ರಾಯಚೂರು: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಚಿವರ ವಿರುದ್ಧ ಶಾಸಕರ ಅಸಮಾಧಾನ, ಶಾಸಕಿಯ ಪ್ರತಿಭಟನೆ, ಮೊಬೈಲ್‌ನಲ್ಲಿ ಅಧಿಕಾರಿಯೋರ್ವ ರಮ್ಮಿ ಆಡಿದ ಘಟನೆ ನಡೆದಿದೆ.
ಅಧಿಕಾರಿಗಳು ಸೂಕ್ತ ಮಾಹಿತಿ ನೀಡುವುದಿಲ್ಲ. ಶಾಸಕರನ್ನು ಕಡೆಗಣಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದರೂ ಅಭಿವೃದ್ಧಿಯಾಗಿಲ್ಲ ಎಂಬ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಅವರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರ ವಿರುದ್ಧ ತೀವ್ರ ಆಕ್ರೋಶಗೊಂಡರು.
ಮಸ್ಕಿ ಕ್ಷೇತ್ರದ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈತರ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿದ ಶಾಸಕರು. ಡಿಸಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ದೇವದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಟೋಲ್‌ಗೇಟ್ ನಿರ್ಮಾಣದಿಂದ ಕ್ಷೇತ್ರದ ಸಾರ್ವಜನಿಕರಿಗೆ ಅನೇಕ ಸಮಸ್ಯೆಗಳಾಗಿದ್ದು, ಕೂಡಲೇ ಅದನ್ನು ಸ್ಥಗಿತಗೊಳಿಸಬೇಕು, ಶಾಸಕರಿಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡುತ್ತಿಲ್ಲ ಎಂದು ದೇವದುರ್ಗ ಶಾಸಕಿ ಕರಿಯಮ್ಮ ನಾಯಕ ಅವರು ಕೆಡಿಪಿ ಸಭೆಯಲ್ಲಿ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ ಎಂಬುವವರು ಮೊಬೈಲ್‌ನಲ್ಲಿ ರಮ್ಮಿ ಆಟದಲ್ಲಿ ಮಗ್ನವಾಗಿದ್ದರು. ಇದನ್ನು ಸಭೆಯಲ್ಲಿ ಸಚಿವರ ಗಮನಕ್ಕೆ ತಂದ ನಂತರ ಅಧಿಕಾರಿಗೆ ತೀವ್ರ ತರಾಟೆಗೆ ತೆಗೆದುಕೊಂಡು ಸಚಿವರ ಸಭೆಯಿಂದ ಹೊರಗೆ ಕಳುಹಿಸಿದರು. ಅಲ್ಲದೇ ಅಧಿಕಾರಿ ವಿರುದ್ಧ ನೋಟಿಸ್ ಜಾರಿಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿನೆ ನೀಡಿದರು.