ಸಂಚಾರ್ ಸಾಥಿ ಆ್ಯಪ್ ಅಳವಡಿಕೆ ಕಡ್ಡಾಯವೇ? ಸಚಿವರ ಸ್ಪಷ್ಟನೆ

0
38

ನವದೆಹಲಿ: ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಮೊಬೈಲ್‌ಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್‌ ಅನ್ನು ಕಡ್ಡಾಯವಾಗಿ ಇನ್‌ಸ್ಟಾಲ್‌ ಮಾಡಲು ದೂರಸಂಪರ್ಕ ಇಲಾಖೆ ನೀಡಿದ ನಿರ್ದೇಶನದ ನಂತರ ದೊಡ್ಡ ಮಟ್ಟದ ವಿವಾದ ಎದ್ದಿರುವ ಸಂದರ್ಭದಲ್ಲಿ, ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಸ್ಪಷ್ಟೀಕರಣ ನೀಡಿ ಪರಿಸ್ಥಿತಿಗೆ ತೆರೆ ಎಳೆದಿದ್ದಾರೆ.

ಆ್ಯಪ್ ಕಡ್ಡಾಯವಲ್ಲ, ಆಪ್ಷನಲ್ ಮಾತ್ರ – ಸಿಂಧಿಯಾ: ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಸಂಚಾರ್ ಸಾಥಿ ಆ್ಯಪ್ ಅನ್ನು ನಿಮ್ಮ ಫೋನ್‌ನಲ್ಲಿ ಇಟ್ಟುಕೊಳ್ಳುವುದು ಅಥವಾ ಡಿಲೀಟ್ ಮಾಡುವುದು ಸಂಪೂರ್ಣವಾಗಿ ಬಳಕೆದಾರರ ನಿರ್ಧಾರ. ನಾವು ಪರಿಚಯಿಸುವುದು ನಮ್ಮ ಕರ್ತವ್ಯ ಅದನ್ನು ಬಳಸಬೇಕೆ ಅಥವಾ ಬೇಡವೆ ಎಂಬುದು ಜನರ ಹಕ್ಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಸರ್ಕಾರ ಸೈಬರ್ ವಂಚನೆ, ನಕಲಿ IMEI ಮತ್ತು ಮೊಬೈಲ್ ಕಳ್ಳತನ ತಡೆಗಟ್ಟಲು ಈ ಸಾಧನವನ್ನು ಹೆಚ್ಚು ಜನರಿಗೆ ತಲುಪಿಸಲು ಬಯಸುತ್ತದೆ. ಆದರೆ ಇದು ಬಲವಂತದ ಆ್ಯಪ್ ಅಲ್ಲ.

ಸಂಚಾರ್ ಸಾಥಿ ಆ್ಯಪ್‌ನ ಪ್ರಮುಖ ಪ್ರಯೋಜನಗಳು: ಮೊಬೈಲ್ ಕಳೆದುಹೋದಾಗ ಅಥವಾ ಕಳ್ಳತನವಾದಾಗ ಬ್ಲಾಕ್ ಮಾಡಲು ಮತ್ತು ಪತ್ತೆಹಚ್ಚಲು ಸಹಕಾರಿ. ಫೋನ್ ದೇಶದ ಬೇರೆ ಭಾಗದಲ್ಲಿ ಸಕ್ರಿಯವಾದರೂ ಕಾನೂನು ಸಂಸ್ಥೆಗಳಿಗೆ ಟ್ರ್ಯಾಕ್ ಮಾಹಿತಿಯನ್ನು ನೀಡುತ್ತದೆ. ನಕಲಿ IMEI ಬಳಕೆ ಮತ್ತು ಸೈಬರ್ ವಂಚನೆ ತಡೆಗಟ್ಟಲು ಪರಿಣಾಮಕಾರಿ

ಈಗಾಗಲೇ ದಾಖಲೆ ಮಟ್ಟದ ಬಳಕೆ: ಈಗಾಗಲೆ 1.14 ಕೋಟಿಗೂ ಹೆಚ್ಚು ಬಳಕೆದಾರರು ಸಂಚಾರ್ ಸಾಥಿಗೆ ನೋಂದಣಿ ಮಾಡಿದ್ದಾರೆ. ಗೂಗಲ್ ಪ್ಲೇಸ್ಟೋರ್‌ನಲ್ಲಿ 1 ಕೋಟಿಗೂ ಹೆಚ್ಚು ಡೌನ್‌ಲೋಡ್ ಮಾಡಿಕೊಳ್ಳಲಾಗಿದೆ. ಆಪಲ್‌ ಸ್ಟೋರ್‌ನಲ್ಲಿ 9.5 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್ ಆಗಿವೆ ಎಂದು ಸಚಿವರು ತಿಳಿಸಿದರು.

ಇದುವರೆಗೆ 20 ಲಕ್ಷ ಕದ್ದ ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ. 7.5 ಲಕ್ಷ ಫೋನ್‌ಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಗಿದೆ. “ಈ ಎಲ್ಲವೂ ಸಂಚಾರ್ ಸಾಥಿ ಆ್ಯಪ್‌ನಿಂದ ಸಾಧ್ಯವಾಗಿದೆ” ಎಂದು ಸಚಿವರು ಹೇಳಿದ್ದಾರೆ.

ವಿವಾದದ ಹಿನ್ನೆಲೆಯಲ್ಲಿ ಸ್ಪಷ್ಟನೆ ಮಹತ್ವದ್ದಾಯ್ತು: ಮೊಬೈಲ್ ತಯಾರಕರಿಗೆ ನೀಡಿದ “ಪ್ರೀ-ಇನ್‌ಸ್ಟಾಲ್” ನಿರ್ದೇಶನವೇ ರಾಜಕೀಯ ಮತ್ತು ತಾಂತ್ರಿಕ ವಲಯದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ವಿರೋಧ ಪಕ್ಷಗಳು ಇದನ್ನು “ಗೌಪ್ಯತೆಗೆ ಧಕ್ಕೆ” ಎಂದು ಕಿಡಿಕಾರುತ್ತಿದ್ದರೆ, ಬಳಕೆದಾರರೂ ಆತಂಕ ವ್ಯಕ್ತಪಡಿಸಿದ್ದರು. ಇದರ ನಡುವೆ ಬಂದ ಸಿಂಧಿಯಾ ಅವರ ‘ಆಪ್ಷನಲ್’ ಹೇಳಿಕೆ ಪರಿಸ್ಥಿತಿಯನ್ನು ಶಾಂತಗೊಳಿಸುವ ಸಾಧ್ಯತೆ ಇದೆ.

Previous articleಬೆಂಗಳೂರು: IPOಗೆ ಕಾಲಿಟ್ಟ ಭಾರತೀಯ ವಿಮಾನ ತಯಾರಿಕಾ ಸಂಸ್ಥೆ
Next articleSMAT: ಸ್ಫೋಟಕ ಶತಕ – ಇತಿಹಾಸ ನಿರ್ಮಿಸಿದ 14 ವರ್ಷದ ವೈಭವ್

LEAVE A REPLY

Please enter your comment!
Please enter your name here