ಕಂದಾಯ ವ್ಯಾಜ್ಯ ಇತ್ಯರ್ಥಕ್ಕೆ 90 ದಿನ ಗಡುವು: ಸಚಿವ ಕೃಷ್ಣ ಬೈರೇಗೌಡ

0
89

ಬೆಂಗಳೂರು: ತಹಶೀಲ್ದಾರ್ ನ್ಯಾಯಾಲಯಗಳಲ್ಲಿನ ತಕರಾರು ಪ್ರಕರಣಗಳು ನಿಗದಿತ ದಿನಗಳ ಒಳಗೆ ವಿಲೇವಾರಿ ಆಗದಿದ್ದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಸಿದ್ದಾರೆ.
ಸೋಮವಾರ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ತಹಶೀಲ್ದಾರರುಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಸಚಿವರು, ಕಳೆದ ಎರಡು ವರ್ಷಗಳಿಂದ ತಹಶೀಲ್ದಾರ್ ನ್ಯಾಯಾಲಯಗಳ ತಕರಾರು ಅರ್ಜಿಗಳ ವಿಲೇ ಕೆಲಸ ಗಮನಾರ್ಹ ರೀತಿಯಲ್ಲಿ ಪ್ರಗತಿ ಕಂಡಿತ್ತು.

ಈ ಮೊದಲು ಒಂದು ಪ್ರಕರಣದ ಇತ್ಯರ್ಥಕ್ಕೆ ತಗಲುತ್ತಿದ್ದ 212 ದಿನವನ್ನು ಪ್ರಸ್ತುತ 82 ದಿನಕ್ಕೆ ಇಳಿಸಲಾಗಿತ್ತು. ಆದರೆ, ಇದೀಗ ತಕರಾರು ಅರ್ಜಿಗಳ ವಿಲೇ ಕೆಲಸ ಮತ್ತೆ ವೇಗ ಕಳೆದುಕೊಳ್ಳುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬೇಸರಿಸಿದರಲ್ಲದೆ, ಮುಂದಿನ ದಿನಗಳಲ್ಲಿ ಅಧಿಕಾರಿಗಳು 90 ದಿನ ಮೀರಿ ಒಂದು ಪ್ರಕರಣ ಉಳಿಸಿಕೊಂಡಿದ್ದರೂ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದೆಂದು ಪುನರುಚ್ಚರಿಸಿದರು.

ರಾಜ್ಯಾದ್ಯಂತ ಪೋಡಿ ದುರಸ್ಥಿ ಅಭಿಯಾನಕ್ಕೆ ಚಾಲನೆ ನೀಡಿದ್ದರೂ ಈ ಕೆಲಸ ನಿರೀಕ್ಷಿತ ವೇಗ ಪಡೆದಿಲ್ಲ, ದಕ್ಷಿಣ ಕನ್ನಡ ಹಾಗೂ ತುಮಕೂರು ಜಿಲ್ಲೆಯಲ್ಲಿ ಪೋಡಿ ದುರಸ್ಥಿ ಕೆಲಸ ಚುರುಕುಗೊಂಡಿದ್ದು ಇತರೆ ಜಿಲ್ಲೆಗಳೂ ಪೋಡಿ ದುರಸ್ಥಿ ಕೆಲಸಕ್ಕೆ ವೇಗ ನೀಡಬೇಕು. ಅಲ್ಲದೆ, ರೈತರ ಬಳಿ ಭೂ ಮಂಜೂರಿಗೆ ಸಂಬಂಧಿಸಿ ಕನಿಷ್ಠ 3 ದಾಖಲೆ ಇದ್ದರೂ ಸಹ ಅಂತಹ ಪ್ರಕರಣಗಳನ್ನು ಪೋಡಿ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.

