11 ತಿಂಗಳಲ್ಲಿ ₹4.71 ಲಕ್ಷ ಕೋಟಿ ನೈಜ ಹೂಡಿಕೆ; ಕರ್ನಾಟಕದ ನೆಲದಲ್ಲಿ ಉದ್ಯೋಗ–ಕೈಗಾರಿಕೆ ಬಲಪಡುತ್ತಿದೆ – ಎಂ.ಬಿ. ಪಾಟೀಲ್
ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದ ಒಡಂಬಡಿಕೆಗಳು ಕೇವಲ ಕಾಗದದ ಮೇಲಷ್ಟೇ ಸೀಮಿತವಾಗಿಲ್ಲ, ಅವು ಕಾರ್ಯರೂಪದಲ್ಲಿ ಜಾರಿಯಾಗುತ್ತಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಕಳೆದ 11 ತಿಂಗಳಲ್ಲಿ ₹4.71 ಲಕ್ಷ ಕೋಟಿ ಮೊತ್ತದ ನೈಜ ಹೂಡಿಕೆ ರಾಜ್ಯಕ್ಕೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿವರು, ಜಾಗತಿಕ ಹೂಡಿಕೆದಾರರ ಸಮಾವೇಶಗಳಲ್ಲಿ (GIM) ದೊರೆತ ಭರವಸೆಗಳು ಇಂದು ಕರ್ನಾಟಕದ ನೆಲದಲ್ಲಿ ಉದ್ಯೋಗ, ಕೈಗಾರಿಕೆ ಹಾಗೂ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳುತ್ತಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉದ್ಯೋಗ ಹುಡುಕುವ ಮನಸ್ಥಿತಿಯಿಂದ ಉದ್ಯೋಗ ಸೃಷ್ಟಿಸುವತ್ತ ಭಾರತ
ಏಕಗವಾಕ್ಷಿ ವ್ಯವಸ್ಥೆ, ತ್ವರಿತ ಅನುಮೋದನೆ ಫಲ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಏಕಗವಾಕ್ಷಿ (Single Window) ಡಿಜಿಟಲ್ ವ್ಯವಸ್ಥೆ, ತ್ವರಿತ ಅನುಮೋದನೆಗಳು ಹಾಗೂ ಕೈಗಾರಿಕಾಸ್ನೇಹಿ ನೀತಿಗಳ ಪರಿಣಾಮವಾಗಿ ಹೂಡಿಕೆಗಳಿಗೆ ವೇಗ ದೊರೆತಿದೆ ಎಂದು ಎಂ.ಬಿ. ಪಾಟೀಲ್ ವಿವರಿಸಿದ್ದಾರೆ. ಇದರ ಫಲವಾಗಿ ತಯಾರಿಕಾ (Manufacturing) ಕ್ಷೇತ್ರ, ಸೆಮಿಕಂಡಕ್ಟರ್ ಉದ್ಯಮ, ಮರುಬಳಕೆ ಇಂಧನ (Renewable Energy) ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪ್ರಮುಖ ಕ್ಷೇತ್ರಗಳಲ್ಲಿ ದಾಖಲೆಯ ಮಟ್ಟದ ಪ್ರಗತಿ ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ದಾವೋಸ್‌ನತ್ತ ಕರ್ನಾಟಕದ ಪಯಣ: ಮುಂದಿನ ಹಂತವಾಗಿ, ಜಾಗತಿಕ ಹೂಡಿಕೆಯನ್ನು ಇನ್ನಷ್ಟು ಆಕರ್ಷಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ದಾವೋಸ್‌ನಲ್ಲಿ ನಡೆಯಲಿರುವ ಜಾಗತಿಕ ಆರ್ಥಿಕ ಶೃಂಗಸಭೆ (World Economic Forum – WEF)ಯಲ್ಲಿ ಭಾಗವಹಿಸಲು ಸಜ್ಜಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಕನ್ನಡದ ಮಹತ್ವ ಸಾರಲು ಚಿತ್ರಮಂದಿರಗಳಿಗೆ ಬಂದ ‘ಭಾರತಿ ಟೀಚರ್’
ಜನವರಿ 19ರಿಂದ 23ರವರೆಗೆ ದಾವೋಸ್‌ನಲ್ಲಿ ನಡೆಯುವ WEF ಸಭೆಯಲ್ಲಿ ವಿಶ್ವದ ಪ್ರಮುಖ ಉದ್ಯಮಿಗಳನ್ನು ಕರ್ನಾಟಕಕ್ಕೆ ಆಹ್ವಾನಿಸುವ ಮೂಲಕ ಹೆಚ್ಚಿನ ಬಂಡವಾಳ ಹೂಡಿಕೆ ಸೇರಿದಂತೆ ಹೊಸ ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕಾ ವಿಸ್ತರಣೆಗಳ ಪ್ರಮುಖ ಗುರಿಗಳು ಇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಅಭಿವೃದ್ಧಿಗೆ ಮಹತ್ವದ ಹೆಜ್ಜೆ: ರಾಜ್ಯಕ್ಕೆ ಹರಿದುಬರುತ್ತಿರುವ ಭಾರಿ ಪ್ರಮಾಣದ ನೈಜ ಹೂಡಿಕೆಗಳು, ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ವಿಸ್ತರಣೆ ಕರ್ನಾಟಕದ ಅಭಿವೃದ್ಧಿ ಪಥದಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ಕೊನೆಗೂ ಟ್ರಂಪ್‌ಗೆ ‘ನೊಬೆಲ್’ ಸ್ಪರ್ಶ?
ಈ ಮೂಲಕ ಕರ್ನಾಟಕವನ್ನು ದೇಶದಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೂ ಹೂಡಿಕೆ ಮತ್ತು ಉದ್ಯಮಗಳ ಪ್ರಮುಖ ಗಮ್ಯಸ್ಥಾನವಾಗಿ ರೂಪಿಸುವ ಗುರಿಯೊಂದಿಗೆ ಸರ್ಕಾರ ಮುಂದುವರಿಯುತ್ತಿದೆ ಎಂದು ಅವರು ಹೇಳಿದ್ದಾರೆ.






















