ಬೆಂಗಳೂರು: ಇತ್ತೀಚೆಗೆ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದ ಸಿದ್ದರಾಮಯ್ಯ ಆಪ್ತ ಮಧುಗಿರಿ ಶಾಸಕ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಸಚಿವ ಸ್ಥಾನ ಕಳೆದುಕೊಂಡಿದದ್ದಾರೆ. ರಾಜಣ್ಣನ ಮೇಲೆ ಗರಂ ಆದ ಕಾಂಗ್ರೆಸ್ ಹೈಕಮಾಂಡ್ ರಾಜೀನಾಮೆ ಪಡೆಯುವಂತೆ ಸೂಚಿಸಿತ್ತು. ರಾಜಣ್ಣ ರಾಜೀನಾಮೆ ನೀಡಿ, ಅದನ್ನು ರಾಜ್ಯಪಾಲರು ಅಂಗೀಕಾರ ಮಾಡಿದ್ದಾರೆ.
ಕೆ.ಎನ್.ರಾಜಣ್ಣ ತಮ್ಮದೇ ಪಕ್ಷದ ನಾಯಕರ ವಿರುದ್ಧ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಪಕ್ಷ, ಹಿರಿಯ ನಾಯಕರು ಮುಜುಗುರಕ್ಕೀಡಾಗುವಂತೆ ಕೆ.ಎನ್. ರಾಜಣ್ಣ ಅನೇಕ ಬಾರಿ ಹೇಳಿಕೆ ನೀಡಿದ್ದಾರೆ. ಆದರೆ ಈ ಬಾರಿ ಅದು ಅವರ ರಾಜೀನಾಮೆಗೆ ಕಾರಣವಾಗಿದೆ.
ಪಕ್ಷಕ್ಕೆ ಹಾನಿಯುಂಟು ಮಾಡುವಂತಕ ಹೇಳಿಕೆಗಳಿಂದ ರಾಜಣ್ಣ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ ಕಳ್ಳತನ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದರಲ್ಲಿ ಮಹದೇವಪುರ ಕ್ಷೇತ್ರದ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ ಎಂದು ಆರೋಪಿಸಿದ್ದರು. ಆದರೆ, ರಾಜಣ್ಣ, ಮಹದೇವಪುರದಲ್ಲಿ ನಮ್ಮ ಲೋಪ ಇದೆ. ಲೋಕಸಭೆ ಚುನಾವಣೆ ವೇಳೆ ನಾವೇ ಅಧಿಕಾರದಲ್ಲಿದ್ದೆವು ಎಂದಿದ್ದರು.
ವೋಟರ್ ಐಡಿ ಮತ್ತು ಮತದಾನ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ರಾಹುಲ್ ಗಾಂಧಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟಿಸಿದ್ದರು. ಆದರೆ ರಾಜಣ್ಣ, ನಮ್ಮ ಸರ್ಕಾರವೇ ಅಧಿಕಾರದಲ್ಲಿತ್ತು. ನಮಗೇ ಅವಮಾನ ಆಗಬೇಕು ಎಂದಿದ್ದರು. ಹೀಗಾಗಿ ಕಾಂಗ್ರೆಸ್ ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪ ಹಿನ್ನೆಲೆ ರಾಜಣ್ಣ ವಿರುದ್ಧ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು.
ವಿವಾದಾತ್ಮಕ ಹೇಳಿಕೆ: ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ರಾಜಣ್ಣ ಗುರುತಿಸಿಕೊಂಡಿದ್ದರೂ ಕೂಡ ಆಗಾಗ ಅವರು ನೀಡುತ್ತಿದ್ದ ವಿವಾದಾತ್ಮಕ ಹೇಳಿಕೆಗಳೇ ಕೆ.ಎನ್.ರಾಜಣ್ಣಗೆ ಮುಳುವಾಯ್ತಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಕೆಪಿಸಿಸಿ ಅಧ್ಯಕ್ಷರ ಆಯ್ಕೆ, ಮುಖ್ಯಮಂತ್ರಿ ಬದಲಾವಣೆ ವಿಚಾರ, ಹನಿಟ್ರ್ಯಾಪ್, ಸೆಪ್ಟಂಬರ್ ಕ್ರಾಂತಿ ಸೇರಿದಂತೆ ಈಗ ಮತ ಕಳ್ಳತನ ವಿಷಯವಾಗಿ ಕೆ.ಎನ್.ರಾಜಣ್ಣ ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ಪಕ್ಷದ ನಾಯಕರಿಗೆ ಮುಜುಗರವನ್ನು ಉಂಟು ಮಾಡಿದ್ದವು. ರಾಜಣ್ಣ ನೀಡಿದ ಕೆಲವು ವಿವಾದಾತ್ಮಕ ಹೇಳಿಕೆಗಳ ಪಟ್ಟಿ ಇಲ್ಲಿದೆ.
