10 ವರ್ಷಗಳಲ್ಲಿ ಜಾಗತಿಕ ಶಕ್ತಿಯಾದ ಭಾರತದ ನವೋದ್ಯಮ ಪಯಣ: “ಯುವಕರಿಗೆ ಮುಕ್ತ ಆಕಾಶ ನೀಡಿದ ಸ್ಟಾರ್ಟಪ್ ಇಂಡಿಯಾ” – ಪ್ರಧಾನಿ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುತುವರ್ಜಿಯಿಂದ ಆರಂಭಿಸಿದ್ದ ಸ್ಟಾರ್ಟಪ್ ಇಂಡಿಯಾ ಯೋಜನೆಗೆ ಇಂದು 10 ವರ್ಷಗಳ ಸಂಭ್ರಮ. 2016ರಲ್ಲಿ ದೇಶದ ಉದ್ದಿಮೆಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸಣ್ಣ ಹೆಜ್ಜೆಯಾಗಿ ಆರಂಭವಾದ ಈ ಯೋಜನೆ, ಇಂದಿಗೆ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಾಗಿ ರೂಪಿಸಿರುವ ಮಹಾಕ್ರಾಂತಿಯಾಗಿದ್ದು, ಯುವ ಭಾರತಕ್ಕೆ ಹೊಸ ದಿಕ್ಕು ನೀಡಿದೆ.
ಭಾರತ್ ಮಂಟಪದಲ್ಲಿ ನಡೆದ ರಾಷ್ಟ್ರೀಯ ಸ್ಟಾರ್ಟಪ್ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “10 ವರ್ಷಗಳ ಹಿಂದೆ ಪರಿಸ್ಥಿತಿ ಹೇಗಿತ್ತು ಎಂದು ನೆನಪಿಸಿಕೊಳ್ಳಿ. ನವೀನ ಆಲೋಚನೆಗಳಿಗೆ, ವೈಯಕ್ತಿಕ ಪ್ರಯತ್ನಗಳಿಗೆ ಅವಕಾಶವೇ ಇರಲಿಲ್ಲ. ಆ ಸ್ಥಿತಿಯನ್ನು ನಾವು ಪ್ರಶ್ನಿಸಿದ್ದೇವೆ. ಸ್ಟಾರ್ಟಪ್ ಇಂಡಿಯಾವನ್ನು ಪ್ರಾರಂಭಿಸಿ, ಯುವಕರಿಗೆ ಮುಕ್ತ ಆಕಾಶ ನೀಡಿದ್ದೇವೆ. ಇಂದು ಅದರ ಫಲಿತಾಂಶ ನಮ್ಮ ಮುಂದೆ ಇದೆ” ಎಂದು ಹೇಳಿದರು.
ಇದನ್ನೂ ಓದಿ: ಉದ್ಯೋಗ ಹುಡುಕುವ ಮನಸ್ಥಿತಿಯಿಂದ ಉದ್ಯೋಗ ಸೃಷ್ಟಿಸುವತ್ತ ಭಾರತ
ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ಇಕೋಸಿಸ್ಟಂ: ಕಳೆದ ಒಂದು ದಶಕದಲ್ಲಿ ಸ್ಟಾರ್ಟಪ್ ಇಂಡಿಯಾ ಉಪಕ್ರಮವು ದೇಶದ ಆರ್ಥಿಕತೆ, ಉದ್ಯೋಗ ಸೃಷ್ಟಿ ಮತ್ತು ನವೀನ ಚಿಂತನೆಗೆ ವೇಗ ನೀಡಿದೆ.ಇಂದು ಭಾರತವು ಅಮೆರಿಕಾ ಮತ್ತು ಚೀನಾದ ಬಳಿಕ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಹೊಂದಿದ ದೇಶವಾಗಿ ಹೊರಹೊಮ್ಮಿದೆ.
2025ರ ಡಿಸೆಂಬರ್‌ವರೆಗೆ ಡಿಪಿಐಐಟಿ (DPIIT) ಮಾನ್ಯತೆ ಪಡೆದಿರುವ ಎರಡು ಲಕ್ಷಕ್ಕೂ ಅಧಿಕ ಸ್ಟಾರ್ಟಪ್‌ಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಟಾರ್ಟಪ್‌ಗಳು ಎರಡನೇ ಮತ್ತು ಮೂರನೇ ಸ್ತರದ ನಗರಗಳಲ್ಲಿ ಹುಟ್ಟಿರುವುದು ವಿಶೇಷವಾಗಿದ್ದು, ನವೋದ್ಯಮದ ಬೆಳಕು ನಗರಗಳ ಗಡಿ ಮೀರಿ ಗ್ರಾಮಾಂತರದತ್ತ ಹರಡುತ್ತಿರುವುದನ್ನು ಇದು ಸೂಚಿಸುತ್ತದೆ.
