ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ
ರಾಜ್ಯದಲ್ಲೀಗ ಗೊಬ್ಬರದ ರಾಜಕೀಯ. ಗೊಬ್ಬರಕ್ಕಾಗಿ ರೈತರು ಪರದಾಡುತ್ತಿದ್ದರೆ, ರಾಜ್ಯದವರು ಕೇಂದ್ರದತ್ತ, ಕೇಂದ್ರದವರು ರಾಜ್ಯದತ್ತ ಹೂಂಕರಿಸುತ್ತಾ, ಪೂತ್ಕರಿಸುತ್ತಾ ಗೊಬ್ಬರ ಮೆತ್ತಿಕೊಳ್ಳುತ್ತಿದ್ದಾರೆ!
ಗೋದಾಮುಗಳಲ್ಲಿ ಗೊಬ್ಬರವಿದೆ. ಹಂಚಿಕೆ ಸರಿಯಿಲ್ಲ. ಮೂರು ಪಟ್ಟು ಅಧಿಕ ಬೆಲೆಗೆ ಮಾರಲಾಗುತ್ತಿದೆ. ಕೃಷಿ ಸಚಿವರಿಗೆ ದೂರದೃಷ್ಟಿ ಇಲ್ಲ. ಗೊಬ್ಬರ ಪೂರೈಸದೇ ರೈತರ ಬದುಕನ್ನು ನಾಶಪಡಿಸುತ್ತಿದ್ದಾರೆ… ಹೀಗೆಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಬೀದಿಗೆ ಇಳಿದಿದೆ.
ಕೇಂದ್ರ ಸರ್ಕಾರ ಗೊಬ್ಬರ ಪೂರೈಸುತ್ತಿಲ್ಲ. ಹತ್ತಾರು ಪತ್ರ ಬರೆದಿದ್ದೇವೆ. ಬೇಡಿಕೆ ಸಲ್ಲಿಸಿದ್ದೇವೆ. ಇನ್ನೂ 1.36 ಲಕ್ಷ ಟನ್ ಯೂರಿಯಾ ಗೊಬ್ಬರ ಬೇಕಿದೆ. ಬಿಡುಗಡೆ ಮಾಡಿ ಎಂದು ಕೇಂದ್ರವನ್ನು ಕೋರಿದ್ದೇವೆ. ಕೇಂದ್ರ ಸರ್ಕಾರ ರಾಜಕೀಯ ಮಾಡಿ, ತಾರತಮ್ಯ ತೋರುತ್ತಿದೆ… ಇದು ಸ್ವತಃ ಮುಖ್ಯಮಂತ್ರಿ ಮತ್ತು ಕೃಷಿ ಸಚಿವರ ಆರೋಪ.
ರೈತರಿಗೆ ಈ ಸಾರೆ ಉತ್ತಮ ಫಸಲು ಬೆಳೆಯುವ ಉಮೇದು. ಮುಂಗಾರು ಉತ್ತಮವಾಗಿದೆ. ಮುಂಚಿತವಾಗಿಯೇ ರಾಜ್ಯವ್ಯಾಪಿ ಮಳೆಯಾಗಿದೆ. ಹಾಗಾಗಿ ಜೋಳ, ರಾಗಿ, ಗೋಧಿ, ಮೆಣಸು, ಈರುಳ್ಳಿ ಬೆಳೆಯುವ ಉತ್ಸಾಹ.
ವಾಡಿಕೆಗಿಂತ ಸುಮಾರು 1.15 ಲಕ್ಷ ಹೆಕ್ಟೇರ್‌ಗೂ ಅಧಿಕ ಮೆಕ್ಕೆಜೋಳ ಬಿತ್ತನೆಯಾಗಿದೆ. ಈಗ ಇದಕ್ಕೆ ಗೊಬ್ಬರ ಅನಿವಾರ್ಯ. ಶ್ರೀಮಂತರಿಗೆ, ಅಧಿಕ ಹಣ ಇರುವವರಿಗೆ ಗೊಬ್ಬರ ಸುಲಭವಾಗಿ ಸಿಗುತ್ತಿದೆ. ಆದರೆ ಬಡ ಸಾಮಾನ್ಯ ರೈತನಿಗೆ ಎದುರಾಗುವುದು `ನೋ ಸ್ಟಾಕ್’ ಬೋರ್ಡ್.
