ಬೆಂಗಳೂರು: 2023ರಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೊಬ್ಬ ಸಚಿವರು ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದ ಸಿದ್ದರಾಮಯ್ಯ ಆಪ್ತರಾದ ಮಧುಗಿರಿ ಶಾಸಕ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ರಾಜೀನಾಮೆ ಕೊಟ್ಟಿದ್ದಾರೆ.
ಕೆ.ಎನ್.ರಾಜಣ್ಣ ಪೂರ್ಣ ಹೆಸರು ಕ್ಯಾತ್ಸಂದ್ರ ಎನ್. ರಾಜಣ್ಣ. 1951 ಏಪ್ರಿಲ್ 13 ರಂದು ಜನಿಸಿದ ಬಿಎಸ್‌ಸಿ, ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. 1972ರಲ್ಲಿ ಸಹಕಾರಿ ಕ್ಷೇತ್ರದಿಂದಲೇ ತಮ್ಮ ಸಾರ್ವಜನಿಕ ಜೀವನ ಪ್ರಾರಂಭಿಸಿದ ರಾಜಣ್ಣ, ಈ ಹಿಂದೆ ಭಾರತದ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ ನಿರ್ದೇಶಕರಾಗಿ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಕ್ಯಾತ್ಸಂದ್ರ ನಗರ ಪಂಚಾಯತ್ ಅಧ್ಯಕ್ಷರಾಗಿ 1976ರಲ್ಲಿ ಆಯ್ಕೆಯಾಗಿದ್ದರು. 1980-1984ರ ನಡುವೆ ತುಮಕೂರು ಜಿಲ್ಲಾ ಘಟಕದ ಐಎನ್‌ಸಿಯ ಯುವ ಕಾಂಗ್ರೆಸ್ ವಿಭಾಗದ ಮುಖ್ಯಸ್ಥರಾಗಿದ್ದರು.
1998 ರಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ 6 ವರ್ಷಗಳ ಅವಧಿ ಪೂರೈಸಿದರು. ಬಳಿಕ 2004ರಲ್ಲಿ ಬೆಳ್ಳಾವಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಮಧುಗಿರಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆಲುವು ಸಾಧಿಸಿದರು.
2013ರಲ್ಲೂ ರಾಜಣ್ಣ ಮಧುಗಿರಿಯಿಂದ ಸ್ಪರ್ಧಿಸಿ ಮತ್ತೆ ವಿಧಾನಸಭೆ ಪ್ರವೇಶಿಸಿದರು. 2023ರಲ್ಲಿ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿಕೊಂಡೇ ಕೆ.ಎನ್.ರಾಜಣ್ಣ ಚುನಾವಣಾ ಪ್ರಚಾರ ಮಾಡಿದರು, ಗೆದ್ದು ಬಂದರು.
ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಹಕಾರ ಸಚಿವರಾದರು. ಸದ್ಯ ವಿವಾದಾತ್ಮಕ ಹೇಳಿಕೆಗಳಿಂದಾಗಿ ಹೈಕಮಾಂಡ್ ಕೆಂಗೆಣ್ಣಿಗೆ ಗುರಿಯಾಗಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರ ವಿಧಾನ ಪರಿಷತ್ ಸದಸ್ಯರು.
ರಾಜಕೀಯ ನಿವೃತ್ತಿ: ನನಗೆ 75 ವರ್ಷ ಆಯ್ತು, ಮುಂದೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಆದರೆ ಸಹಕಾರಿ ಕ್ಷೇತ್ರ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಕೆಎನ್ ರಾಜಣ್ಣ ಮೇ ತಿಂಗಳಿನಲ್ಲಿಯೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು. ಅಲ್ಲದೇ ಯುವಕರಿಗೆ ಅವಕಾಶ ನೀಡಬೇಕು ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದ್ದರು.
ಮುಂದಿನ ಚುನಾವಣೆ 2028ರಲ್ಲಿ ನಡೆಯುತ್ತೆ. ಆ ವೇಳೆಗೆ ನನಗೆ 78 ವರ್ಷ ಆಗುವುದು. ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೂ, ಆರೋಗ್ಯ ಕಾರಣದಿಂದಾಗಿ ಜನತೆಗೆ ಸೇವೆ ಸಲ್ಲಿಸುವುದು ಕಷ್ಟವಾಗುತ್ತದೆ. ಆದ್ದರಿಂದ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ನಾನು ರಾಜಕೀಯದಲ್ಲಿ ಸಕ್ರಿಯನಾಗಿರುತ್ತೇನೆ ಎಂದು ಹೇಳಿದ್ದರು.
ಇನ್ನೂ ರಾಜೀನಾಮೆ ಕುರಿತಂತೆ ಮಾತನಾಡಿರುವ ಕೆ.ಎನ್. ರಾಜಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬಳಿಕ ಈ ಕುರಿತಂತೆ ಸ್ಪಷ್ಟನೆ ನೀಡುತ್ತೇನೆ. ಯಾವ ವಿಚಾರವಾಗಿ ಹೈಕಮಾಂಡ್ ನನ್ನ ಮೇಲೆ ಗರಂ ಆಗಿದೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.