ನೇಪಾಳದಲ್ಲಿ ಸರ್ಕಾರದ ವಿರುದ್ಧ ನಡೆಯುತ್ತಿರುವ ದಂಗೆ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗರು ಕಠ್ಮಂಡುವಿನಲ್ಲಿ ಸಿಲುಕಿದ್ದು ವಾಪಸ್ ಬರಲು ಸಾಧ್ಯವಾಗದೆ ಪರಿತಪಿಸುವ ಸನ್ನಿವೇಶ ಉಂಟಾಗಿದೆ. ನೇಪಾಳದಲ್ಲಿ ದಂಗೆ ಏರ್ಪಟ್ಟಿದೆ ಎಲ್ಲೆಲ್ಲೂ ಪ್ರಕ್ಷುಬ್ದ ವಾತಾವರಣ ಉಂಟಾಗಿದೆ. ಬಸ್, ವಿಮಾನ ಸಂಚಾರ ನಿಂತಿದೆ ಪ್ರತಿಭಟನೆ ತೀವ್ರಗೊಂಡಿರುವ ಕಾರಣ ಪ್ರವಾಸಕ್ಕೆ ಹೋದವರು ಅಲ್ಲೇ ದಿನದೂಡಿ ಆತಂಕ ಎದರಿಸುವಂತಾಗಿದೆ.
ಕಳೆದ ಮೂರು ದಿನಗಳಿಂದಲೂ ನೇಪಾಳ ಪ್ರತಿಭಟನಾ ಕಿಚ್ಚಿಗೆ ಉರಿಯುತ್ತಿದ್ದು ರಸ್ತೆ, ದೇವಾಲಯ ಜನರಿಲ್ಲದೆ ಬಿಕೋ ಎನ್ನುತ್ತಿವೆ. ಬೆಂಗಳೂರಿನಿಂದ 50 ಜನ ಪ್ರವಾಸಿಗರ ತಂಡ ಉತ್ತರ ಭಾರತದ ಅಯೋಧ್ಯೆ, ವಾರಣಾಸಿ, ನೇಪಾಳ ಪ್ರವಾಸಕ್ಕೆ ಸೆ. 1 ರಂದು ಹೊರಟಿದೆ. ಉತ್ತರ ಭಾರತ ಪ್ರವಾಸ ಮುಗಿಸಿದ ತಂಡ ನೇಪಾಳಕ್ಕೆ ಸೆ. 5 ರಂದು ಸೇರಿದೆ. ಅಲ್ಲಿಂದ ಫೇಕ್ರಾ, ಮುಕ್ತಿನಾಥ್ ಪ್ರವಾಸ ಮುಗಿಸಿ 8ರಂದು ಕಠ್ಮಂಡು ಪಶುಪತಿನಾಥ ದರ್ಶನ ಮಾಡಿ ಬರಬೇಕಾದರೆ ನೇಪಾಳದಲ್ಲಿ ತೀವ್ರ ಪ್ರತಿಭಟನೆ ನಡೆದ ಕಾರಣ ವಾಪಸ್ ಬರಲು ಬಿಡದ ಕಾರಣ ಹೋಟೆಲ್‍ನಲ್ಲೇ ಕಳೆದ ಮೂರು ದಿನಗಳಿಂದಲೂ ಬೆಂಗಳೂರಿನ ಪ್ರವಾಸಿಗರು ವಾಸ್ತವ್ಯ ಮಾಡುವಂತಾಗಿದೆ.
ಪ್ರವಾಸಿಗರಲ್ಲಿ ವಯಸ್ಸಾದ ಮಹಿಳೆಯರು ಮತ್ತು ಹೆಚ್ಚಿನ ಹಿರಿಯರಿದ್ದಾರೆ. ಪ್ರತಿಭಟನೆ ಕಡಿಮೆಯಾಗಿದ್ದರೂ ಬಸ್ ಸಂಚಾರ ಮತ್ತು ವಿಮಾನ ನಿಲ್ದಾಣ ಚಾಲನೆ ಕಂಡಿಲ್ಲ. ಪ್ರತೀ ರಸ್ತೆ ರಸ್ತೆಯಲ್ಲಿ ಮಿಲ್ಟ್ರಿ ಪಹರೆ ಇದೆ. ಹೋಟೆಲ್ ರೂಂ ಬಿಟ್ಟು ಎಲ್ಲೂ ಹೋಗಲು ಆಗುತ್ತಿಲ್ಲ ಕೂಡಲೇ ಸರ್ಕಾರ ನಮಗೆ ವಾಪಸ್ ಬರಲು ಅಗತ್ಯ ಕ್ರಮ ಒದಗಿಸಿಕೊಡಬೇಕು ಎಂಬುದು ಪ್ರವಾಸಿಗರ ಒತ್ತಾಯವಾಗಿದೆ.