ಈ ನಡುವೆ ರಾಜ್ಯದ ಹಲವೆಡೆ ಕಳಪೆ ಬೀಜ, ಕಳಪೆ ಗೊಬ್ಬರ ಆರೋಪ, ದೂರುಗಳು ಸಾಕಷ್ಟು ಕಡೆ ಕೇಳಿ ಬಂದಿವೆ. ನಿಜ. ರಾಸಾಯನಿಕ ಗೊಬ್ಬರ ಕಾರ್ಖಾನೆಗಳ ನಿಯಂತ್ರಣವೆಲ್ಲ ಕೇಂದ್ರ ಸರ್ಕಾರದ್ದೇ. ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಬಿಡುಗಡೆ ಮಾಡುವ ಹೊಣೆ ಕೇಂದ್ರ ಕೃಷಿ ಮತ್ತು ರಾಸಾಯನಿಕ ಸಚಿವಾಲಯದ್ದು.
ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ. ಗುಜರಾತ್, ಮಹಾರಾಷ್ಟ್ರ, ಆಂಧ್ರ, ಮಧ್ಯಪ್ರದೇಶ, ಪಂಜಾಬ್‌ಗಳಲ್ಲಿಯೂ ಯೂರಿಯಾ ಗೊಬ್ಬರದ ಕೊರತೆ ಇದೆ ಎಂಬ ವರದಿಗಳಿವೆ. ಅಲ್ಲಿಯೂ ರೈತ ಗೊಬ್ಬರಕ್ಕಾಗಿ ಪರದಾಡುತ್ತಿದ್ದಾನೆ.
ರಾಸಾಯನಿಕ ಗೊಬ್ಬರದ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಈ ಗೊಬ್ಬರದ ದುಷ್ಕರಿಣಾಮಗಳ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಕ್ಷಿಪ್ರವಾಗಿ ಬೆಳೆಯುವ ಉದ್ದೇಶ ಮತ್ತು ಕ್ಷಿಪ್ರ ಬೆಳೆ ಬರುವ ಭಾವನೆ ರೈತನ ಮನಸ್ಸಿನಿಂದ ಹೋಗಿಲ್ಲ. ಗೊಬ್ಬರದಿಂದ ಮತ್ತು ಕೀಟನಾಶಕದಿಂದ ಮಣ್ಣು ನಾಶವಾಗಿ ರೈತನ ಬದುಕು ಹೈರಾಣಾಗುತ್ತಿದೆ. ಹಾಗೇ ಕ್ರಿಮಿನಾಶದಿಂದ ಜನರ ಆರೋಗ್ಯದ ಮೇಲೂ ಸಾಕಷ್ಟು ದುಷ್ಪರಿಣಾಮ ಆಗುತ್ತಿವೆ.
ದೇಶದ ಮೂಲ ಸಾಂಪ್ರದಾಯಿಕ ಕೃಷಿ ಪದ್ಧತಿ ಈಗ ಸಂಪೂರ್ಣ ಬದಲಾಗಿ ಹೋಗಿದೆ. ಕೇವಲ ಇಪ್ಪತ್ತೈದು ವರ್ಷಗಳ ಹಿಂದೆ ಕುಲಾಂತರಿ ಬೀಜಗಳ ಪರಿಚಯ ವನ್ನು ಬಹುರಾಷ್ಟ್ರೀಯ ಕಂಪನಿಗಳು ಮಾಡಿದಾಗ ರೈತ ಮುಖಂಡ ಪ್ರೊ.ನಂಜುಂಡಸ್ವಾಮಿ, `ಇದು ರೈತರ ಹೊಲ ಪ್ರವೇಶಿಸಿದರೆ ಭವಿಷ್ಯದಲ್ಲಿ ರೈತ ಪರಾವಲಂಬಿಯಾಗುತ್ತಾನೆ; ಭಿಕಾರಿಯಾಗುತ್ತಾನೆ. ಮಣ್ಣು ತನ್ನ ಕಸುವು ಕಳೆದುಕೊಂಡು ಗ್ರಾಹಕ ರೋಗರುಜಿನೆಗಳಿಗೆ ತುತ್ತಾಗುತ್ತಾನೆ’ ಎಂದು ಎಚ್ಚರಿಸಿದ್ದರು.