ಸುರ್ಜೇವಾಲಾ ಜತೆ ಜಟಾಪಟಿ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಸರಕಾರಿ ಅಧಿಕಾರಿಗಳ ಸಭೆ ಕರೆದಿದ್ದನ್ನು “ಕಾನೂನು ಬಾಹಿರ” ಎಂದು ಖಡಕ್ಕಾಗಿ ಸಭೆಗೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಸಹಕಾರ ಇಲಾಖೆಯ ಅಧಿಕಾರಿಗಳು ಸಭೆಗೆ ಕರೆದಾಗ, ಹೋಗಬೇಕೇ ಎಂದು ತಮ್ಮನ್ನು ಕೇಳಿದ್ದಾಗ ರಾಜಣ್ಣ, “ಯಾವುದೇ ಕಾರಣಕ್ಕೂ ಸಭೆಗೆ ಹೋಗಬೇಡಿ, ಹೋದರೆ ಶಿಸ್ತುಕ್ರಮ ಜರುಗಿಸಲಾಗುವುದು” ಎಂದು ತಾವು ಖಡಕ್ ಎಚ್ಚರಿಕೆ ನೀಡಿರುವುದಾಗಿ ಹೇಳಿದ್ದರು.
ಸುರ್ಜೇವಾಲಾ ಶಾಸಕರನ್ನು ಕರೆದು ಸಭೆ ಮಾಡಬಹುದು. ಆದರೆ, ಸರಕಾರಿ ಅಧಿಕಾರಿಗಳನ್ನು ಕರೆದು ಸಭೆ ಮಾಡುವುದು ಎಂದರೆ ಅದು ಸಂವಿಧಾನಬಾಹಿರ ಕೃತ್ಯ. ಅಧಿಕಾರಿಗಳನ್ನು ಕರೆದು ಅವರ ಜೊತೆಗೆ ಸಭೆ ನಡೆಸಿ ಚರ್ಚೆ ಮಾಡುವುದು ಸಂವಿಧಾನ ವಿರೋಧಿ ಕೆಲಸ ಎಂದಿದ್ದರು. ರಣದೀಪ್‌ಸಿಂಗ್ ಸುರ್ಜೇವಾಲಾ ‘ನನಗೇನು ತಾಕೀತು ಮಾಡುತ್ತಾರೆ’ ಎಂದು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದರು.
ಹನಿ-ಟ್ರ್ಯಾಪ್: ಹನಿ-ಟ್ರ್ಯಾಪ್ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದ ರಾಜಣ್ಣ, ತಾವೂ ಸೇರಿ 48 ರಾಜಕಾರಣಿಗಳು ಹನಿ-ಟ್ರ್ಯಾಪ್‌ಗೆ ಒಳಪಟ್ಟಿದ್ದೇವೆ ಎಂದಿದ್ದರು. ಈ ವಿಷಯ ಸದನದಲ್ಲಿ ಕೂಡ ಚರ್ಚೆಯಾಗಿತ್ತು. ಅಲ್ಲದೇ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂದು ಹೇಳಿಕೆ ನೀಡುತ್ತಿದ್ದಂತೆ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮತ್ತೇ ಮುನ್ನೆಲೆಗೆ ಬಂದಿತ್ತು. ಎಸ್ಸಿ ಎಸ್ಟಿ ಶಾಸಕರ ಸಭೆ ನಡೆಸಲು ಮುಂದಾಗಿದ್ದಾಗ ಅವರಿಗೆ ಹೈಕಮಾಂಡ್ ಅನುಮತಿ ನೀಡಲಿಲ್ಲ. ಹೀಗಾಗಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಸೆಪ್ಟೆಂಬರ್ ಕ್ರಾಂತಿ: ʻಸೆಪ್ಟೆಂಬರ್ ನಂತರ ಕ್ರಾಂತಿ ಆಗಲಿದೆ’ ಎಂಬ ರಾಜಣ್ಣ ಅವರ ಹೇಳಿಕೆ ರಾಜ್ಯ ಕಾಂಗ್ರೆಸ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಜತೆಗೆ ಈ ಹೇಳಿಕೆಯಿಂದಾಗಿ ಮುಖ್ಯಮಂತ್ರಿ ಬದಲಾವಣೆಯ ವದಂತಿಗೆ ಮತ್ತೆ ರೆಕ್ಕೆಪುಕ್ಕ ಬಂದಂತಾಗಿತ್ತು.