ಕರ್ನಾಟಕದಲ್ಲಿ ಮಹಿಳಾ ಪೊಲೀಸರ ಕೊರತೆ

0
63

ಬೆಂಗಳೂರು: ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ.

ಬಿಹಾರ ದೇಶದಲ್ಲಿಯೇ ಹೆಚ್ಚು ಮಹಿಳಾ ಪೊಲೀಸರನ್ನು ಹೊಂದಿದ ರಾಜ್ಯವಾಗಿದ್ದು ಅಲ್ಲಿ ಶೇ. 23.66 ಮಹಿಳಾ ಪೊಲೀಸರು ಇದ್ದಾರೆ. ಇದಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಶೇ 8.91 ರಷ್ಟು ಮಹಿಳಾ ಪೊಲೀಸರು ಇದ್ದಾರೆ. ರಾಷ್ಟ್ರೀಯ ಅನುಪಾತದ ಪ್ರಕಾರ ರಾಜ್ಯದಲ್ಲಿ ಶೇ. 12.73 ರಷ್ಟು ಮಹಿಳಾ ಪೊಲೀಸರ ಸಂಖ್ಯೆ ಕಡಿಮೆ ಇದೆ. ಅಲ್ಲದೇ ರಾಜ್ಯದ ಸುಮಾರು ಮೂರನೇ ಎರಡರಷ್ಟು ಪೊಲೀಸ್ ಠಾಣೆಗಳಲ್ಲಿ ಸಹಾಯಕ ಸಬ್-ಇನ್‌ಸ್ಪೆಕ್ಟರ್ (ಎಎಸ್‌ಐ), ಸಬ್-ಇನ್‌ಸ್ಪೆಕ್ಟರ್ (ಎಸ್‌ಐ) ಅಥವಾ ಪೊಲೀಸ್ ಇನ್‌ಸ್ಪೆಕ್ಟರ್ (ಪಿಐ)ನಂತಹ ಪ್ರಮುಖ ತನಿಖಾ ಹುದ್ದೆಗಳಲ್ಲಿ ಒಬ್ಬ ಮಹಿಳಾ ಅಧಿಕಾರಿಯೂ ಇಲ್ಲದಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನರ‍್ಸಿಟಿಯ ಯೋಜನಾ ಅಧ್ಯಯನದ ಪ್ರಕಾರ (ಎನ್‌ಎಲ್‌ಎಸ್‌ಯು), ಎಂಟು ಜಿಲ್ಲೆಗಳ 202 ಪೊಲೀಸ್ ಠಾಣೆಗಳನ್ನು ಪರಿಶೀಲಿಸಿದಾಗ, ಕೇವಲ ಮೂರು ಠಾಣೆಗಳಲ್ಲಿ (ಮೈಸೂರಿನಲ್ಲಿ ಎರಡು ಮತ್ತು ದಾವಣಗೆರೆಯಲ್ಲಿ ಒಂದು) ಮಾತ್ರ ಮಹಿಳಾ ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಇರುವುದು ಕಂಡುಬಂದಿದೆ. 130 ಠಾಣೆಗಳಲ್ಲಿ ಒಬ್ಬರೂ ಮಹಿಳಾ ಎಸ್‌ಐ ಇರಲಿಲ್ಲ ಮತ್ತು ಕೇವಲ 9 ಠಾಣೆಗಳಲ್ಲಿ ಒಬ್ಬರು ಮಹಿಳಾ ಎಎಸ್‌ಐ ಇದ್ದರು.

2007ರಲ್ಲಿ ಮಹಿಳೆಯರ ಸೇರ್ಪಡೆ ಶೇ. 5.44ರಷ್ಟಿತ್ತು, ಆದರೆ, 2023ರ ಹೊತ್ತಿಗೆ ಇದು ಕೇವಲ ಶೇ. 8.91ಕ್ಕೆ ಏರಿಕೆಯಾಗಿದೆ. 2017ರಲ್ಲಿ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ) ಈ ಕೊರತೆಯನ್ನು ಎತ್ತಿ ತೋರಿಸಿದ ನಂತರ, ಸರ್ಕಾರವು 2020ರಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಶೇ. 25ಕ್ಕೆ ಹೆಚ್ಚಿಸಿತ್ತು. ಆದರೆ, ಕರ್ನಾಟಕ ಆಡಳಿತ ಸುಧಾರಣಾ ಆಯೋಗ (ಕೆಎಆರ್‌ಸಿ) ಪ್ರಕಾರ, ಪ್ರಸ್ತುತ ನೇಮಕಾತಿ ದರದಲ್ಲಿ ರಾಜ್ಯವು ತನ್ನದೇ ಆದ ಗುರಿ ತಲುಪಲು 25 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಲೈಂಗಿಕ ದೌರ್ಜನ್ಯ ಪ್ರಕರಣಗಳಂತಹ ಪ್ರಮುಖ ತನಿಖೆಗಳಿಂದ ದೂರವಿಡಲಾಗುತ್ತದೆ. ಬದಲಿಗೆ, ಅವರನ್ನು ಸಂತ್ರಸ್ತರ ಜೊತೆಗಿರಲು ಅಥವಾ ಹೇಳಿಕೆಗಳ ಸಮಯದಲ್ಲಿ ಹಾಜರಿರಲು ಮಾತ್ರ ಬಳಸಲಾಗುತ್ತದೆ. ರಾತ್ರಿ ಕರ್ತವ್ಯದ ಸಮಯದಲ್ಲಿ ಮಹಿಳಾ ಸಿಬ್ಬಂದಿಯ ಸುರಕ್ಷತೆ ಒಂದು ದೊಡ್ಡ ಸಮಸ್ಯೆಯಾಗಿದೆ. ಲಿಂಗ ಸಮಾನತೆ ಸಾಧಿಸುವುದು ಕೇವಲ ಸಾಂವಿಧಾನಿಕ ಅಗತ್ಯ ಮಾತ್ರವಲ್ಲ, ಅದು ಕಾರ್ಯಾಚರಣೆಯ ಅನಿವಾರ್ಯತೆಯಾಗಿದೆ.