ಕೇವಲ ಹತ್ತು ವರ್ಷಗಳಲ್ಲಿ ಕುಲಾಂತರಿ ತಳಿಗಳು, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳು ಇಡೀ ರಾಜ್ಯ – ದೇಶದ ಕೃಷಿಯನ್ನು ಆಕ್ರಮಿಸಿಕೊಂಡವು. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಕೆ ಕಡಿಮೆ ಮಾಡಿ; ಸಾವಯವ, ಸಹಜ ಗೊಬ್ಬರ, ಹಸಿರು ಗೊಬ್ಬರ ಬಳಕೆ ಮಾಡಿ ಎಂಬ ಕೃಷಿ ತಜ್ಞರ ಜ್ಞಾನೋದಯದ ಮಾತು ಈಗ ಬೋರ್ಗಲ್ಲ ಮೇಲೆ ಮಳೆ ಸುರಿದಂತಾಗಿದೆ.
ಈ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಕಂಪನಿಗಳ ಲಾಭ, ಅದರ ದೈತ್ಯ ಸ್ವರೂಪ ಈಗ ಸರಿಸುಮಾರು ಹತ್ತಾರು ಲಕ್ಷ ಕೋಟಿಗಳು. ಯಾವ ಗೊಬ್ಬರ ಕಂಪನಿ, ಯಾವ ಕೀಟನಾಶಕ ಉತ್ಪಾದಕ ಹಾನಿ ಅನುಭವಿಸಿದ್ದಿಲ್ಲ. ಆದರೆ ಪ್ರತಿವರ್ಷ ದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇವರಲ್ಲಿ ಬಹುಪಾಲು ಕಳಪೆ ಬೀಜ ಮತ್ತು ರಸಗೊಬ್ಬರದ ದುಷ್ಪರಿಣಾಮಕ್ಕೆ ತುತ್ತಾದವರು.
ಗೊಬ್ಬರ ಏಕಿಲ್ಲ ಎಂದರೆ, ಸಾಕಷ್ಟಿದೆ, ಹಂಚಿಕೆ ಸರಿಯಾಗಿಲ್ಲ ಎನ್ನುವುದು ಪ್ರತಿಪಕ್ಷದ ಆರೋಪ. ದುಡ್ಡು ಕೊಟ್ಟರೆ ಸಾವಿರಾರು ಚೀಲ ಸಿಗುತ್ತದೆ ಎನ್ನುವುದಕ್ಕೆ ಕಳೆದ ಹತ್ತು ದಿನಗಳಲ್ಲಿ ರಾಜ್ಯಾದ್ಯಂತ ನಡೆದ ಹತ್ತಾರು ಘಟನೆಗಳು ಸಾಕ್ಷಿ.
ಗೊಬ್ಬರದ ಕೂಗು ಎದ್ದಾಗ ನಾಲ್ಕಾರು ಗೋದಾಮು ಅಂಗಡಿಗಳ ಬೀಗ ಒಡೆದು ದಾಳಿ ನಡೆಸಿದ್ದನ್ನು ಬಿಟ್ಟರೆ, ಮತ್ತೆ ನಿಯಂತ್ರಣವಿಲ್ಲ. ರೈತ ಪ್ರತಿಭಟನೆಗೆ ಇಳಿದಾಗಲೇ ಮಾರಾಟ ಕೇಂದ್ರಗಳ ಮೇಲೆ ದಾಳಿಯಾಗಿ ನಂತರ ಮರೆತು ಹೋಗುತ್ತದೆ.
