ ಸಾರಿಗೆ ಹೆಚ್ಚಿಸುವಂತೆ ಕೋರಿದ್ದಾರೆ. ಎಂ.ಆರ್. ಶ್ರೀನಿವಾಸಮೂರ್ತಿ ಸಮಿತಿ ನೀಡಿರುವ ವರದಿಯನ್ನು ಜಾರಿಗೆ ಕೊಡುವಂತೆ ಸರ್ಕಾರವನ್ನು ನೌಕರರು ಒತ್ತಾಯಿಸಿಕೊಂಡು ಬಂದಿದ್ದಾರೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಮಾಡಿದ ಮೇಲೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರಿಗೆ ಸರ್ಕಾರದ ನೆರವು ಸಕಾಲಕ್ಕೆ ಲಭಿಸಿದೆ. ಸರ್ಕಾರವೇ ತಿಳಿಸಿರುವ ಹಾಗೆ ಗ್ಯಾರಂಟಿ ಯೋಜನೆಗಳು ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿದೆ.

ಹೀಗಿರುವಾಗ ಕೆಎಸ್‌ಆರ್‌ಟಿಸಿ ನೌಕರರ ಸಂಬಳ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಕರ್ತವ್ಯ. ಉಚಿತ ಬಸ್ ಸೌಲಭ್ಯಕ್ಕೆ ಬಜೆಟ್ ನೆರವು ಇರುವ ಹಾಗೆ ಬಸ್ ಚಾಲನೆಗೆ ಕಾರಣವಾಗಿರುವ ನೌಕರರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಕರ್ತವ್ಯ. ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶ ನೀಡಿದ್ದಾರೆ.

ಅವರು ಮತ್ತೆ ಬೀದಿಗೆ ಇಳಿಯದಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆಗಾರಿಕೆ. ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಯ ಸಂಪೂರ್ಣ ಹೊಣೆಗಾರಿಕೆ ಸರ್ಕಾರದ್ದೇ ಆಗಿರುವಾಗ ಲಾಭ-ನಷ್ಟ ಲೆಕ್ಕ ಹಾಕಲು ಬರುವುದಿಲ್ಲ. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಎಂದು ಸರ್ಕಾರ ಘೋಷಿಸಿದ ಮೇಲೆ ಬಸ್ ನಿರ್ವಹಣೆ ಮಾಡುವವ ನೌಕರರ ಯೋಗಕ್ಷೇಮ ನೋಡಿಕೊಳ್ಳುವುದೂ ಸರ್ಕಾರದ ಕರ್ತವ್ಯ.

ಎಂ.ಆರ್. ಶ್ರೀನಿವಾಸ ಮೂರ್ತಿ ಆಯೋಗದ ವರದಿಯೂ ಸರ್ಕಾರದ ಮುಂದಿದೆ. ನೌಕರರ ಸಂಘದ ಪ್ರತಿನಿಧಿಗಳೊಂದಿಗೆ ಮತ್ತೆ ಮುಷ್ಕರ ನಡೆಯದಂತೆ ಸರ್ಕಾರ ವ್ಯವಸ್ಥೆ ಮಾಡಬೇಕು. ರಾಜ್ಯದಲ್ಲಿ 25ಸಾವಿರ ಬಸ್‌ಗಳಿವೆ. ಪ್ರತಿದಿನ 32 ಲಕ್ಷ ಜನ ಪ್ರಯಾಣ ಮಾಡುತ್ತಾರೆ. ಪ್ರತಿದಿನ 26 ಲಕ್ಷ ಕಿಮೀ ಬಸ್ ಸಂಚರಿಸುತ್ತವೆ.

ಬಸ್ ನೌಕರರ ಮೇಲೆ ಆಗತ್ಯ ಸೇವಾ ಕಾಯ್ದೆಗೆ ಅನ್ವಯಿಸುವ ಸರ್ಕಾರ ಅಗತ್ಯ ಸೇವೆಗೆ ಬೇಕಾದ ಎಲ್ಲ ಸವಲತ್ತು ಕಲ್ಪಿಸಿಕೊಡಬೇಕು. ಅಗತ್ಯ ಸೇವೆ ಕಾಯ್ದೆಯಲ್ಲಿ ಎಲ್ಲವೂ ನಮೂದಾಗಿದೆ. ನೌಕರರಿಗೆ ಅಗತ್ಯ ಸೇವೆ ಎಂದು ಹೇಳುವ ಸರ್ಕಾರಕ್ಕೆ ಅದಕ್ಕೆ ತಕ್ಕಂತೆ ಸವಲತ್ತು ಕಲ್ಪಿಸಿಕೊಡಬೇಕು.

ಸಿಬ್ಬಂದಿ ಕೂಡ ಅದಕ್ಕೆ ತಕ್ಕಂತೆ ಇರಬೇಕು. ಕೊರತೆ ಇದ್ದಲ್ಲಿ ಎಸ್ಮಾ ಅನ್ವಯಿಸಲು ಬರುವುದಿಲ್ಲ. ಅದೇ ರೀತಿ ನೌಕರರು ಕಾನೂನುಬದ್ಧವಾಗಿ ನೋಟಿಸ್ ನೀಡಿ ಮುಷ್ಕರಕ್ಕೆ ಇಳಿದಲ್ಲಿ ಅದನ್ನು ತಡೆಯಲು ಬರುವುದಿಲ್ಲ. ಹೈಕೋರ್ಟ್ ಪ್ರತಿ ಬಾರಿ ಹಸ್ತಕ್ಷೇಪ ಮಾಡಲು ಬರುವುದಿಲ್ಲ.

