Home ಸುದ್ದಿ ರಾಜ್ಯ ಎಸ್.ಎಲ್.ಭೈರಪ್ಪ ನಿಧನ: ನರೇಂದ್ರ ಮೋದಿ ಸಂತಾಪ

ಎಸ್.ಎಲ್.ಭೈರಪ್ಪ ನಿಧನ: ನರೇಂದ್ರ ಮೋದಿ ಸಂತಾಪ

0

ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಸರಸ್ವತಿ ಸಮ್ಮಾನ್ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್.ಎಲ್. ಭೈರಪ್ಪ ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ, ಬಿ.ವೈ. ವಿಜಯೇಂದ್ರ ಮತ್ತು ಆರ್. ಅಶೋಕ್ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ, “ಎಸ್.ಎಲ್. ಭೈರಪ್ಪ ಅವರ ನಿಧನದೊಂದಿಗೆ, ನಮ್ಮ ಆತ್ಮಸಾಕ್ಷಿಯನ್ನು ಕದಲಿಸಿದ ಮತ್ತು ಭಾರತದ ಆತ್ಮವನ್ನು ಮುಟ್ಟಿದ ಒಬ್ಬ ಧೀಮಂತ ವ್ಯಕ್ತಿತ್ವವನ್ನು ನಾವು ಕಳೆದುಕೊಂಡಿದ್ದೇವೆ. ಅವರ ಬರಹಗಳು ಪೀಳಿಗೆಗಳನ್ನು ಚಿಂತಿಸಲು, ಪ್ರಶ್ನಿಸಲು ಮತ್ತು ಸಮಾಜದೊಂದಿಗೆ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದವು” ಎಂದು ಟ್ವೀಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ ಅವರು, “ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಉತ್ಕೃಷ್ಟ ಕಾದಂಬರಿಗಳನ್ನು ನೀಡಿ, ಲಕ್ಷಾಂತರ ಓದುಗರ ಮನಗೆದ್ದಿದ್ದ ಭೈರಪ್ಪನವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ” ಎಂದು ತಿಳಿಸಿದ್ದಾರೆ.

ಬಿ.ವೈ. ವಿಜಯೇಂದ್ರ, “ತಮ್ಮ ಸಾಹಿತ್ಯದ ಮೂಲಕ ಸಾಮಾನ್ಯ ಓದುಗರನ್ನೂ ಆಕರ್ಷಿಸುವ ಕಾದಂಬರಿಗಳನ್ನು ರಚಿಸಿ ಅಸಂಖ್ಯಾತ ಓದುಗರನ್ನು ಹೊಂದಿದ್ದ, ಹಲವು ಭಾಷೆಗಳಿಗೆ ಅನುವಾದಗೊಂಡು ಜಗತ್ತಿನಾದ್ಯಂತ ಸಾಹಿತ್ಯಾಭಿಮಾನಿಗಳನ್ನು ಹೊಂದಿದ್ದ ಕರುನಾಡಿನ ಹೆಮ್ಮೆ ಎಸ್.ಎಲ್. ಭೈರಪ್ಪನವರು ಈ ನೆಲದ ಸೊಬಗು ಹಾಗೂ ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸಿ ಕನ್ನಡಿಗರ ಹೆಗ್ಗಳಿಕೆಯಾಗಿದ್ದರು” ಎಂದು ಹೇಳಿದ್ದಾರೆ.

ಆರ್. ಅಶೋಕ್, “ತಮ್ಮ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ್ದ ಭೈರಪ್ಪನವರು, ಕನ್ನಡ ಮಾತ್ರವಲ್ಲದೆ ತಮ್ಮ ಅನುವಾದಿತ ಕೃತಿಗಳು ಮೂಲಕ ಭಾರತಾದ್ಯಂತ ಅನೇಕ ಭಾಷೆಗಳಲ್ಲಿ ಅಸಂಖ್ಯಾತ ಓದುಗ ಬಳಗವನ್ನು ಸಂಪಾದಿಸಿದ್ದರು” ಎಂದು ಸ್ಮರಿಸಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version