ರಾಜ್ಯಾದ್ಯಂತ ತಹಶೀಲ್ದಾರ್ ಕಚೇರಿಗಳ ರೆಕಾರ್ಡ್ ರೂಮ್ಗಳಲ್ಲಿ 100 ಕೋಟಿ ಪುಟಗಳಷ್ಟು ಭೂ ದಾಖಲೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 37.6 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಅಲ್ಲದೆ, ಈಗಾಗಲೇ 6.32 ಲಕ್ಷ ಪುಟಗಳನ್ನು ಸ್ಕ್ಯಾನ್ ಮಾಡಿ ದಾಖಲೆಗಳ ಅಸಲಿಯತ್ತನ್ನು ಪರಿಶೀಲಿಸಿ ಸಾರ್ವಜನಿಕ ಡೊಮೈನ್ನಲ್ಲೂ ಅಪ್ಲೋಡ್ ಮಾಡಲಾಗಿದೆ. ಉಳಿದ ಕಡತಗಳನ್ನೂ ಈ ವರ್ಷಾಂತ್ಯದೊಳಗೆ ಅಭಿಯಾನ ಮಾದರಿ ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ರಾಜ್ಯದಲ್ಲಿ 52 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿದೆ. ಈ ಪೈಕಿ ಫೌತಿ ಖಾತೆ ಆಂದೋಲನದ ಮೂಲಕ 3,35,727 ಪ್ರಕರಣಗಳಲ್ಲಿ ಮೃತರ ಹೆಸರಿನಿಂದ ಅವರ ವಾರಸುದಾರರ ಹೆಸರಿಗೆ ಜಮೀನು ವರ್ಗಾವಣೆ ಮಾಡಲಾಗಿದೆ. ಆದರೆ, ಈ ಸಾಧನೆ ತೃಪ್ತಿಕರವಾಗಿಲ್ಲ. ತಹಶೀಲ್ದಾರರು ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ಹಕ್ಕುಪತ್ರ ನೀಡಿದಾಕ್ಷಣ ತಮ್ಮ ಕೆಲಸ ಮುಗಿಯಿತು ಎಂದು ವಿರಮಿಸುವಂತಿಲ್ಲ.

ಬದಲಿಗೆ ಇ-ಖಾತಾ ಜನರೇಟ್ ಮಾಡಿ ಇ-ಆಸ್ತಿ ಮಾಡಿಕೊಡ ಬೇಕು ಎಂದು ತಾಕೀತು ಮಾಡಿದ ಸಚಿವರು, ಈಗಾಗಲೇ ಕಳೆದ ಮೇ ತಿಂಗಳಲ್ಲಿ ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಗ್ರಾಮಗಳ 1.11 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಇನ್ನೂ 1.62 ಲಕ್ಷ ಕುಟುಂಬದ ಫಲಾನುಭವಿಗಳಿಗೆ ಇ-ಖಾತಾ- ನೋಂದಣಿ ಮಾಡಿಸಿದ ಪಕ್ಕಾ ಹಕ್ಕುಪತ್ರ ನೀಡುವ ಗುರಿಯನ್ನು ನವೆಂಬರ್ ತಿಂಗಳ ಅಂತ್ಯದೊಳಗೆ ಯಶಸ್ವಿಗೊಳಿಸಬೇಕು ಎಂದು ಗಡುವು ನೀಡಿದರು. ಸಭೆಯಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Previous articleನಮ್ಮ ಮೆಟ್ರೋ ಹಳದಿ ಮಾರ್ಗ ಆರಂಭ, ಡಬಲ್ ಡೆಕ್ಕರ್ ಫ್ಲೈ ಓವರ್‌ ಪೂರ್ಣವಾಗಿಲ್ಲ!
Next articleಧರ್ಮಸ್ಥಳ ಕೇಸ್: ಮಹೇಶ್​ ಶೆಟ್ಟಿ ತಿಮರೋಡಿ ಮನೆ ಮೇಲೆ ಎಸ್‌ಐಟಿ ದಾಳಿ

LEAVE A REPLY

Please enter your comment!
Please enter your name here