ತಿರುಪತಿ: 2019-24ರವರೆಗೆ ಭೋಲೆ ಬಾಬಾ ಡೈರಿ ಕಂಪನಿ ಪೂರೈಸಿದ ನಕಲಿ ತುಪ್ಪದಿಂದ 20 ಕೋಟಿಯಷ್ಟು ಲಡ್ಡುಗಳನ್ನು ತಯಾರಿಸಲಾಗಿದೆ ಎಂದು ಟಿಟಿಡಿ ಟ್ರಸ್ಟ್ ಬೋರ್ಡ್‌ನ ಅಧ್ಯಕ್ಷ ಬಿ.ಆರ್. ನಾಯ್ಡು ಬಹಿರಂಗಪಡಿಸಿದ್ದಾರೆ. ಇದು ಅನೇಕರನ್ನು ದಿಗ್ಭ್ರಮೆಗೆ ಒಳಗು ಮಾಡಿದೆ.
ತಿರುಪತಿ ದೇವಸ್ಥಾನ ಟ್ರಸ್ಟ್ ನಡೆಸಿದ ಆಂತರಿಕ ಸಮೀಕ್ಷೆಯ ಪ್ರಕಾರ, ಕಳೆದ ಐದು ವರ್ಷಗಳ ಅವಧಿಯಲ್ಲಿ 48.76 ಕೋಟಿ ಲಡ್ಡು ಗಳನ್ನು ತಯಾರಿಸಲಾಗಿದೆ. ಇದರಲ್ಲಿ ಭೋಲೆ ಬಾಬಾ ಮತ್ತು ಅದರ ಬೇನಾಮಿ ಕಂಪನಿಗಳಿಂದ ಪೂರೈಕೆಯಾದ ನಕಲಿ ತುಪ್ಪದಿಂದ 20.1 ಕೋಟಿಯಷ್ಟು ಲಡ್ಡು ತಯಾರಿಸಲಾಗಿದೆ ಎಂದು ಹೇಳಿದ್ದಾರೆ.
ಲಡ್ಡು ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ, ಉತ್ತರಾಖಂಡ ಮೂಲಕ ಭೋಲೆ ಬಾಬಾ ಡೈರಿ 250 ಕೋಟಿ ರೂ. ಮೌಲ್ಯದ 68 ಲಕ್ಷ ಕೆಜಿಯಷ್ಟು ನಕಲಿ ತುಪ್ಪ ತಿರುಪತಿ ದೇವಸ್ಥಾನಕ್ಕೆ ಪೂರೈಕೆ ಮಾಡಿತ್ತು ಎಂದು ತಿಳಿಸಿದ್ದರು.
ಈ ಸಂಬಂಧ ಟಿಟಿಡಿ ಮಾಜಿ ಅಧ್ಯಕ್ಷ ಮತ್ತು ವೈಎಸ್‌ಆರ್‌ಸಿಪಿ ಸಂಸದ ವೈ.ವಿ. ಸುಬ್ಬಾರೆಡ್ಡಿ ಅವರನ್ನು ಸತತ 8 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಪ್ರಸ್ತುತ ಟಿಟಿಡಿ ಅಧ್ಯಕ್ಷ ನಾಯ್ಡು, ಇದನ್ನು ಕ್ಷಮಿಸಲು ಸಾಧ್ಯವಿಲ್ಲ. 2019-24ರ ಅವಧಿಯಲ್ಲಿ ಭೋಲೆ ಬಾಬಾ ಡೈರಿ ಸೇರಿ ಇತರೆ ಕಂಪನಿಗಳಿಂದ 1.61 ಕೋಟಿ ಕೆಜಿ ತುಪ್ಪ ಪೂರೈಕೆ ಅಗಿದೆ. ನಕಲಿ ತುಪ್ಪದಿಂದ ಶೇ. 42ರಷ್ಟು ಲಡ್ಡು ತಯಾರಿಸಲಾಗಿದೆ. ಈ ವೇಳೆ ಉತ್ತಮ ತುಪ್ಪದ ಜತೆ ನಕಲಿ ತುಪ್ಪ ಮಿಶ್ರಣವಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ 11 ಕೋಟಿ ಭಕ್ತರು ಭೇಟಿ ನೀಡಿದ್ದು ಎಷ್ಟು ಜನರಿಗೆ ನಕಲಿ ತುಪ್ಪದ ಲಡ್ಡು ವಿತರಿಸಲಾಗಿದೆಯೋ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.