ಅತೀ ಹೆಚ್ಚು ಗೊಬ್ಬರ ಬಳಕೆ ಅಗತ್ಯ ಇರುವ ಜಿಲ್ಲೆಗಳಿಗೆ ಕಡಿಮೆ ಗೊಬ್ಬರ ಪೂರೈಸಲಾಗಿದೆ ಎನ್ನುವ ಆರೋಪವೂ ಇದೆ. ವರ್ತಕರು, ಫ್ಯಾಕ್ಟರಿಗಳು ಶಾಮೀಲಾಗಿರುವ ದೂರು ಇನ್ನೊಂದೆಡೆ. ಇವೆಲ್ಲವುಗಳಿಗೆ ಸಬ್ಸಿಡಿ ಹಗರಣ ಕಾರಣ.
550 – 600 ರೂಪಾಯಿ ಇರುವ ಕ್ವಿಂಟಾಲ್ ಗೊಬ್ಬರದ ಬೆಲೆಗೆ ಸರ್ಕಾರ ಸಬ್ಸಿಡಿ ದರದಲ್ಲಿ ರೈತರಿಗೆ ಪೂರೈಸುತ್ತಿದೆ. ಸಬ್ಸಿಡಿ ದೊರೆಯುವುದು ವಿತರಕನಿಗೆ ಮತ್ತು ಕಾರ್ಖಾನೆಗಳಿಗೆ. ಇಲ್ಲಿ ಸಬ್ಸಿಡಿ ಕದಿಯುವ ಕರಾಳ ದಂಧೆ ನಡೆಯುತ್ತದೆ. ಎಲ್‌ಪಿಜಿ ಸಿಲಿಂಡರ್‌ನಂತೆ ಗ್ರಾಹಕನಿಗೆ ಸಬ್ಸಿಡಿ ಕೊಡಿ. ಹೇಗಿದ್ದರೂ ಗೊಬ್ಬರ ವಿತರಣೆಗೆ ಕೃಷಿ ಪಹಣಿ, ಉತಾರ್ ಪಡೆಯುತ್ತೀರಿ. ಬ್ಯಾಂಕ್ ಖಾತೆ ಲಭ್ಯವಿದೆ. ಅವರಿಗೆ ಸಬ್ಸಿಡಿ ಕೊಡಿ ಎನ್ನುವ ವಾದವೂ ಇದೆ.
ಈ ಮಧ್ಯೆ ಯೂರಿಯಾ, ಅಮೋನಿಯಂ ಪೊಟ್ಯಾಷಿಯಂ ಫ್ಲೋರೈಡ್‌ಗಳ ಬಗ್ಗೆ ಭಾರತ ರಷ್ಯಾ, ಸೌದಿ ಅರೇಬಿಯಾಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಸುಮಾರು 31 ಲಕ್ಷ ಟನ್‌ಗಳಷ್ಟು ರಸಗೊಬ್ಬರ ಆಮದಿಗೂ ಒಡಂಬಡಿಕೆ ಈ ದೇಶಗಳ ಜೊತೆಗೇ ಆಗಿದೆ. ಆದರೆ ಅಲ್ಲಿಯೂ ಸಮಸ್ಯೆ ಇದೆ. ಸ್ಥಿತಿ ಹೇಗಿದೆ ಎಂದರೆ ರೈತನ ಹೊಲದಿಂದ ರಾಸಾಯನಿಕ ಗೊಬ್ಬರ ಉತ್ಪಾದನೆ ಕಾರ್ಖಾನೆಯವರೆಗೆ, ಹಾಗೇ ಕಾರ್ಖಾನೆಗಳಿಗೆ ಗೊಬ್ಬರ ತಯಾರಿಕೆಯ ರಾಸಾಯನಿಕಗಳನ್ನು ಪೂರೈಸುವ ಬೃಹತ್ ವಿದೇಶಿ ಉದ್ಯಮಗಳ ಜೊತೆಗೆ ಈಗ ಜಟಿಲತೆ ಸೃಷ್ಟಿಯಾಗಿದೆ.