ಮಹಿಳಾ ಸಿಬ್ಬಂದಿ ದಿನನಿತ್ಯದ ಪೊಲೀಸ್ ಕೆಲಸಗಳನ್ನೇ ಹೆಚ್ಚಾಗಿ ನಿರ್ವಹಿಸುತ್ತಾರೆ. ಆದರೆ, ಅವರಿಗೆ ಸೂಕ್ತ ಮೂಲಸೌಕರ್ಯಗಳಿಲ್ಲ. ಶೌಚಾಲಯಗಳ ಕೊರತೆ ಒಂದು ಪ್ರಮುಖ ಸಮಸ್ಯೆಯಾಗಿದ್ದು, ಅನೇಕ ಮಹಿಳಾ ಸಿಬ್ಬಂದಿ ಕರ್ತವ್ಯದ ಸಮಯದಲ್ಲಿ ನೀರು ಕುಡಿಯುವುದನ್ನೇ ಕಡಿಮೆ ಮಾಡುತ್ತಾರೆ. ಇದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಪೊಲೀಸ್ ಇಲಾಖೆಯೊಳಗೆ ಅನುಚಿತ ಮಾತು ಮತ್ತು ವರ್ತನೆ ಸಾಮಾನ್ಯವಾಗಿದ್ದರೂ, ಹಿರಿಯ ಅಧಿಕಾರಿಗಳ ಭಯದಿಂದ ಮಹಿಳೆಯರು ಇದರ ಬಗ್ಗೆ ಮಾತನಾಡುವುದಿಲ್ಲ.

ಶಸ್ತ್ರಾಸ್ತ್ರ ವಿಭಾಗದಲ್ಲಿಯೂ ತೀರಾ ಕಡಿಮೆ: ರಾಜ್ಯದ 9,081 ಮಹಿಳಾ ಸಿಬ್ಬಂದಿಯಲ್ಲಿ, 8,937 ಮಂದಿ ನಾಗರಿಕ ಪೊಲೀಸ್ ವಿಭಾಗದಲ್ಲಿದ್ದು, ಇದು ಆ ವಿಭಾಗದ ಶೇ. 12.69 ರಷ್ಟಿದೆ. ಆದರೆ, ಶಸ್ತ್ರಾಸ್ತ್ರ ದಳಗಳಲ್ಲಿ ಅವರ ಪಾಲು ಕೇವಲ ಶೇ. 1.58 ರಷ್ಟಿದೆ. ಕರ್ನಾಟಕದ ಜಿಲ್ಲಾ ಸಶಸ್ತ್ರ ಮೀಸಲುನಲ್ಲಿ ಒಬ್ಬ ಮಹಿಳಾ ಸಿಬ್ಬಂದಿಯೂ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ತಮಿಳುನಾಡಿನ ಶಸ್ತ್ರಾಸ್ತ್ರ ದಳದಲ್ಲಿ 6,966 ಮತ್ತು ಕೇರಳದಲ್ಲಿ ಸುಮಾರು ಶೇ. 20 ಮಹಿಳಾ ಪೊಲೀಸರು ಈ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Previous articleಬಾಗಲಕೋಟೆ: ಆಸ್ಪತ್ರೆಯಲ್ಲಿ ಶಾರ್ಟ್‌ ಸರ್ಕ್ಯೂಟ್, ರೋಗಿಗಳು ಜಿಲ್ಲಾಸ್ಪತ್ರೆಗೆ ಶಿಫ್ಟ್
Next articleಸೆಪ್ಟೆಂಬರ್ 26ರಂದು ರಾಜ್ಯಾದ್ಯಂತ ಚಿತ್ರಮಂದಿರದಲ್ಲಿ ʻಕುಂಟೆಬಿಲ್ಲೆ’

LEAVE A REPLY

Please enter your comment!
Please enter your name here