ಕೋಲಾರ: ತಮಿಳುನಾಡು ಸರ್ಕಾರದ ಉದ್ದೇಶಿತ ಹೊಸೂರು ವಿಮಾನ ನಿಲ್ದಾಣದ ಸ್ಥಳವನ್ನು ಅಂತಿಮಗೊಳಿಸಿದೆ.
ಬೆರಿಗೈ ಮತ್ತು ಬಾಗಲೂರು ನಡುವಿನ ಶೂಲಗಿರಿ ತಾಲೂಕಿನಲ್ಲಿ ಮಾಲೂರು ನಗರದಿಂದ ಕೇವಲ 20 ಕಿ.ಮೀ ದೂರದಲ್ಲಿ ಈ ಜಾಗವಿದೆ. ಈ ಸ್ಥಳದ ಅನುಮೋದನೆಗಾಗಿ ಎರಡು ವಾರಗಳಲ್ಲಿ ತಮಿಳುನಾಡು ಸರ್ಕಾರ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿರುವ ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಬಳಿಯೇ ವಿಮಾನ ನಿಲ್ದಾಣದ ಜಾಗ ಇರುವುದು ವಿಶೇಷವಾಗಿದೆ.
ನೂತನ ವಿಮಾನ ನಿಲ್ದಾಣಕ್ಕೆ 2,300 ಎಕರೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಕೃಷ್ಣಗಿರಿ ಜಿಲ್ಲಾಧಿಕಾರಿಗೆ ರಾಜ್ಯ ಸರ್ಕಾರ ಸೂಚಿಸಿದೆ.
ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸುಮಾರು 100 ಕಿಲೋ ಮೀಟರ್ ದೂರದಲ್ಲಿ ತಮಿಳುನಾಡು ಸರ್ಕಾರ ತನ್ನ ಎರಡನೇ ವಿಮಾನ ನಿಲ್ದಾಣವನ್ನು ಸ್ಥಾಪಿಸುತ್ತಿರುವುದು ಗಮನಾರ್ಹ.