SL Bhyrappa: ಇನ್ನು ಬರವಣಿಗೆ ಸಾಕು ಎಂದು 8 ವರ್ಷದ ಹಿಂದೆ ಪೆನ್ನಿಟ್ಟರು

0
50

ಭೈರಪ್ಪನವರ ಇಪ್ಪತ್ತೈದು ಕಾದಂಬರಿಗಳ ಪೈಕಿ `ಉತ್ತರ ಕಾಂಡ’ (2017) ಕೊನೆಯದು. ಇದಾದ ನಂತರ ಅವರು ಬರವಣಿಗೆ ನಿಲ್ಲಿಸಿದರು. ಇನ್ನು ಗಟ್ಟಿ ಕೃತಿಗಳನ್ನು ರಚಿಸಲಾರೆ. ನೆನಪುಗಳು ಕೈಕೊಡುತ್ತಿವೆ. ವಯಸ್ಸು ಸಹಕರಿಸುತ್ತಿಲ್ಲ. ಅಧ್ಯಯನ ಮತ್ತು ತಿರುಗಾಟ ಸಾಧ್ಯವಾಗುತ್ತಿಲ್ಲ. ಅನುಭವ ದಟ್ಟವಾಗಿದೆ ಎಂಬ ಕಾರಣಕ್ಕೆ ಜಾಳುಜಾಳಾಗಿ ಬರೆಯುವುದು ನನ್ನ ಜಾಯಮಾನ ಅಲ್ಲ. ಯಾವಾಗ ಸಾಹಿತ್ಯಕವಾಗಿ ಘನವಾದುದನ್ನು ಕೊಡಲು ಸಾಧ್ಯವಿಲ್ಲವೋ ಆಗ ಬರೆಯುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಓದುಗರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬುದು ಅವರ ನಿಲುವಾಗಿತ್ತು.

1961ರಲ್ಲಿ ಪ್ರಕಟವಾದ `ಧರ್ಮಶ್ರೀ’ಯಿಂದ ಪರಿಗಣನೆಗೆ ತೆಗೆದುಕೊಂಡರೆ ಮುಂದಿನ ಅರ್ಧ ಶತಮಾನಕ್ಕೂ ಹೆಚ್ಚಿನ ಅವಧಿಯಲ್ಲಿ, ವರ್ಷಕ್ಕೆ ಒಂದರಂತೆ ಬರೆದಿದ್ದರೂ ಕನಿಷ್ಠ ಐವತ್ತೈದು ಕಾದಂಬರಿಗಳಾದರೂ ಬರಬೇಕಿತ್ತು. ಆದರೆ ಭೈರಪ್ಪ ಆ ಸಾಲಿನ ಲೇಖಕರಲ್ಲ.

ಅವರು ಕಾದಂಬರಿಯೊಂದನ್ನು ಮುಗಿಸಿದ ನಂತರ ಆರು ತಿಂಗಳು ಪ್ರಕಟಣೆಗೆ ಕೊಡುತ್ತಿರಲಿಲ್ಲ. ಕೃತಿಯ ಕುರಿತು ಮನನ ಹಾಗೂ ಅನಗತ್ಯ – ಅಗತ್ಯ ತಿದ್ದುಪಡಿಗಳಿಗೆ ಇಷ್ಟು ಸಮಯ ಬೇಕು ಎಂಬುದು ಅವರ ಸಿದ್ಧಾಂತವಾಗಿತ್ತು. ಆಮೇಲೆ ಮತ್ತೊಮ್ಮೆ ಮರು ಓದು ಮಾಡಿಯೇ ಪ್ರಕಾಶಕರಿಗೆ ಕೊಡುತ್ತಿದ್ದರು. ಉಳಿದಂತೆ ಯಾವುದೇ ವಸ್ತುವನ್ನು ಕೈಗೆತ್ತಿಕೊಂಡರೂ ಆ ವಿಷಯಕ್ಕೆ ಸಂಬಂಧಿಸಿದ ಓದು, ಓಡಾಟ ಮತ್ತು ಮಂಥನಗಳನ್ನು ಮುಗಿಸಿಯೇ ಬರೆಯಲು ಕೂರುತ್ತಿದ್ದರು. ಹೀಗಾಗಿಯೇ ಕೇವಲ ಮೌಲಿಕವಾದ ಕಥಾ ವಸ್ತುಗಳು ಮಾತ್ರ ಭೈರಪ್ಪನವರಿಂದ ಹೊರಹೊಮ್ಮಿವೆ.

