ನವದೆಹಲಿ: 4 ದಿನಗಳ ಯುನೈಟೆಡ್ ಕಿಂಗ್‌ಡಮ್ ಹಾಗೂ ಮಾಲ್ಡೀವ್ಸ್ ಪ್ರವಾಸಕ್ಕಾಗಿ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ತಡರಾತ್ರಿ ಲಂಡನ್ ತಲುಪಿದ್ದಾರೆ. ಲಂಡನ್‌ನಲ್ಲಿರುವ ಭಾರತೀಯ ಸಮುದಾಯ ಪ್ರಧಾನಿ ನರೇಂದ್ರ ಮೋದಿಯನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದು, ಸಾಂಸ್ಕೃತಿಕ ತಂಡಗಳು ದೇಶದ ವಿಭಿನ್ನ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಪ್ರದರ್ಶನ ನೀಡಿದರು.
ಬ್ರಿಟನ್ ಪ್ರಧಾನಿ ಕೇರ್ ಸ್ಟಾರ್ಮರ್ ಭೇಟಿಯ ಬಳಿಕ ನರೇಂದ್ರ ಮೋದಿ ಮೂರನೇ ಕಿಂಗ್ ಚಾರ್ಲ್ಸ್ ಭೇಟಿಯಾಗಲಿದ್ದಾರೆ. ವಿದೇಶ ಪ್ರವಾಸದಲ್ಲಿರುವ ಮೋದಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಕೀರ್ ಸ್ಟಾಮರ್ ಜೊತೆ ಮಾತುಕತೆ ನಡೆಸಲಿದ್ದಾರೆ.
ದ್ವಿಪಕ್ಷೀಯ ಮಾತುಕತೆ: ಈ ವೇಳೆ ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಅಂತಿಮ ಸಹಿ ಹಾಕುವ ಸಾಧ್ಯತೆ ಇದೆ. ಮೂರು ವರ್ಷಗಳ ಚರ್ಚೆಯ ಬಳಿಕ ಮೇ ತಿಂಗಳಲ್ಲಿ ಒಪ್ಪಂದಕ್ಕೆ ಅಂತಿಮ ರೂಪ ನೀಡಲಾಗಿದ್ದು, ಇದು ಭಾರತದ ಶೇ.99 ರಷ್ಟು ರಫ್ತುಗಳ ಮೇಲಿನ ಸುಂಕವನ್ನು ತೆಗೆದುಹಾಕಲಿದೆ. ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕುವ ನಿರೀಕ್ಷೆ ಇದೆ. ಈ ಒಪ್ಪಂದ ಎರಡೂ ದೇಶಗಳ ಆರ್ಥಿಕತೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು KNOW ಇಂಡಿಯಾ ಕಾರ್ಯಕ್ರಮದ ವಿಜೇತರನ್ನು ಭೇಟಿಯಾಗಿದ್ದಾರೆ. ಮುಖ್ಯವಾಗಿ ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದದಿಂದ ಪ್ರಸ್ತುತ ಇರುವ 60 ಶತಕೋಟಿ ಡಾಲರ್‌ನಿಂದ ವಹಿವಾಟು ದ್ವಿಗುಣಗೊಳ್ಳುವ ಸಾಧ್ಯತೆಗಳಿವೆ.
ಉಭಯ ನಾಯಕರು ರಕ್ಷಣೆ, ವ್ಯಾಪಾರ, ತಂತ್ರಜ್ಞಾನ ಸೇರಿದಂತೆ ಹಲವು ವಿಚಾರಗಳ ಜೊತೆಗೆ ಬ್ರಿಟನ್ ಉತ್ಪನ್ನಗಳಾದ ವಿಸ್ಕಿ ಮತ್ತು ಆಟೋಮೊಬೈಲ್‌ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಸುಲಭ ಪ್ರವೇಶ ಸಿಗಲಿದೆ. ಇದರೊಂದಿಗೆ ರಕ್ಷಣಾ ವಲಯ, ಶಿಕ್ಷಣ, ಸಂಶೋಧನೆ ಸೇರಿದಂತೆ ಹಲವು ಮಹತ್ವದ ವಿಷಯ ಪರಸ್ಪರ ಬಾಂಧವ್ಯ ವೃದ್ಧಿ ಕುರಿತು ಮಾತುಕತೆ ನಡೆಸಲಿದ್ದಾರೆ.
ತಮ್ಮ ವಿದೇಶ ಪ್ರವಾಸದ ಭಾಗವಾಗಿ ಮೋದಿ ಬ್ರಿಟನ್ ಭೇಟಿಯ ಬಳಿಕ ಮಾಲ್ಡೀವ್ಸ್‌ಗೆ ಭೇಟಿ ನೀಡಲಿದ್ದಾರೆ. ಶನಿವಾರ ಮಾಲ್ಡೀವ್ಸ್ 60ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿ ಮಾಲ್ಡೀವ್ಸ್‌ನ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
1965ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ 60ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಮಾಲ್ಡೀವ್ಸ್, ಈ ಸಂದರ್ಭದಲ್ಲಿ ಮೋದಿಯವರಿಗೆ ಗೌರವಾನ್ವಿತ ಸ್ವಾಗತವನ್ನು ನೀಡಲಿದೆ. ಮಾಲ್ಡೀವ್ಸ್‌ನ ರಾಷ್ಟ್ರಪತಿ ಮೊಹಮ್ಮದ್ ಮುಯಿಝು ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ಮೋದಿ, ಎರಡೂ ದೇಶಗಳ ನಡುವಿನ ಸಹಕಾರವನ್ನು ಗಾಢವಾಗಿಸುವ ಬಗ್ಗೆ ಚರ್ಚಿಸಲಿದ್ದಾರೆ.
ಬ್ರಿಟನ್ ಪ್ರಧಾನಿ ಕೇರ್ ಸ್ಟಾರ್ಮರ್ ಜೊತೆ ಜಾಗತಿಕ ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಈ ಭೇಟಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೂರನೇ ಕಿಂಗ್ ಚಾರ್ಲ್ಸ್ ಭೇಟಿಯಾಗಲಿದ್ದಾರೆ.