ಸೌದಿ ಅರೇಬಿಯಾ, ರಷ್ಯಾ ದೇಶಗಳು ಕಚ್ಚಾ ವಸ್ತುಗಳನ್ನು ಭಾರತಕ್ಕೆ ತಲುಪಿಸುತ್ತಿಲ್ಲ. ಅಲ್ಲಿಯೂ ಸಾಕಷ್ಟು ಉತ್ಪಾದಿಸುತ್ತಿಲ್ಲ. ಪರಿಣಾಮ ದೇಶದ ರೈತನ ಹೊಲಕ್ಕೆ ರಾಸಾಯನಿಕ ಗೊಬ್ಬರ ಸಿಗದೇ, ಕೊರತೆಯಾಗಿದೆ. ಕೊನೆಗೂ ಈ ಸಮಸ್ಯೆಯಿಂದ ಸಾಯುವವನು ರೈತನೇ. ಸುಟ್ಟು ಕರಕಲಾಗುವುದು ರೈತನ ಹೊಲವೇ !!
ರಾಜ್ಯ ರಾಜಕಾರಣದಲ್ಲಿ ಗೊಬ್ಬರ ಸಮಸ್ಯೆ ಹಲವು ಸಾರೆ ಉದ್ವಿಗ್ನತೆ ಸೃಷ್ಟಿಸಿದೆ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಶಿರಾದಲ್ಲಿ ಗೊಬ್ಬರದ ಹೋರಾಟ ನಡೆಯಿತು. ಸರ್ಕಾರ ಸಂಧಿಗ್ದ ಸ್ಥಿತಿಗೆ ಸಿಲುಕಿತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ವಿಷಯವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆದು ಓರ್ವ ರೈತ ಮೃತಪಟ್ಟ. ನ್ಯಾಯಾಂಗ ತನಿಖೆ ನಡೆದರೂ ಇದುವರೆಗೆ ಪರಿಹಾರ ಸಿಕ್ಕಿಲ್ಲ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗಲು ಗೊಬ್ಬರ ಸಮಸ್ಯೆ ಉದ್ಭವಿಸಿ, ಸಾಕಷ್ಟು ಘರ್ಷಣೆಗಳು ನಡೆದವು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಸಾಕಷ್ಟು ಗೊಬ್ಬರ ಪೂರೈಸುತ್ತಿಲ್ಲ ಎಂದು ಮುಖ್ಯಮಂತ್ರಿಗಳೇ ಪತ್ರ ಬರೆದಾಗ ರಾಜ್ಯದ ಸಂಸದರು ಜಾಗೃತರಾದರು. ಕೇಂದ್ರ ಮಂತ್ರಿ ನಡ್ಡಾ ಬಳಿ ನಿಯೋಗ ಹೋಗಿ 1.83 ಲಕ್ಷ ಟನ್ ಗೊಬ್ಬರ ವಿತರಣೆಗೆ ಭರವಸೆ ಪಡೆದುಕೊಂಡರು. ಈ ಕೆಲಸ ಮೊದಲೇ ಆಗಿದ್ದರೆ ಗೊಬ್ಬರ, ಕೀಟನಾಶಕ ಮತ್ತು ರೈತನ ಸಂಬಂಧದ ಕೊಂಡಿ ಬಿಗಿಯಾಗಿರುತ್ತಿತ್ತು.
ಕಳೆದೊಂದು ವರ್ಷದಲ್ಲಿ 981 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹುತೇಕ ರೈತರ ಸಾವಿಗೆ ಕಳಪೆ ಬೀಜ, ಗೊಬ್ಬರ, ಕೀಟನಾಶಕಗಳೇ ಕಾರಣ. ಸಾಲಸೋಲ ಮಾಡಿ ಬಿತ್ತಿದ ಬೀಜ ಕಳಪೆಯಾಗಿ ಸಾನ್ನಪ್ಪಿದವರೇ ಹೆಚ್ಚು. ಆ ನಂತರ ಗೊಬ್ಬರ ಅಲಭ್ಯತೆ, ಫಸಲು ನಾಶ, ಪರಿಣಾಮ ಬೀರದ ಕೀಟನಾಶಕಗಳು.