ಇದನ್ನೂ ಓದಿ: ಕನ್ನಡದ ಮಹತ್ವ ಸಾರಲು ಚಿತ್ರಮಂದಿರಗಳಿಗೆ ಬಂದ ‘ಭಾರತಿ ಟೀಚರ್’
ವಿಕಸಿತ ಭಾರತ 2047ರ ದಿಕ್ಕಿನಲ್ಲಿ ಸ್ಟಾರ್ಟಪ್‌ಗಳ ಪಾತ್ರ: “ವಿಕಸಿತ ಭಾರತ 2047” ಗುರಿ ತಲುಪಲು ಸ್ಟಾರ್ಟಪ್‌ಗಳು ದೇಶದ ಪ್ರಗತಿಯ ಎಂಜಿನ್ ಆಗಿವೆ. ನಗರ–ಗ್ರಾಮಾಂತರ ಅಂತರವನ್ನು ಕಡಿಮೆ ಮಾಡುವುದು, ಮಹಿಳೆಯರ ನೇತೃತ್ವದ ಸ್ಟಾರ್ಟಪ್‌ಗಳಿಗೆ ಉತ್ತೇಜನ ನೀಡುವುದು, ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಪೂರಕವಾಗುವುದು – ಎಲ್ಲ ಕ್ಷೇತ್ರಗಳಲ್ಲೂ ಸ್ಟಾರ್ಟಪ್ ಇಂಡಿಯಾ ಮಹತ್ವದ ಪಾತ್ರ ವಹಿಸಿದೆ.
ಗ್ರಾಮೀಣ ಭಾರತಕ್ಕೂ ನವೋದ್ಯಮದ ಸ್ಪರ್ಶ: ಎಸ್‌ವಿಇಪಿ (SVEP), ಆಸ್ಪೈರ್ (ASPIRE), ಎಸ್‌ಎಂಇಜಿಪಿ (PMEGP) ಮೊದಲಾದ ಯೋಜನೆಗಳ ಮೂಲಕ ಗ್ರಾಮೀಣ ಭಾಗಗಳಲ್ಲಿ ಸಣ್ಣ ಉದ್ದಿಮೆಗಳ ಸ್ಥಾಪನೆಗೆ ಉತ್ತೇಜನ ನೀಡಲಾಗಿದೆ. ಇದರ ಪರಿಣಾಮವಾಗಿ ಉದ್ಯೋಗ ಸೃಷ್ಟಿಯ ಜೊತೆಗೆ ಸ್ವಾವಲಂಬಿ ಗ್ರಾಮಗಳ ಕನಸಿಗೂ ಬಲ ಸಿಕ್ಕಿದೆ.
ಇದನ್ನೂ ಓದಿ: ಒಡಂಬಡಿಕೆ ಕೇವಲ ಕಾಗದದಲ್ಲಿಲ್ಲ, ಕಾರ್ಯರೂಪದಲ್ಲಿ ಸಾಗುತ್ತಿದೆ
ಯುವ ಭಾರತಕ್ಕೆ ಸಂದೇಶ: ಸ್ಟಾರ್ಟಪ್ ಇಂಡಿಯಾ ಕೇವಲ ಸರ್ಕಾರಿ ಯೋಜನೆಯಲ್ಲ, ಅದು ಯುವ ಕನಸುಗಳಿಗೆ ಕೊಟ್ಟ ಭರವಸೆ. ಇದು ಉದ್ಯೋಗ ಹುಡುಕುವ ಮನಸ್ಥಿತಿಯಿಂದ ಉದ್ಯೋಗ ಸೃಷ್ಟಿಸುವ ಸಂಸ್ಕೃತಿಗೆ ಭಾರತವನ್ನು ಕರೆದೊಯ್ದ ಕಥೆ. 10 ವರ್ಷಗಳ ಪಯಣದಲ್ಲಿ ಹುಟ್ಟಿದ ಈ ನವೋದ್ಯಮ ಕ್ರಾಂತಿ, ಮುಂದಿನ ದಶಕಗಳಲ್ಲಿ ಭಾರತವನ್ನು ಜಾಗತಿಕ ಆರ್ಥಿಕ ಶಕ್ತಿಯಾಗಿ ರೂಪಿಸುವ ಶಕ್ತಿ ಹೊಂದಿದೆ.






















