ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ 70ನೇ ವರ್ಷದ ಅಂಗವಾಗಿ ಈ ಬಾರಿ ರಾಜ್ಯ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ 70 ಮಂದಿ ಗಣ್ಯರನ್ನು “ರಾಜ್ಯೋತ್ಸವ ಪ್ರಶಸ್ತಿ – 2025” ಕ್ಕೆ ಆಯ್ಕೆಮಾಡಲು ಸಿದ್ಧತೆ ಆರಂಭಿಸಿದೆ. ಈ ಸಂಬಂಧವಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ 47 ಸದಸ್ಯರ ಸಲಹಾ ಸಮಿತಿ ರಚಿಸಲಾಗಿದೆ ಎಂದು ಸರ್ಕಾರ ಪ್ರಕಟಿಸಿದೆ.
ಸಮಿತಿಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಅಕಾಡೆಮಿಗಳ ಅಧ್ಯಕ್ಷರು ಮತ್ತು ಪ್ರತಿನಿಧಿಗಳು ಸ್ಥಾನ ಪಡೆದಿದ್ದಾರೆ.
ಸಮಿತಿಯ ಸದಸ್ಯರ ಪಟ್ಟಿ: ಈ ಸಲಹಾ ಸಮಿತಿಯಲ್ಲಿ ಪ್ರಮುಖವಾಗಿ ನಟ ರವಿಚಂದ್ರನ್, ನಟಿ ಗಿರಿಜಾ ಲೋಕೇಶ್, ಖ್ಯಾತ ಮನೋವೈದ್ಯರು ಡಾ. ಸಿ.ಆರ್. ಚಂದ್ರಶೇಖರ್, ಸಮಾಜಸೇವಕಿ ಮಾಲತಿ ಪಟ್ಟಣಶೆಟ್ಟಿ, ಸಾಹಿತ್ಯಕಾರರು ಸುಬ್ಬು ಹೊಲೆಯಾರ್, ಅಪ್ಪಗೆರೆ ತಿಮ್ಮರಾಜು, ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಮೊದಲಾದವರು ಸೇರಿದ್ದಾರೆ.
ಇದೇ ರೀತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರತಿನಿಧಿಗಳು ಸಹ ಸದಸ್ಯರಾಗಿ ನಾಮನಿರ್ದೇಶಿತರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿದ್ದಾರೆ.
ಪ್ರಶಸ್ತಿಯ ವಿವರ: ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಯು ₹5 ಲಕ್ಷ ನಗದು ಮತ್ತು 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿರುತ್ತದೆ. ಸಾಹಿತ್ಯ, ಕಲೆ, ಕ್ರೀಡೆ, ವೈದ್ಯಕೀಯ, ಸಮಾಜಸೇವೆ, ಶಿಕ್ಷಣ, ಕೃಷಿ, ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಗೆ ಅರ್ಹ ವ್ಯಕ್ತಿಗಳನ್ನು ಈ ಸಲಹಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಉನ್ನತ ಮಟ್ಟದ ಆಯ್ಕೆ ಸಮಿತಿ ಅಂತಿಮಗೊಳಿಸುವುದು.
ಸಚಿವ ಶಿವರಾಜ್ ತಂಗಡಗಿ ಅವರ ಹೇಳಿಕೆ: “ರಾಜ್ಯೋತ್ಸವದ 70ನೇ ವರ್ಷಾಚರಣೆಯು ರಾಜ್ಯದ ಸಾಂಸ್ಕೃತಿಕ ಇತಿಹಾಸದಲ್ಲಿ ವಿಶೇಷ ಘಟ್ಟ. ಈ ಬಾರಿ ಪ್ರಶಸ್ತಿಗಳ ಆಯ್ಕೆಯಲ್ಲಿ ಪಾರದರ್ಶಕತೆ, ವೈವಿಧ್ಯತೆ ಮತ್ತು ಕ್ಷೇತ್ರದ ಗೌರವಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ, ರಾಜ್ಯೋತ್ಸವ ಪ್ರಶಸ್ತಿ ಗೌರವ ಕೇವಲ ವ್ಯಕ್ತಿಯ ಸಾಧನೆಗೆ ಮಾತ್ರವಲ್ಲ, ಕರ್ನಾಟಕದ ಸಂಸ್ಕೃತಿ, ಭಾಷೆ ಮತ್ತು ಪರಂಪರೆಯ ಗೌರವಕ್ಕೆ ಸಂಕೇತವಾಗಿದೆ, ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಈ ಬಾರಿ ನಡೆಯಲಿರುವ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ 1ರಂದು ರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿ ಆಯೋಜಿಸಲು ಸಿದ್ಧತೆ ನಡೆಯುತ್ತಿದೆ.