ಸಚಿವರ ಬೆದರಿಕೆಗೆ ಹೆದರಿ ಅಧಿಕಾರಿಗಳಿಂದ RSS ವಿರುದ್ಧ ಕ್ರಮ

0
53

ಬೆಂಗಳೂರು: ಸರ್ಕಾರದ ಹಿರಿಯ ಅಧಿಕಾರಿಗಳು ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆದರಿಕೆಗೆ ಹೆದರಿ, ದ್ವೇಷದ ರಾಜಕಾರಣಕ್ಕೆ ಹೆಗಲು ಕೊಡಲು ಆರಂಭಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಇತ್ತೀಚೆಗೆ ರಾಯಚೂರು ಜಿಲ್ಲೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಲಿಂಗಸೂರು ಶಾಸಕ ಮಾನಪ್ಪ ವಜ್ಜಲ್ ಅವರ ಆಪ್ತ ಸಹಾಯಕ ಪಿಡಿಒ ಪ್ರವೀಣ್ ಕುಮಾರ್ ಕೆ.ಪಿ. ಅವರನ್ನು ಆರ್‌ಎಸ್‌ಎಸ್ ಶತಮಾನೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದ ಕಾರಣಕ್ಕಾಗಿ ಅಮಾನತುಗೊಳಿಸಿದ್ದ ಘಟನೆ ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು “ಸರ್ಕಾರದ ಅಧಿಕಾರಿಗಳು ಕಾಂಗ್ರೆಸ್ ನಾಯಕರ ಒತ್ತಡಕ್ಕೆ ತಲೆಬಾಗುತ್ತಿದ್ದಾರೆ. ಇದು ದೇಶಭಕ್ತಿ ಮನೋಭಾವದ ಮೇಲೆ ದಾಳಿ ನಡೆಸುವಂತಹ ಕ್ರಮ. ಸಚಿವ ಪ್ರಿಯಾಂಕ್ ಖರ್ಗೆಯ ಬೆದರಿಕೆಗೆ ಹೆದರಿ ಅಧಿಕಾರಿಗಳು ಈಗ ದ್ವೇಷದ ರಾಜಕಾರಣಕ್ಕೆ ಬೆಂಬಲ ನೀಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.

ವಿಜಯೇಂದ್ರ ಅವರು ಕಾಂಗ್ರೆಸ್‌ನ ಕ್ರಮವನ್ನು ತೀವ್ರವಾಗಿ ಖಂಡಿಸಿ, “ಇದು ಕಾಂಗ್ರೆಸ್ ಪಕ್ಷದ ವಿಕೃತ ಚಿಂತನೆ ಮತ್ತು ಹಿಂದೂ ವಿರೋಧಿ ಮನೋಭಾವದ ಸ್ಪಷ್ಟ ಉದಾಹರಣೆ. ಸರ್ಕಾರಿ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಅವರು ಅಧಿಕಾರದ ಅಹಂಕಾರ ತೋರಿಸುತ್ತಿದ್ದಾರೆ. ಈ ಸೇಡಿನ ಅಮಾನತನ್ನು ತಕ್ಷಣ ಹಿಂತೆಗೆದುಕೊಳ್ಳಿ ಹಾಗೂ ಸಾರ್ವಜನಿಕ ಕ್ಷಮೆ ಕೇಳಿ. ಇಲ್ಲದಿದ್ದರೆ ನಾವು ಸಂವಿಧಾನಿಕ ಮಾರ್ಗದಲ್ಲಿ ಜನತಂತ್ರದ ಹಾದಿಯಲ್ಲಿ ತಕ್ಕ ಉತ್ತರ ನೀಡುತ್ತೇವೆ” ಎಂದು ಎಚ್ಚರಿಸಿದ್ದಾರೆ.

ಅವರು ಮುಂದುವರಿದು, “ದ್ವೇಷದ ರಾಜಕಾರಣ ನಡೆಸಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದ ಕುಖ್ಯಾತ ಕಾಂಗ್ರೆಸ್ ಇದೀಗ ಕರ್ನಾಟಕದಲ್ಲೂ ಅದೇ ಮಾರ್ಗದಲ್ಲಿ ನಡೆಯುತ್ತಿದೆ. ಜನತೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಇತಿಹಾಸವೇ ಅದಕ್ಕೆ ಸಾಕ್ಷಿ,” ಎಂದು ಹೇಳಿದ್ದಾರೆ.

Previous articleರಸ್ತೆಗುಂಡಿ ವಿವಾದ: ಯಡಿಯೂರಪ್ಪ ಅವಧಿಯ ಅನುಭವ ನೆನೆದ ಮೋಹನ್‌ದಾಸ್ ಪೈ
Next articleಕ್ರಿಕೆಟ್‌ನಲ್ಲಿ ಹೊಸ ನಿಯಮ: ಈ ಶಾಟ್‌ಗೆ ರನ್ ಇಲ್ಲ!

LEAVE A REPLY

Please enter your comment!
Please enter your name here