Home ಸುದ್ದಿ ದೇಶ 10 ಗಂಟೆಗೆ ಸಂಬಳ, 10.05ಕ್ಕೆ ಉದ್ಯೋಗಿ ರಾಜೀನಾಮೆ!

10 ಗಂಟೆಗೆ ಸಂಬಳ, 10.05ಕ್ಕೆ ಉದ್ಯೋಗಿ ರಾಜೀನಾಮೆ!

0

ಬೆಂಗಳೂರು: ಇಂದಿನ ಯುವ ಜನತೆ ಒಂದೇ ಕೆಲಸದಲ್ಲಿ ಬಹಳ ದಿನ ಇರುವುದಿಲ್ಲ. ಚಿಕ್ಕ-ಪುಟ್ಟ ಕಾರಣಕ್ಕೆ ಉದ್ಯೋಗ ತೊರೆಯುತ್ತಾರೆ. ಬಹಳ ಬೇಗ ಕಂಪನಿಯನ್ನು ಬದಲಾವಣೆ ಮಾಡುತ್ತಾರೆ ಎಂಬ ಮಾತುಗಳಿವೆ. ಹೆಚ್ಆರ್‌ ಒಬ್ಬರು ಶೇರ್ ಮಾಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ಈಗ ವೈರಲ್ ಆಗಿದೆ.

ಹೊಸದಾಗಿ ಕೆಲಸಕ್ಕೆ ಸೇರಿದ ಉದ್ಯೋಗಿಗೆ 10 ಗಂಟೆಗೆ ಸ್ಯಾಲರಿ ಬಂದಿದೆ. ಆದರೆ 5 ನಿಮಿಷದಲ್ಲಿ ಅಂದರೆ 10.05ಕ್ಕೆ ಆತ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾನೆ. ಹೆಚ್‌ಆರ್ ಈ ಕುರಿತು ಪೋಸ್ಟ್ ಹಾಕಿದ್ದು, ಮಾನವ ಸಂಪನ್ಮೂಲ ವಿಭಾಗದ ಶ್ರಮಕ್ಕೆ ಏನು ಫಲ? ಎಂದು ಕೇಳಿದ್ದಾರೆ.

“ಕೆಲಸದ ಬದ್ಧತೆ ಕುರಿತು ಒಂದಷ್ಟು ಚರ್ಚೆ ಮಾಡೋಣ. ಕಂಪನಿ ನಿಮ್ಮನ್ನು ನಂಬಿತ್ತು, ಸ್ವಾಗತಿಸಿತು, ನಿಮ್ಮ ಬುದ್ಧಿವಂತಿಕೆಗೆ ವೇದಿಕೆಯನ್ನು ನೀಡಿತು. ಆದರೆ ಮೊದಲ ಕೆಲಸದಲ್ಲಿ ಸಂಬಳ ಬಂದ 5 ನಿಮಿಷದಲ್ಲಿ ರಾಜೀನಾಮೆ ನೀಡುವ ಅಗತ್ಯ ಏನಿತ್ತು?” ಎಂದು ಪ್ರಶ್ನೆ ಮಾಡಿದ್ದಾರೆ.

“ಈ ಮಾದರಿ ತಕ್ಷಣದ ರಾಜೀನಾಮೆಗಳು ಸಾಮಾನ್ಯವಾಗಿ ಉದ್ದೇಶ, ಪ್ರಬುದ್ಧತೆ ಮತ್ತು ಹೊಣೆಗಾರಿಕೆಯ ಕೊರತೆಯನ್ನು ಪ್ರದರ್ಶಿಸುತ್ತವೆ. ಮುಕ್ತ ಸಂವಾದಕ್ಕೆ ಅವಕಾಶ ಇರುವಾಗ ಇಂತಹ ನಿರ್ಧಾರಗಳು ಏಕೆ?” ಎಂದು ಪೋಸ್ಟ್ ಹಾಕಿದ್ದಾರೆ.

“ಯಾವುದೇ ವಿಚಾರ ಸರಿಯಾಗಿಲ್ಲ ಎಂದರೆ ಆ ಕುರಿತು ಮಾತನಾಡಬೇಕು. ಈ ಕುರಿತು ಸ್ಪಷ್ಟತೆ ಅಥವ ಸಹಾಯಕ್ಕಾಗಿ ಕೇಳಬೇಕು. ತಕ್ಷಣದ ರಾಜೀನಾಮೆಗಳಿಂದ ಏನೂ ಸಹ ಆಗುವುದಿಲ್ಲ” ಎಂದು ಹೇಳಿದ್ದಾರೆ.

