ಉಪರಾಷ್ಟ್ರಪತಿ ಚುನಾವಣೆ: NDA ಅಭ್ಯರ್ಥಿ ನಾಮಪತ್ರ ಸಲ್ಲಿಕೆ

0
102

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಭ್ಯರ್ಥಿಯಾದ ಸಿ.ಪಿ. ರಾಧಾಕೃಷ್ಣನ್‌ ಬುಧವಾರ ನಾಮಪತ್ರ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಗದೀಪ್ ಧನಕರ್ ರಾಜೀನಾಮೆಯ ನಂತರ ಭಾರತದ ಉಪ ರಾಷ್ಟ್ರಪತಿ ಹುದ್ದೆ ಖಾಲಿಯಾಗಿದ್ದು, ಕೇಂದ್ರ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಸೆಪ್ಟೆಂಬರ್ 9ರಂದು ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಗೆ ಬಿ. ಸುದರ್ಶನ್ ರೆಡ್ಡಿ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿ.

ಸಂಸತ್ ಭವನದಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೆಲವು ಎನ್‌ಡಿಎ ಮಿತ್ರಪಕ್ಷಗಳ ನಾಯಕರು ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು. ಭಾನುವಾರ ಎನ್‌ಡಿಎ ಮೈತ್ರಿಕೂಟ ಸಿ. ಪಿ. ರಾಧಾಕೃಷ್ಣನ್‌ ಉಪರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು.

4 ಸೆಟ್‌ ನಾಮಪತ್ರ ಸಲ್ಲಿಸಲಾಗಿದ್ದು, ತಲಾ 20 ಪ್ರತಿಪಾದಕರು ಮತ್ತು 20 ಅನುಮೋದಕರ ಸಹಿಗಳಿವೆ. ಪ್ರಧಾನಿ ಮೋದಿ ಜೊತೆಗೆ, ಕೇಂದ್ರ ಸಚಿವರು, ಹಿರಿಯ ಸಂಸದರು ಮತ್ತು ಮೈತ್ರಿಕೂಟದ ಪಕ್ಷಗಳ ವಿವಿಧ ಪ್ರಮುಖ ನಾಯಕರು ಅನುಮೋದಕರಾಗಿದ್ದಾರೆ. ಉಪ ರಾಷ್ಟ್ರಪತಿ ಚುನಾವಣೆಯು ಸಂಸತ್ತಿನ ಮೇಲ್ಮನೆಯ ರಾಜಕೀಯದ ಮೇಲೆ, ಅಂದರೆ ರಾಜ್ಯಸಭೆಯ ರಾಜಕೀಯದ ಮೇಲೆ ಪರಿಣಾಮ ಬೀರುವುದಲ್ಲದೆ, ಅದರ ಫಲಿತಾಂಶಗಳು ಮುಂಬರುವ ವರ್ಷಗಳಲ್ಲಿ ಸಂಸತ್ತಿನ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತವೆ.

ಭಾರತದ ಉಪರಾಷ್ಟ್ರಪತಿಯ ಚುನಾವಣೆಯನ್ನು ಸಂವಿಧಾನದ 66 ನೇ ವಿಧಿಯ ಅಡಿಯಲ್ಲಿ ನಡೆಸಲಾಗುತ್ತದೆ. ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಮತ್ತು ನೇಮಕಗೊಂಡ ಸದಸ್ಯರು ಮಾತ್ರ ಮತ ಚಲಾಯಿಸುತ್ತಾರೆ. ಚುನಾವಣಾ ಪ್ರಕ್ರಿಯೆಯನ್ನು ರಹಸ್ಯ ಮತದಾನದ ಮೂಲಕ ಮಾಡಲಾಗುತ್ತದೆ. ಸೆಪ್ಟೆಂಬರ್ 9ರಂದು ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.

ಸಿ.ಪಿ.ರಾಧಾಕೃಷ್ಣ ಪರಿಚಯ: ಸಿ.ಪಿ.ರಾಧಾಕೃಷ್ಣ ಪೂರ್ಣ ಹೆಸರು ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣ. ಇವರು 1957 ಅಕ್ಟೋಬರ್ 20 ರಂದು ತಿರುಪ್ಪೂರ್‌ನಲ್ಲಿ ಜನಿಸಿರುವ ರಾಧಾಕೃಷ್ಣನ್‌ ಒಬ್ಬ ಉತ್ಸಾಹಿ ಕ್ರೀಡಾಪಟು ಆಗಿದ್ದಾರೆ. ಟೇಬಲ್ ಟೆನ್ನಿಸ್‌ನಲ್ಲಿ ಕಾಲೇಜು ಚಾಂಪಿಯನ್ ಆಗಿದ್ದರು. ಕಳೆದ ವರ್ಷ ಜುಲೈನಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮುನ್ನ ಜಾರ್ಖಂಡ್ ಮತ್ತು ತೆಲಂಗಾಣ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದರು.

ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ರಾಜಕೀಯ ಪಯಣ ಆರಂಭಿಸಿದ್ದ ಇವರು ತಮಿಳುನಾಡು ಬಿಜೆಪಿ ಮುಖ್ಯಸ್ಥರಾಗಿದ್ದಾಗ ರಥ ಯಾತ್ರೆ ಮೂಲಕ ಗಮನ ಸೆಳೆದಿದ್ದರು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (2004) ಸಂಸದೀಯ ನಿಯೋಗದ ಭಾಗವಾಗಿದ್ದರು ಮತ್ತು ತೈವಾನ್‌ಗೆ ತೆರಳಿದ್ದ ಮೊದಲ ಭಾರತೀಯ ನಿಯೋಗದ ಭಾಗವಾಗಿದ್ದರು.

Previous articleಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಸಿಂಗಳಿಕ ಬದುಕು ಅಪಾಯದಂಚಿಗೆ?
Next articleಕಲಬುರಗಿ: ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ರೈತ ನೇಣಿಗೆ ಶರಣು

LEAVE A REPLY

Please enter your comment!
Please enter your name here