ಲಕ್ಷಾಂತರ ಜನ ಪ್ರತಿದಿನ ಸರ್ಕಾರಿ ಬಸ್‌ನಲ್ಲಿ ಪ್ರಯಾಣ ಮಾಡುವುದರಿಂದ ಅದು ವರ್ಷವಿಡೀ ಲಭ್ಯವಿರುವಂತೆ ನೋಡಿಕೊಳ್ಳುವುದೂ ಸರ್ಕಾರದ ಕರ್ತವ್ಯ. ಬೇರೆ ರಾಜ್ಯಗಳಲ್ಲಿ ಸರ್ಕಾರಿ ಬಸ್‌ಗಳಿಗೆ ಸಾರಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದ ಅಲ್ಲಿಯ ಸಾರಿಗೆ ಸಂಸ್ಥೆಗಳು ಆರ್ಥಿಕವಾಗಿ ಸದೃಢಗೊಳ್ಳಲು ಸಾಧ್ಯವಾಗಿದೆ.

ಅಲ್ಲದೆ ಸಾರಿಗೆ ವ್ಯವಸ್ಥೆ ಲಾಭದಾಯಕ ಉದ್ಯಮವಲ್ಲ. ಅದರಲ್ಲೂ ಸರ್ಕಾರ ಇದನ್ನು ನೋಡಿಕೊಳ್ಳುವುದರಿಂದ ಇದೊಂದು ಸಾರ್ವಜನಿಕ ಸೇವೆ ಎಂದು ಪರಿಗಣಿಸುವುದು ಅಗತ್ಯ. ಇಂದಿನ ಡೀಸೆಲ್ ದರದಲ್ಲಿ ಬಸ್ ನಿರ್ವಹಣೆ ಕಷ್ಟದ ಕೆಲಸ. ಬ್ಯಾಟರಿ ಚಾಲಿತ ಬಸ್‌ಗಳಿಗೆ ಒಂದು ಕಿಮೀಗೆ 40 ರೂ. ನೀಡಬೇಕು. ಇಷ್ಟು ದುಬಾರಿ ಬಸ್ ಎಲ್ಲ ಕಡೆ ಓಡಿಸುವುದು ಕಷ್ಟದ ಕೆಲಸ.

ಅದರಲ್ಲೂ ಗ್ರಾಮೀಣ ಭಾಗದಲ್ಲಿ ಎಲ್ಲ ಶಾಲಾ ಮಕ್ಕಳು ಸರ್ಕಾರಿ ಬಸ್ ನೆಚ್ಚಿಕೊಂಡು ಶಿಕ್ಷಣ ಮುಂದುವರಿಸಲು ಸಾಧ್ಯವಾಗಿದೆ ಎಂದ ಮೇಲೆ ಸಾರಿಗೆ ನೌಕರರ ಸಂಬಳ ಸಾರಿಗೆಯನ್ನು ಕಾಲಕಾಲಕ್ಕೆ ಹೆಚ್ಚಿಸುವುದೂ ಅಗತ್ಯ. ರಾಜ್ಯದಲ್ಲಿ ಈಗ ತಲಾವಾರು ಅಧಿಕಗೊಂಡಿದೆ. ಇದರಲ್ಲಿ ಸಾರಿಗೆ ವ್ಯವಸ್ಥೆಯ ಪಾತ್ರವೂ ಇದೆ ಎಂಬುದನ್ನು ಮರೆಯುವಂತಿಲ್ಲ.

ಜನರ ಕೈಯಲ್ಲಿ ದುಡ್ಡಿದೆ ಎಂದು ಸ್ವಂತ ವಾಹನಗಳಿಗೆ ಹೋಗಬಾರದು ಎಂದು ಸರ್ಕಾರವೇ ಹೇಳುತ್ತಿದೆ. ಇದರಿಂದ ಸಂಚಾರ ಸಮಸ್ಯೆ ಹಾಗೂ ಪರಿಸರ ಮಾಲಿನ್ಯ ಅಧಿಕಗೊಂಡಿದೆ. ಅದರಿಂದ ಸಾರಿಗೆ ಬಸ್‌ಗಳ ಸಂಚಾರ ಈ ದೃಷ್ಟಿಯಿಂದ ಅನಿವಾರ್ಯ.

ಸರ್ಕಾರ ಈ ದೃಷ್ಟಿಯಿಂದ ಸಾರಿಗೆ ನೌಕರರ ಸಮಸ್ಯೆ ಬಗೆಹರಿಸುವುದು ಅಗತ್ಯವು ಹೌದು. ನಗರ ಸಾರಿಗೆ ಸವಲತ್ತು ವಿಸ್ತರಿಸಲು ಕೇಂದ್ರದ ನೆರವೂ ಇದೆ. ಹೀಗಿರುವಾಗಿ ಸಾರಿಗೆ ಸವಲತ್ತನ್ನು ಲಾಭದಾಯಕ ಉದ್ದಿಮೆಯಾಗಿ ಪರಿಗಣಿಸಲು ಬರುವುದಿಲ್ಲ. ಕೆಎಸ್‌ಆರ್‌ಟಿಸಿ ನೌಕರರು ಒಂದು ದಿನ ಮುಷ್ಕರ ನಡೆಸಿದರೂ ಅದಕ್ಕೆ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ.

Previous articleBengaluru Tunnel Road: ಬೆಂಗಳೂರಿನಲ್ಲಿ ಮತ್ತೊಂದು ಸುರಂಗ ರಸ್ತೆ
Next articleಸಾಲು-ಸಾಲು ರಜೆ: ಬೆಂಗಳೂರಿನಿಂದ ವಿಶೇಷ ರೈಲುಗಳು, ವೇಳಾಪಟ್ಟಿ

LEAVE A REPLY

Please enter your comment!
Please enter your name here