ಹೊಸಪೇಟೆ: ಕಾಂಗ್ರೆಸ್ ಸರ್ಕಾರ ಮಸೀದಿ, ಚರ್ಚ್‌ಗಳ ಕಡೆ ಹೋಗುವುದಿಲ್ಲ, ಹಿಂದೂ ದೇವಾಲಯಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದೆ. ಇದೊಂದು ಬುರುಡೆ ಸರ್ಕಾರ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಲೇವಡಿ ಮಾಡಿದರು.
ಟಿ.ಬಿ. ಡ್ಯಾಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬುರುಡೆ ಸರ್ಕಾರ. ಧರ್ಮಸ್ಥಳದ ವಿಚಾರವಾಗಿ ಬುರುಡೆ ಬಿಟ್ಟಿದ್ದಾರೆ. ಹಿಂದೂ ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ಸೇರಿಸಲು ಹೊರಟಿದ್ದಾರೆ. ಇದರ ಹಿಂದೆ ದೊಡ್ಡ ಗ್ಯಾಂಗ್ ಕೆಲಸ ಮಾಡುತ್ತಿದೆ. ಲವ್ ಜಿಹಾದ್ ಮಾದರಿಯಲ್ಲಿ ಮತಾಂತರ ಜಿಹಾದ್ ಮಾಡುವ ಹುನ್ನಾರ ನಡೆದಿದೆ ಎಂದರು.
ಮಾಸ್ಕ್ ಮ್ಯಾನ್, ಅನನ್ಯ ಭಟ್, ಇವರೆಲ್ಲ ಪಾತ್ರಧಾರಿಗಳಾಗಿದ್ದಾರೆ. ಮಾಸ್ಕ್ ಹಾಕಿದವ ಹಿಂದೆ ಸರ್ಕಾರ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವೇ ಅವನಿಗೆ ಮುಸುಕು ಹಾಕಿಸಿದೆ. ಸಿದ್ದರಾಮಯ್ಯನವರ ಪ್ರಗತಿಪರರು ಇದರ ಹಿಂದೆ ಇದ್ದು, ಬುರುಡೆ ಕಥೆ ಹೊರಗಡೆ ಬಂದ ಕೂಡಲೇ ಇದೀಗ ಅವರೆಲ್ಲರೂ ಕಾಣೆಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಎಸ್‌ಐಟಿ ರಚನೆ ಮಾಡಿರುವುದರಿಂದ ಸಾರ್ವಜನಿಕರ ತೆರಿಗೆ ಹಣ ಎರಡು-ಮೂರು ಕೋಟಿ ರೂ. ಖರ್ಚಾಗಿದೆ. ಒಬ್ಬ ದಾರಿಹೋಕನ ಮಾತನ್ನು ಕೇಳಿ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಆರಂಭಲ್ಲಿ ಬುರುಡೆ ಮನುಷ್ಯನ ಪರಿಶೀಲನೆ ಮಾಡಬೇಕಿತ್ತು. ಮೊದಲು ಮಾಸ್ಕ್‌ಮ್ಯಾನ್ ಮುಸುಕು ತೆಗೆಸಿ, ಅವನ ವಿರುದ್ಧ ತನಿಖೆ ಕೈಗೊಳ್ಳಲು ನಾನು ಹೇಳಿದ್ದೆ. ಅವನ ಮುಸುಕು ಮೊದಲೇ ತೆಗಿಸಿದ್ದರೆ, ಅವನು ಕಳ್ಳ ಎಂಬುದು ಗೊತ್ತಾಗುತ್ತಿತ್ತು, ಅವನೊಬ್ಬ ಮತಾಂತರಿ. ಇದರ ಹಿಂದೆ ಅತ್ಯಂತ ದೊಡ್ಡ ಗ್ಯಾಂಗ್ ಇದೆ ಎಂದರು.
ಆರ್‌ಎಸ್‌ಎಸ್ ಇಲ್ಲದಿದ್ದರೆ ಭಾರತ ಎಂದೋ ಪಾಕಿಸ್ತಾನವಾಗುತ್ತಿತ್ತು: ಆರ್‌ಎಸ್‌ಎಸ್ ಇಲ್ಲದಿದ್ದರೆ, ಭಾರತ ಎಂದೋ ಪಾಕಿಸ್ತಾನವಾಗುತ್ತಿತ್ತು, ಈಗಾಗಲೇ ಎರಡು ಪಾಕಿಸ್ತಾನ ಆಗಿವೆ ಎಂದು ಆರ್.ಅಶೋಕ್ ಹೇಳಿದರು. ಆರ್‌ಎಸ್‌ಎಸ್‌ಗೆ ಇರುವ ದೇಶಭಕ್ತಿಯಿಂದಾಗಿ ಭಾರತ ಉಳಿದುಕೊಂಡಿದೆ. ಆರ್‌ಎಸ್‌ಎಸ್ ಇಲ್ಲವಾಗಿದ್ದರೆ, ಭಾರತ ಮತ್ತೊಂದು ಪಾಕಿಸ್ತಾನವಾಗಿ ಬಿಡೋದು. ಆರ್‌ಎಸ್‌ಎಸ್ ಇರೋದಕ್ಕೆ ಈ ದೇಶ ಉಳಿದಿದೆ. ಸರ್ಕಾರದ ಡಿ.ಕೆ. ಶಿವಕುಮಾರ್ ಆರ್‌ಎಸ್‌ಎಸ್ ಗೀತೆಯನ್ನು ನಮಗಿಂತಲೂ ಚೆನ್ನಾಗಿ ಹಾಡುತ್ತಾರೆ. ಅವರಿಗೆ ದೇಶಭಕ್ತಿ ಇದೆ. ಅವರು ಪ್ರಯಾಗರಾಜ್‌ಗೂ ಕೂಡ ಹೋಗಿ ಬಂದಿದ್ದಾರೆ ಎಂದರು.