ಆಹಾರ ಪದಾರ್ಥ ಸಿಗುತ್ತಿಲ್ಲ: ಪ್ರವಾಸದ ಜೊತೆಯಲ್ಲೇ ನಾವೇ ಅಡಿಗೆಯವರನ್ನು ಕರೆತಂದಿದ್ದೇವೆ ದಿನಸಿ ಪದಾರ್ಥಗಳನ್ನು ತರಲಾಗಿತ್ತು ಹಾಲು, ಮೊಸರು, ತರಕಾರಿಗಳನ್ನು ಸ್ಥಳೀಯವಾಗೇ ತೆಗೆದುಕೊಂಡು ಅಡಿಗೆ ಮಾಡಿಕೊಳ್ಳುತ್ತಿದ್ದೇವೆ. ಆದರೆ ಇಲ್ಲಿ ಹಾಲು, ಮೊಸರು ಸಿಗುತ್ತಿಲ್ಲ ಕಳೆದ ಮೂರು ದಿನಗಳಿಂದಲೂ ಕಾಫಿ ಟೀ ಕುಡಿಯಲು ಆಗಿಲ್ಲ. ಅಡಿಗೆಗೆ ತಂದ ದಿನಸಿ ಪದಾರ್ಥ ಖಾಲಿಯಾಗಿದೆ. ಇಲ್ಲಿನ ಊಟ ನಮಗೆ ಹಿಡಿಸುತ್ತಿಲ್ಲ. ಅಡಿಗೆ ಮಾಡಿಕೊಳ್ಳಲು ತರಕಾರಿ ಸಿಗುತ್ತಿಲ್ಲ ಇಂದಿನವರೆಗೆ ಹೇಗೋ ತಂದ ಅಡಿಗೆ ಪದಾರ್ಥದಲ್ಲಿ ಅಡಿಗೆ ಮಾಡಿ ತಿನ್ನುತ್ತಿದ್ದೇವೆ. ನಾಳೆ ಹೋಟೆಲ್ ಊಟವೇ ಮಾಡಬೇಕು ಎಂದು ಹೇಳಿದ್ದಾರೆ.
ವಿಮಾನ ಟಿಕೆಟ್ ಬುಕ್ : ಗುರುವಾರ ನಾವು ಜನಕ್‍ಪುರಕ್ಕೆ ಹೋಗಿ ಜಾರ್ಖಂಡ್‌ನ ಡಿಯೋಗರ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಬೇಕು ವಿಮಾನ ಟಿಕೇಟ್ ಬುಕ್ ಆಗಿದೆ. ಆದರೆ ನೇಪಾಳದಿಂದ ವಾಪಸ್ ಬರಲು ಬಿಡುತ್ತಿಲ್ಲ, ವಿಮಾನ ಹಾರಾಟ ಕೂಡ ಕಂಡು ಬರುತ್ತಿಲ್ಲ ಸಮಯಕ್ಕೆ ಸರಿಯಾಗಿ ನಾವು ವಿಮಾನ ಪ್ರಯಾಣಕ್ಕೆ ಹೋಗದಿದ್ದರೆ ಟಿಕೆಟ್ ಹಣ ವ್ಯಯವಾಗುತ್ತದೆ ಎನ್ನುತ್ತಾರೆ ಪ್ರವಾಸಿಗರು.
