ಬೆಂಗಳೂರು: ಬೆಳ್ಳಂ ಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದೆ. ಕಲಬುರ್ಗಿ, ಬೆಂಗಳೂರು, ಮೈಸೂರು, ಕೊಪ್ಪಳ, ತುಮಕೂರು, ಬಳ್ಳಾರಿ ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದ್ದು. ಹಿರಿಯ ಐಎಎಸ್ ಅಧಿಕಾರಿಗಳು ಸೇರಿ ಹಲವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಲಾಗಿದೆ.
ಕಲಬುರಗಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸುನೀಲಕುಮಾರ್ ಚಂದ್ರಪ್ರಕಾಶ್ ಪ್ರಭಾ ಎಂಬುವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ (ಬಿ) ಗ್ರಾಮದ ನಿವಾಸಿಯಾಗಿರುವ ಸುನೀಲಕುಮಾರ್ ಸದ್ಯ ಕಲಬುರಗಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಐಎಎಸ್ ಅಧಿಕಾರಿ ಸೇರಿ ಮೂವರು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಆರ್.ಟಿ.ನಗರದಲ್ಲಿರುವ ಹಿರಿಯ ಐಎಎಸ್ ಅಧಿಕಾರಿ ವಾಸಂತಿ ಅಮರ್ ಮನೆ ಮೇಲೆ ದಾಳಿ ಮಾಡಲಾಗಿದೆ. ಸರ್ಕಾರಿ ಜಮೀನು ಅಕ್ರಮವಾಗಿ ಬೇರೆಯವರ ಹೆಸರಿಗೆ ವರ್ಗಾವಣೆ ಆರೋಪ ಕೇಳಿಬಂದಿದೆ. ವಾಸಂತಿ ಅಮರ್ ಬೆಂಗಳೂರು ನಗರ ವಿಶೇಷ ಡಿಸಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ತುಮಕೂರಿನ ಕೆಐಎಡಿಬಿ ಎಇಇ ರಾಜೇಶ್ ಅವರಿಗೆ ಸಂಬಂಧಿಸಿದ ನಗರದ ಎಸ್‌ಐಟಿ ಕಾಲೇಜು ಬಳಿ ಇರುವ ಕೆಐಎಡಿಬಿ ಕಚೇರಿ, ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿರುವ ಅವರ ತಂದೆಯ ಮನೆ, ಬೆಂಗಳೂರಿನ ಮನೆಯಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳ ತಂಡ ಮೂರು ಕಡೆ ಏಕ ಕಾಲಕ್ಕೆ ದಾಳಿ ನಡೆಸಿದೆ. ಲೋಕಾಯುಕ್ತ ಪೊಲೀಸರು ಮನೆ ಮತ್ತು ಕಚೇರಿಯಲ್ಲಿ ದಾಖಲೆ ಪರಿಶೀಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೊಪ್ಪಳ ನಗರದಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಸುನೀಲ ಮೇಗಳಮನಿ ನೇತೃತ್ವದಲ್ಲಿ ಅಭಿಷೇಕ ಬಡಾವಣೆ ಹಾಗೂ ಕೀರ್ತಿ ಕಾಲೋನಿಯಲ್ಲಿರುವ ಶೇಕು ಚವ್ಹಾಣ್ಗೆ ಸೇರಿದ ಎರಡು ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಎಸ್ .ಎಂ ಚವ್ಹಾಣ ಅವರ ಹುಬ್ಬಳ್ಳಿ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಾಳಿ ಮಾಡಿದ್ದಾರೆ. ಕೊಪ್ಪಳ ಮತ್ತು ಹುಬ್ಬಳ್ಳಿಯ ನಿವಾಸದಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಹುಬ್ಬಳ್ಳಿಯ ವಿದ್ಯಾನಗರದ ದತ್ತನಗರದಲ್ಲಿನ ನಲಮನೆಯಲ್ಲಿ ಅಪಾರ ಪ್ರಮಾಣ ನಗದು ಹಣ ಪತ್ತೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಬಳ್ಳಾರಿಯಲ್ಲಿ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ ಷಣ್ಮುಖ ಗೌಡ ಅವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೈಸೂರಿನಲ್ಲಿ ಇಬ್ಬರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿರುವ ಪಾಲಿಕೆ ಉಪ ವಿಭಾಗಧಿಕಾರಿ ವೆಂಕಟರಾಮ್ ಮನೆ ಮೇಲೆ ದಾಳಿ ಪರಿಶೀಲನೆ ನಡೆಸಿದೆ.