ಪ್ರಶಸ್ತಿ ಪುರಸ್ಕಾರಗಳು
ಟಿ ಪದ್ಮಭೂಷಣ ಮತ್ತು ಪದ್ಮಶ್ರೀ
ಸರಸ್ವತಿ ಸಮ್ಮಾನ್
ನಾಡೋಜ; ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ
ಪಂಪ ಪ್ರಶಸ್ತಿ
ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ದಾಟು ಮತ್ತು ವಂಶವೃಕ್ಷ)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ದಾಟು)
ಬ್ರಿಟಿಷ್ ಕೌನ್ಸಿಲ್ ಫೆಲೋಷಿಪ್
ರಾಜ್ಯ ಸಾಹಿತ್ಯ ಅಕಾಡೆಮಿ ವಿಶೇಷ ಪ್ರಶಸ್ತಿ (ಒಟ್ಟಾರೆ ಸಾಹಿತ್ಯಕ್ಕಾಗಿ)
ರಾಜ್ಯೋತ್ಸವ ಪ್ರಶಸ್ತಿ
ಗ್ರಂಥಲೋಕ ಪ್ರಶಸ್ತಿ (ಸಾಕ್ಷಿ)
ಗೊರೂರು ಸಾಹಿತ್ಯ ಪ್ರಶಸ್ತಿ
ಎಸ್.ಆರ್. ಪಾಟೀಲ ಸಾಹಿತ್ಯ ಪ್ರಶಸ್ತಿ
ಸಾಮಾನ್ಯ ಜ್ಞಾನ ಸಾಹಿತ್ಯ ಪ್ರಶಸ್ತಿ
ನೃಪತುಂಗ ಪ್ರಶಸ್ತಿ
ಶ್ರೀ ಕೃಷ್ಣ ದೇವರಾಯ ಪ್ರಶಸ್ತಿ
ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ
ಎನ್‌ಟಿಆರ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ

ಕರ್ನಾಟಕ, ಮೈಸೂರು ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್; ಸಾಹಿತ್ಯ ಅಕಾಡೆಮಿ ಫೆಲೋಶಿಪ್; ಪುಣೆಯ ವಾಗ್ವಿಲಾಸಿನಿ ಪುರಸ್ಕಾರ

ಕನಕಪುರದಲ್ಲಿ 1999ರಲ್ಲಿ ನಡೆದ 67ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ

ಭೀಮಕಾಯ ಮತ್ತು ಬೆಳಕು ಮೂಡಿತು (ಇವೆರಡು ಕಾದಂಬರಿಗಳನ್ನು ಭೈರಪ್ಪ ಧರ್ಮಶ್ರೀಗಿಂತ ಮೊದಲು ರಚಿಸಿದ್ದಾರೆ. ಆದರೆ ಸಾಹಿತ್ಯಕವಾಗಿ ಇವುಗಳಲ್ಲಿ ಸತ್ವ ಇಲ್ಲ ಎಂಬುದು ಸ್ವತಃ ಅವರದ್ದೇ ಅಭಿಪ್ರಾಯವಾಗಿತ್ತು. ಧರ್ಮಶ್ರೀ ಮೂಲಕ ನನ್ನ ಕಾದಂಬರಿ ಕೃಷಿ ಆರಂಭ ಎಂಬುದೂ ಅವರ ಅನಿಸಿಕೆಯಾಗಿತ್ತು).

ಬಿತ್ತಿ – ಆತ್ಮಕಥೆ (ಇದನ್ನು ಕನ್ನಡದ ಅತ್ಯಂತ ಸೃಜನಾತ್ಮಕ ಆತ್ಮಕಥೆ ಎಂದು ವಿಮರ್ಶಾ ವಲಯ ಶ್ಲಾಘಿಸಿದೆ).

ನಾಲ್ಕು ಗದ್ಯ ಮಹಾಕಾವ್ಯಗಳು (ಪರ್ವ, ತಂತು, ದಾಟು, ಮಂದ್ರ)

ನಾನೇಕೆ ಬರೆಯುತ್ತೇನೆ, ಸತ್ಯ ಮತ್ತು ಸೌಂದರ್ಯ, ಸಾಹಿತ್ಯ ಮತ್ತು ಪ್ರತೀಕ, ಕಥೆ ಮತ್ತು ಕಥಾವಸ್ತು (ಸೃಜನೇತರ ಕೃತಿಗಳು)

ಗತ ಜನ್ಮ ಮತ್ತೆರಡು ಕಥೆಗಳು (ಕಥಾ ಸಂಕಲನ; ಕಾಲೇಜಿನಲ್ಲಿದ್ದಾಗ ಬರೆದದ್ದು)

Previous articleಭೈರಪ್ಪ ಹೆಸರಿನ ಜತೆಗೊಂದು ಕುತೂಹಲಕರ ಕತೆ
Next articleರಾಮನಗರ ಜಿಲ್ಲೆಯ ಜನರ ಕನಸಾಗಿದ್ದ ಮಳಿಗೆ ಕಾರ್ಯಾರಂಭ

LEAVE A REPLY

Please enter your comment!
Please enter your name here