981 ರೈತರ ಪೈಕಿ 807 ಪ್ರಕರಣಗಳಲ್ಲಿ 7 ಮಂದಿ ರೈತರ ಬೆಳೆನಷ್ಟ, ಸಾಲಭಾದೆಯಿಂದ ಆತ್ಮಹತ್ಯೆ ಎಂದು ಸರ್ಕಾರ ದೃಢಪಡಿಸಿದೆ. ದುರಂತ ಎಂದರೆ ಅತೀ ಹೆಚ್ಚು ಕೃಷಿ ಉತ್ಪಾದನಾ ಕಂಪನಿಗಳಿರುವ ಹಾವೇರಿಯಲ್ಲಿ 128 ಮಂದಿ, ಕಲಬುರ್ಗಿಯಲ್ಲಿ 82, ಮುಖ್ಯಮಂತ್ರಿಗಳ ತವರು ಮೈಸೂರಿನಲ್ಲಿ 73, ಧಾರವಾಡದಲ್ಲಿ 72 ರೈತರು ಹೀಗೆ, ದಾವಣಗೆರೆ, ಯಾದಗಿರಿ, ಗದಗ, ಶಿವಮೊಗ್ಗ, ವಿಜಯಪುರ ಎಲ್ಲೆಡೆ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಲೆನಾಡಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಇರುತ್ತಿದ್ದವು. ಆದರೆ ಈ ಸಾರೆ ಉತ್ತರ ಕನ್ನಡದಲ್ಲಿ 16, ದಕ್ಷಿಣ ಕನ್ನಡದಲ್ಲಿ ನಾಲ್ಕು, ಅಲ್ಲದೇ, ಕೊಡಗು – ಚಿಕ್ಕಮಗಳೂರಿನಲ್ಲೂ ತೋಟಿಗರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ 40 ರೈತರು, ವಿಶೇಷವಾಗಿ ತೋಟಿಗರೇ ನೇಣು ಹಾಕಿಕೊಂಡಿದ್ದಾರೆ.
ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಏನದವು ಬೆಳೆ ವಿಮೆ, ರೈತ ಸಮೃದ್ಧಿ, ಸಾವಯವ ಮಿಷನ್, ಮಾರುಕಟ್ಟೆ ಯೋಜನೆಗಳು. ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ 16,854 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರವೇ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಅಂದರೆ ರಾಜ್ಯದಲ್ಲಿ ಸರಾಸರಿ ಮೂವರು ರೈತರು ನಿತ್ಯ ಆತ್ಮಹತ್ಯೆಗೆ ಶರಣಾದಂತಾಯಿತು. ಇದಕ್ಕೆಲ್ಲಿಯ ಪರಿಹಾರ, ನೀಡುವವರು ಯಾರು? ರೈತರಾ?
ಮೊನ್ನೆ ಕೊಪ್ಪಳದಲ್ಲಿ ಗೊಬ್ಬರ ಸಿಗದ ರೈತ ಮಣ್ಣು ತಿಂದ. ರಾಯಚೂರಿನಲ್ಲಿ ಕೀಟನಾಶಕ ಸಿಂಪಡಿಸಿದ ಚವಳಿಕಾಯಿ ತಿಂದ ಕುಟುಂಬದ ಮೂವರು ಸಾವನ್ನಪ್ಪಿದರು. ಗೊಬ್ಬರದ ರಾಜಕಾರಣದಲ್ಲಿ ರೈತರ ಸಮಸ್ಯೆಗಳಿಗೆ, ಬೆಳೆ-ಕೃಷಿ ಸವಾಲುಗಳಿಗೆ ಉತ್ತರಿಸುವರಿಲ್ಲ. ವಿಶ್ವವಿದ್ಯಾಲಯಗಳು, ಕೃಷಿ ತಜ್ಞರು, ಪರಿಣಿತರು ನೀಡುವ ವರದಿ, ಸಂಶೋಧನೆಗಳೆಲ್ಲ ನಿಷ್ಪ್ರಯೋಕವಾದವೇ? ಈಗ ರೈತನಿಗೆ ತಿನ್ನಲು ಮಣ್ಣು – ಕುಡಿಯಲು ಕೀಟನಾಶಕ ಅಷ್ಟೇ…!