ಕಲಬುರಗಿ: ಧಾರಾಕಾರ ಸುರಿದ ಮಳೆಯಿಂದಾಗಿ ಕರ್ನಾಟಕ ಗಡಿ ಭಾಗದ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಾಕಿನಿ – ಮುಂಡೇವಾಡಿ ರೈಲು ನಿಲ್ದಾಣಗಳ ಮಧ್ಯೆ ಇರುವ ನದಿ ಸೇತುವೆ ಜಲಾವೃತಗೊಂಡಿರುವ ಹಿನ್ನೆಲೆ ಕಲಬುರಗಿಯಿಂದ ಪುಣೆ, ಮುಂಬೈಗೆ ಸಂಚರಿಸುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಚೆನ್ನೈನಿಂದ ಮುಂಬೈ ಕಡೆಗೆ ಹೋಗುವ ರೈಲು (12164) ಹಾಗೂ ಬೆಂಗಳೂರಿನಿಂದ ಮುಂಬೈ ಕಡೆಗೆ ಹೋಗುವ ಉದ್ಯಾನ ಎಕ್ಸ್ ಪ್ರೆಸ್ ರೈಲು (11302) ಸಂಚಾರದಲ್ಲಿ ವ್ಯತ್ಯಯವಾಗಿವೆ.
ಉದ್ಯಾನ ಎಕ್ಸ್ ಪ್ರೆಸ್ ರೈಲು ಕಲಬುರಗಿ ರೈಲು ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ, ಚೆನ್ನೈ ನಿಂದ ಮುಂಬೈಗೆ ಹೋಗುವ ರೈಲು ಬೆಳಗ್ಗೆ 6.15 ಗಂಟೆಗೆ ಹೊರಡಬೇಕಿತ್ತು. ಆದರೆ ಸೋಲಾಪುರ ಸಮೀಪದ ಸೇತುವೆ ಬಳಿ ನದಿ ನೀರು ಸೇತುವೆಯ ಮೇಲ್ಭಾಗದ ಸಮೀಪ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಈ ಎರಡು ರೈಲುಗಳನ್ನು ಮಧ್ಯಾಹ್ನ 3 ಗಂಟೆಯ ಬಳಿಕ ಬೀದರ್, ಲಾತುರ್ ಹಾಗೂ ಕುರ್ದವಾಡಿ ಮೂಲಕ ಸಂಚಾರ ನಡೆಸಲಿವೆ ಎಂದು ಕಲಬುರಗಿ ರೈಲು ನಿಲ್ದಾದ ವ್ಯವಸ್ಥಾಪಕ ಪಿ.ಜೆ. ಜಿಜಿಮೊನ್ ತಿಳಿಸಿದ್ದಾರೆ.
ಬೆಂಗಳೂರಿನಿಂದ ದೆಹಲಿಗೆ ಹೋಗುವ ಕರ್ನಾಟಕ ಎಕ್ಸ್ ಪ್ರೆಸ್ ರೈಲು (1227) ಕಲಬುರಗಿ ರೈಲು ನಿಲ್ದಾಣದಿಂದ ಬೆಳಗ್ಗೆ ಹೊರಟಿದ್ದು ಇದೀಗ ಕಲಬುರಗಿ – ಸೋಲಾಪುರ ರೈಲು ನಿಲ್ದಾಣದ ಮಧ್ಯೆ ನಿಂತಿದೆ ಎಂದು ತಿಳಿದುಬಂದಿದೆ.
ಅಲ್ಲದೆ, ಕಲಬುರಗಿಯಿಂದ ಕೊಲ್ಹಾಪುರ ಕಡೆಗೆ ಹೋಗುವ ಕೊಲ್ಹಾಪುರ ಎಕ್ಸ್ ಪ್ರೆಸ್ ಹಾಗೂ ಕಲಬುರಗಿ ಯಿಂದ ಬೀದರ್ ಕಡೆ ಹೋಗುವ ಡೆಮೋ ರೈಲು ರದ್ದುಪಡಿಸಲಾಗಿದೆ ಎಂದು ಸ್ಟೇಷನ್ ಮಾಸ್ಟರ್ ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರ ಪರದಾಟ: ಚೆನ್ನೈ ಹಾಗೂ ಬೆಂಗಳೂರಿನಿಂದ ಮುಂಬೈ, ದೆಹಲಿ ಕಡೆಗೆ ಹೋಗುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಆಗಿರುವ ಕಾರಣದಿಂದ ಅಂತರ ರಾಜ್ಯ ಪ್ರಯಾಣಿಕರು ಪರದಾಡಿರುವ ಘಟನೆ ಕಲಬುರಗಿ ರೈಲು ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆಯಿಂದ ನಡೆದಿದೆ.