“ಸವಾಲುಗಳಿಲ್ಲದ ಯಾವುದೇ ಕೆಲಸವಿಲ್ಲ, ಇರುವುದಿಲ್ಲ. ನಿಜವಾದ ವೃತ್ತಿಪರ ಬೆಳವಣಿಗೆಗೆ ಕೇವಲ ಸಂಬಳ ಪಡೆಯುವುದಕ್ಕಿಂತ ಹೆಚ್ಚಿನದು ಬೇಕಾಗುತ್ತದೆ” ಎಂದು ಹೆಚ್‌ಆರ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

“ಯಾವುದೇ ಕೆಲಸವು ಸುಲಭವಲ್ಲ. ಪ್ರತಿಯೊಂದು ಕ್ಷೇತ್ರದ ಕೆಲಸಕ್ಕು ಬದ್ಧತೆ, ತಾಳ್ಮೆ ಮತ್ತು ಪ್ರಯತ್ನ ಬೇಕಾಗುತ್ತದೆ. ಬೆಳವಣಿಗೆ ನಿಮ್ಮ ಮೊದಲ ಸಂಬಳದೊಂದಿಗೆ ಬರುವುದಿಲ್ಲ, ಅದು ಪರಿಶ್ರಮದಿಂದ ಬರುತ್ತದೆ” ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

“ವೃತ್ತಿಪರರು ತಮ್ಮ ವೃತ್ತಿ ನಿರ್ಧಾರಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಒತ್ತಡ ಹೆಚ್ಚಿದ್ದರೆ ವಿರಾಮ ಪಡೆಯಿರಿ, ಯೋಚಿಸಿ, ಮಾತುಕತೆ ನಡೆಸಿ. ನಿಮ್ಮ ವೃತ್ತಿಪರತೆಯನ್ನು ನಿಮ್ಮ ಹುದ್ದೆಯಿಂದ ವ್ಯಾಖ್ಯಾನಿಸಲಾಗುವುದಿಲ್ಲ, ನಿಮ್ಮ ಕೆಲಸದ ಮೂಲಕ ನೋಡಲಾಗುತ್ತದೆ” ಎಂದು ಹೇಳಿದ್ದಾರೆ.

ಹೆಚ್‌ಆರ್ ಹಾಕಿರುವ ಪೋಸ್ಟ್‌ಗೆ ಹಲವಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಉದ್ಯೋಗಿ, ಉದ್ಯೋಗವನ್ನು ಹಲವಾರು ಜನರು ಸಮರ್ಥಿಸಿಕೊಂಡಿದ್ದಾರೆ.

ಒಬ್ಬರು ತಮ್ಮ ಕಮೆಂಟ್‌ನಲ್ಲಿ, ‘ಸಂಬಳವನ್ನು ಈಗಾಗಲೇ ಮಾಡಿದ ಕೆಲಸಕ್ಕೆ ಪಾವತಿಸಲಾಗುತ್ತದೆ. ಅದೇನಿ ದಾನವಲ್ಲ, ಮುಂಚಿತವಾಗಿಯೂ ನೀಡಿಲ್ಲ. ಯಾರಾದರೂ ಸಂಬಳ ಪಡೆದ ನಂತರ ರಾಜೀನಾಮೆ ನೀಡಿದರೆ, ಅವರು ಆ ತಿಂಗಳಿಗೆ ತಮ್ಮ ಕರ್ತವ್ಯ ಪೂರೈಸಿದ್ದಾರೆ’ ಎಂದರ್ಥ ಎಂದು ಹೇಳಿದ್ದಾರೆ.

“ವೇತನ ಪಡೆದ ತಕ್ಷಣ ರಾಜೀನಾಮೆ ನೀಡಿದರೂ ಸಹ ನೋಟಿಸ್ ಪಿರಿಯಡ್ ಅವಧಿಯನ್ನು ಇನ್ನೂ ಪೂರೈಸಬೇಕಾಗಿದೆ. ಕಂಪನಿಗಳು ಜೀವಮಾನದ ನಿಷ್ಠೆಯನ್ನು ಬಯಸಿದರೆ, ಅದಕ್ಕೆ ತಕ್ಕಂತೆ ಅವರಿಗೆ ಸೌಲಭ್ಯವನ್ನು ನೀಡಬೇಕಿದೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಇನ್ನೊಬ್ಬ ನೆಟ್ಟಿಗರು, “ಉದ್ಯೋಗಿಯೊಬ್ಬರು ಕಂಪನಿ ಬಿಟ್ಟು ಹೋದರೆ ಕಂಪನಿಯು ಕುಸಿಯುವುದಿಲ್ಲ. ಅದೇ ಒಂದು ಕಂಪನಿ ವಜಾ ಕ್ರಮ ಕೈಗೊಂಡರೆ ಅನೇಕ ಬಾರಿ ಹಲವು ಕುಟುಂಬಗಳು ಬೀದಿಗೆ ಬರುತ್ತದೆ. ರಾಜೀನಾಮೆ ನೋಡುವ ನಿಮ್ಮ ದೃಷ್ಟಿಕೋನ ಬದಲಾವಣೆ ಮಾಡಿಕೊಳ್ಳಿ” ಎಂದು ಸಲಹೆ ನೀಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version