ನೇಪಾಳದಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ರಾಜಕೀಯ ಅಸ್ಥಿರತೆಯ ನಂತರ, ಯುವ ಪೀಳಿಗೆ ಜೆನ್-ಝಡ್ ಒಂದು ಹೊಸ ನಾಯಕತ್ವದ ಕಡೆಗೆ ಒಲವು ತೋರಿದೆ. ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶದ ನಂತರ, ಪ್ರಧಾನಿ ಮತ್ತು ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ತೆರವಾದ ಸ್ಥಾನಕ್ಕೆ ಹಂಗಾಮಿ ಪ್ರಧಾನಿಯಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಆಯ್ಕೆ ಮಾಡಲಾಗಿದೆ.
ಕಠ್ಮಂಡುವಿನಲ್ಲಿ ನಡೆದ ವರ್ಚುವಲ್ ಸಭೆಯಲ್ಲಿ 5,000ಕ್ಕೂ ಹೆಚ್ಚು ಯುವಕರು ಸುಶೀಲಾ ಕರ್ಕಿಗೆಬೆಂಬಲ ವ್ಯಕ್ತಪಡಿಸಿದ್ದು, ಅವರನ್ನು ದೇಶದ ಮುಂದಿನ ಪ್ರಧಾನಿ ಹುದ್ದೆಗೆ ಪ್ರಮುಖ ಆಯ್ಕೆಯಾಗಿ ಪರಿಗಣಿಸಲಾಗಿದೆ.
26 ಸಾಮಾಜಿಕ ಜಾಲತಾಣಗಳ ನಿಷೇಧ ಮತ್ತು ಮಿತಿಮೀರಿದ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ ಯುವ ಸಮುದಾಯವು, ಹಿಂದಿನ ಸರ್ಕಾರದ ಪತನಕ್ಕೆ ಕಾರಣವಾಯಿತು. ನಂತರ ನಡೆದ ಪ್ರತಿಭಟನೆಗಳಲ್ಲಿ 30ಕ್ಕೂ ಅಧಿಕ ಜನರು ಸಾವನ್ನಪ್ಪಿ ನೂರಾರು ಮಂದಿ ಗಾಯಗೊಂಡಿದ್ದರು.
ಜೆನ್-ಝಡ್ ಚಳವಳಿಯ ನಾಯಕರು ನಡೆಸಿದ ಸಭೆಯಲ್ಲಿ, ಕಠ್ಮಂಡು ಮೇಯರ್ ಬಾಲೆನ್ ಶಾ ಹೆಸರು ಚರ್ಚೆಗೆ ಬಂದಿತ್ತು. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ವ್ಯಕ್ತಿತ್ವ ಹೊಂದಿರುವ ಕರ್ಕಿಯಂತಹ ನಾಯಕಿ ಮಾತ್ರ ಜನರ ವಿಶ್ವಾಸಗಳಿಸಬಹುದು ಎಂದು ಯುವಕರು ನಂಬಿದ್ದರು.
ರಾಜಕೀಯ ಪಕ್ಷಗಳೊಂದಿಗೆ ಸಂಬಂಧವಿಲ್ಲದ ಸುಶೀಲಾ ಕರ್ಕಿ ಆಯ್ಕೆಯು, ಬದಲಾವಣೆಗಾಗಿ ಹಂಬಲಿಸುತ್ತಿರುವ ಯುವ ಪೀಳಿಗೆಯಲ್ಲಿ ಹೊಸ ಆಶಯ ತುಂಬಿದೆ. 1952ರಲ್ಲಿ ಬಿರಾಟ್‌ನಗರದಲ್ಲಿ ಜನಿಸಿದ ಸುಶೀಲಾ ಕರ್ಕಿ, 1979ರಲ್ಲಿ ಕಾನೂನು ವೃತ್ತಿ ಆರಂಭಿಸಿದರು. 2016ರಲ್ಲಿ ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶೆಯಾಗಿ ಐತಿಹಾಸಿಕ ಸಾಧನೆ ಮಾಡಿದರು.
ಜುಲೈ 2016ರಿಂದ ಜೂನ್ 2017ರವರೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದರು, ಹಲವಾರು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. 2017ರಲ್ಲಿ ಅವರ ವಿರುದ್ಧ ಮಂಡಿಸಲಾದ ಮಹಾಭಿಯೋಗ ನಿರ್ಣಯವನ್ನು ತೀವ್ರ ವಿರೋಧದ ನಂತರ ಹಿಂತೆಗೆದುಕೊಳ್ಳಬೇಕಾಯಿತು.
ಭಾರತ ಮತ್ತು ಸುಶೀಲಾ ಕರ್ಕಿ ಸಂಬಂಧ?: ನೇಪಾಳದ ನಿವೃತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಭಾರತದೊಂದಿಗೆ ಶೈಕ್ಷಣಿಕ ಸಂಬಂಧವನ್ನು ಹೊಂದಿದ್ದಾರೆ. ಅವರು ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತವು ನೆರೆರಾಷ್ಟ್ರ ನೇಪಾಳದ ರಾಜಕೀಯ ಬೆಳವಣಿಗೆಗಳನ್ನು ಆಸಕ್ತಿಯಿಂದ ಗಮನಿಸುತ್ತಿದೆ.
ಮೋದಿಯಂಥ ನಾಯಕ ಇಲ್ಲಿದ್ದಿದ್ದರೆ, ಇಂಥ ಪರಿಸ್ಥಿತಿಗೆ ನೇಪಾಳಕ್ಕೆ ಬರುತ್ತಿರಲಿಲ್ಲ. ಬದಲಾಗಿ ಜಗತ್ತಿನ ಅತ್ಯುನ್ನತ ದೇಶವಾಗಿರುತ್ತಿತ್ತು ಎಂದು ನೇಪಾಳಿ ಯುವಕರು ಟಿವಿಗಳಿಗೆ ನೀಡಿರುವ ಹೇಳಿಕೆ ವೈರಲ್ ಆಗಿದೆ. ಹಿಂದಿನ ಪ್ರಧಾನಿ ಓಲಿ ಶರ್ಮಾ ಅತ್ಯಂತ ಭ್ರಷ್ಟರಾಗಿದ್ದರು. ಅದಕ್ಕೆ ನಾವು ಅವರನ್ನು ಇಲ್ಲಿಂದ ಓಡಿಸಿದೆವು ಎಂದು ಯುವಕನೊಬ್ಬ ಹೇಳಿದ್ದಾನೆ.