ಪಶುಪತಿ ದೇವಾಲಯ ಸಮೀಪವೇ ವಾಸ್ತವ್ಯ : ಸೆ.8ರಂದು ಬೆಳಗ್ಗೆ ಕಠ್ಮಂಡು ಸ್ಥಳೀಯ ಪ್ರವಾಸ ಮಾಡುವ ಸಂದರ್ಭದಲ್ಲಿ ಗಲಾಟೆ ವಿಷಯ ತಿಳಿಯಿತು. ನಾವು ಬೇರೆ ರಸ್ತೆ ಮುಖಾಂತರ ಪಶುಪತಿನಾಥ ದೇವಾಲಯ ದರ್ಶನಕ್ಕೆ ಬಂದು ದೇವರ ದರ್ಶನ ಪಡೆದೆವು. ನಂತರ ದೇವಾಲಯದ ಹೊರಗಿನ ರಸ್ತೆಯಲ್ಲಿ ಪ್ರತಿಭಟನೆ ಮಾಡಿ ಟೈರ್‌ಗಳಿಗೆ ಬೆಂಕಿಹಚ್ಚಲಾಯಿತು. ಅಲ್ಲಿನ ಪರಿಸ್ಥಿತಿ ಬಿಗಡಾಯಿಸಿತು. ದೇವರ ದರ್ಶನ ಮುಗಿಸಿ ಸಮೀಪದ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಲಾಯಿತು ಎಂದು ತಿಳಿಸಿದ್ದಾರೆ.
ಹೋಟೆಲ್ ರೂಂನಿಂದ ನಾವು ಹೊರಗೆ ಬರಲು ಆಗದೆ ನೇಪಾಳದ ಕಠ್ಮಂಡುವಿನಲ್ಲೇ ಕಳೆದ ಮೂರು ದಿನಗಳಿಂದ ಕಾಲ ಕಳೆಯುವ ಸನ್ನಿವೇಶ ನಮ್ಮದಾಗಿದೆ. ಹೋಟೆಲ್‍ನಲ್ಲಿ ನಮಗೆ ತೊಂದರೆ ಆಗುತ್ತಿಲ್ಲ ಹೊರಗೆ ಹೋಗಲು ಆಗುತ್ತಿಲ್ಲ ಆರ್ಮಿ ಭದ್ರತೆ ನೀಡಿದ್ದಾರೆ. ಸ್ಥಳೀಯರು ಬುಧವಾರದಿಂದ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಓಡಾಟ ನಡೆಸುತ್ತಿರುವುದು ಕಾಣುತ್ತಿದೆ. ಬಸ್ ಜನರ ಓಡಾಟ ರಸ್ತೆಯಲ್ಲಿಲ್ಲ ಎಂದು ಹೇಳಿದ್ದಾರೆ.
“ರೂಂನಿಂದ ಆಚೆ ಓಡಾಟಕ್ಕೆ ಬಿಡುತ್ತಿಲ್ಲ ಸರ್ಕಾರದಿಂದ ಯಾವ ಮಾಹಿತಿಯೂ ಇನ್ನೂ ಬಂದಿಲ್ಲ. ಆಹಾರ ಪದಾರ್ಥ ಹಾಲು, ತರಕಾರಿ ಸಿಗುತ್ತಿಲ್ಲ ಹೋಟೆಲ್‍ನವರಲ್ಲಿ ಆಹಾರ ಪದಾರ್ಥ ಕೇಳಿದ್ದೇವೆ ನೀಡುತ್ತೇನೆ ಎಂದಿದ್ದಾರೆ. ಪರಿಸ್ಥಿತಿ ಸುಧಾರಿಸಿದೆ ಮಿಲ್ಟ್ರಿ ಪಹರೆ ಇದೆ ಸುರಕ್ಷಿತವಾಗಿ ನಾವು ನೇಪಾಳ ಗಡಿ ದಾಟಲು ಇಂದು ಪ್ರಯಾಣಕ್ಕೆ ರಸ್ತೆಯಲ್ಲಿ ಅನುವು ಮಾಡಿಕೊಟ್ಟರೆ ನಾವು ಊರಿನ ಕಡೆ ಪ್ರಯಾಣ ಬೆಳೆಸಬಹುದು” ಎಂದು ಪ್ರವಾಸಿಗ ನಂದೀಶ್ ಕುಮಾರ್ ತಿಳಿಸಿದ್ದಾರೆ.