Home ಸುದ್ದಿ ವಿದೇಶ ‘ಇಂಡಿಯಾ ಔಟ್’ ಎಂದಿದ್ದವರಿಂದಲೇ ಮೋದಿಗೆ ರೆಡ್‌ ಕಾರ್ಪೆಟ್ ಸ್ವಾಗತ

‘ಇಂಡಿಯಾ ಔಟ್’ ಎಂದಿದ್ದವರಿಂದಲೇ ಮೋದಿಗೆ ರೆಡ್‌ ಕಾರ್ಪೆಟ್ ಸ್ವಾಗತ

0

ನವದೆಹಲಿ: ಮಾಲ್ಡೀವ್ಸ್‌ನ 60ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸದ್ಯ ಇಂಗ್ಲೆಂಡ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಲಂಡನ್‌ನಿಂದ ಮಾಲ್ಡೀವ್ಸ್‌ಗೆ ತೆರಳಲಿದ್ದಾರೆ. ಜುಲೈ 26ರಂದು ಮಾಲ್ಡೀವ್ಸ್‌ ತನ್ನ 60ನೇ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ಈ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮಾಲ್ಡೀವ್ಸ್‌ ಭೇಟಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ, ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಗೂ ಈ ವರ್ಷ 60ನೇ ವಾರ್ಷಿಕೋತ್ಸವ. ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸ್ಥಾಪಿಸಲು, ನಮ್ಮ ಸಹಕಾರವನ್ನು ಬಲಪಡಿಸಲು ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಝು ಅವರ ನಾಯಕತ್ವದೊಂದಿಗಿನ ಸಭೆಗಳನ್ನು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಈ ಭೇಟಿ ಎಲ್ಲ ಜನರಿಗೂ ಪ್ರಯೋಜನಕಾರಿಯಾಗಿರಲಿದೆ ಎಂದು ಹೇಳಿದ್ದಾರೆ.

‘ಇಂಡಿಯಾ ಔಟ್’ ಚುನಾವಣಾ ಪ್ರಚಾರ: ಮೊಹಮ್ಮದ್ ಮುಯಿಝು ಅವರು ನವೆಂಬರ್‌ 2023ರಲ್ಲಿ ‘ಇಂಡಿಯಾ ಔಟ್’ ಎಂಬ ಚುನಾವಣಾ ಪ್ರಚಾರದೊಂದಿಗೆ ಮಾಲ್ಡೀವ್ಸ್‌ನಲ್ಲಿ ಅಧಿಕಾರಕ್ಕೆ ಬಂದಿದ್ದರು. ಇದರಿಂದಾಗಿ ಮುಯಿಝು ಚೀನಾ ಪರ ಎಂದು ಪರಿಗಣಿಸಲಾಗಿತ್ತು. ಅಲ್ಲದೇ ಭಾರತದೊಂದಿಗಿನ ಮಾಲ್ಡೀವ್ಸ್‌ ಸಂಬಂಧ ಕೂಡ ಹಳಸಿತ್ತು.

ಸದ್ಯ ಜುಲೈ 25ರಿಂದ 26ರ ವರೆಗೆ ಮಾಲ್ಡೀವ್ಸ್‌ಗೆ ಪ್ರಧಾನಿ ಮೋದಿಯವರ ಭೇಟಿ ದ್ವಿಪಕ್ಷೀಯ ಸಂಬಂಧಗಳ ಪುನಃಸ್ಥಾಪನೆಗೆ ಮಹತ್ವದ್ದಾಗಿದೆ. ಎರಡೂ ದೇಶಗಳ ಸಂಬಂಧಗಳನ್ನು ಮತ್ತಷ್ಟು ಗಾಢವಾಗಿಸಲು ಮತ್ತು ಬಲಪಡಿಸಲು ಅವಕಾಶವನ್ನು ಒದಗಿಸುತ್ತದೆ.

ಇದು ಮಾಲ್ಡೀವ್ಸ್‌ಗೆ ನರೇಂದ್ರ ಮೋದಿಯವರ ಮೂರನೇ ಭೇಟಿಯಾಗಿದ್ದು, ಅಧ್ಯಕ್ಷ ಮುಯಿಝು ಅಧಿಕಾರ ವಹಿಸಿಕೊಂಡ ನಂತರ ಮೊದಲ ಭೇಟಿಯಾಗಿದೆ. ಅಕ್ಟೋಬರ್ 2024ರಲ್ಲಿ ರಾಷ್ಟ್ರಪತಿ ಮುಯಿಝು ಅವರು ಭಾರತಕ್ಕೆ ತಮ್ಮ ಮೊದಲ ದ್ವಿಪಕ್ಷೀಯ ಭೇಟಿಯನ್ನು ಕೈಗೊಂಡಿದ್ದು, ಈ ಸಂದರ್ಭದಲ್ಲಿ ಭಾರತ-ಮಾಲ್ಡೀವ್ಸ್ ಜಂಟಿ ದೃಷ್ಟಿಕೋನವಾದ ‘ಸಮಗ್ರ ಆರ್ಥಿಕ ಮತ್ತು ಸಮುದ್ರ ಭದ್ರತಾ ಸಹಕಾರ’ ವನ್ನು ಕೂಡಾ ಒಪ್ಪಿಕೊಳ್ಳಲಾಗಿತ್ತು.

ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಅಂತಿಮ ಸ್ವರೂಪ ನೀಡುವುದು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದು ಪ್ರಮುಖ ಗುರಿಯಾಗಿದ್ದು, ಭೇಟಿ ವೇಳೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮುಯಿಝು ದ್ವಿಪಕ್ಷೀಯ ವಿಷಯಗಳನ್ನು ಚರ್ಚಿಸುತ್ತಾರೆ. ಸಮಗ್ರ ಆರ್ಥಿಕ ಮತ್ತು ಕಡಲ ಭದ್ರತಾ ಪಾಲುದಾರಿಕೆಗಾಗಿ ಭಾರತ-ಮಾಲ್ಡೀವ್ಸ್ ಜಂಟಿ ದೃಷ್ಟಿಕೋನದ ಅನುಷ್ಠಾನದಲ್ಲಿನ ಪ್ರಗತಿಯನ್ನು ಪರಿಶೀಲಿಸುತ್ತಾರೆ.

ಭಾರತವು ಮಾಲ್ಡೀವ್ಸ್‌ಗೆ 2024-25ರಲ್ಲಿ 470 ಕೋಟಿ ರೂ. ನಿಂದ 600 ಕೋಟಿ ರೂ.ಗೆ ಹೆಚ್ಚಳವಾದ ಲೈನ್ ಆಫ್ ಕ್ರೆಡಿಟ್ ಮತ್ತು ಕರೆನ್ಸಿ ಸ್ವಾಪ್ ಸೌಲಭ್ಯವನ್ನು ವಿಸ್ತರಿಸಿದೆ. ಇದು ಮಾಲ್ಡೀವ್ಸ್‌ನ ಆರ್ಥಿಕ ಸಂಕಷ್ಟ ನಿವಾರಿಸಲು ನೆರವಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version