ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವರಾತ್ರಿ ಹಬ್ಬದ ಅಂಗವಾಗಿ ಎಲ್ಲಾ ದೇಶವಾಸಿಗಳಿಗೆ ಮನದಾಳದ ಶುಭಾಶಯಗಳನ್ನು ತಿಳಿಸಿ, ಒಂದು ವಿಶೇಷ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ದೇಶದ ಪ್ರಗತಿ, ಹೊಸ ಸುಧಾರಣೆಗಳು ಹಾಗೂ “ಮೇಡ್ ಇನ್ ಇಂಡಿಯಾ” ಉತ್ಪನ್ನಗಳನ್ನು ಖರೀದಿಸಿ ಮಾರಾಟ ಮಾಡುವ ಕುರಿತು ಕರೆ ನೀಡಿದ್ದಾರೆ.
ಮೋದಿ ಅವರು ಬರೆದಿರುವ ಈ ಪತ್ರದಲ್ಲಿ, ಸೆಪ್ಟೆಂಬರ್ 22ರಿಂದ ಆರಂಭವಾಗಿರುವ “GST ಉಳಿತಾಯ ಉತ್ಸವ” ಅಥವಾ “GST Savings Festival” ಕುರಿತು ಪ್ರಸ್ತಾಪಿಸಿದ್ದು, ಇದು ಜನತೆಗೆ ನೇರವಾಗಿ ಲಾಭ ನೀಡಲಿದೆ ಎಂದು ತಿಳಿಸಿದ್ದಾರೆ.
ಈ ಹೊಸ ಜಿಎಸ್‌ಟಿ ಸುಧಾರಣೆಗಳಿಂದ ದಿನನಿತ್ಯದ ಅಗತ್ಯ ವಸ್ತುಗಳಾದ ಆಹಾರ, ಔಷಧಿ, ಸಾಬೂನು, ಟೂತ್‌ಪೇಸ್ಟ್, ವಿಮೆ ಮುಂತಾದವುಗಳ ಮೇಲೆ ತೆರಿಗೆ ಕಡಿತಗೊಳ್ಳಲಿದ್ದು, ಬಹುತೇಕ ವಸ್ತುಗಳು 5% ಕ್ಕೆ ಇಳಿದಿವೆ. ಮೊದಲು 12% ತೆರಿಗೆ ಇದ್ದ ವಸ್ತುಗಳೂ ಈಗ 5% ಶ್ರೇಣಿಗೆ ಬಿದ್ದಿವೆ.
ಅವರು ತಮ್ಮ ಪತ್ರದಲ್ಲಿ, “ಜನರ ಖರ್ಚು ಕಡಿಮೆಯಾಗಲಿದೆ, ಜೀವನಮಟ್ಟ ಸುಧಾರಿಸಲಿದೆ ಮತ್ತು ಹೆಚ್ಚು ಉಳಿತಾಯವಾಗಲಿದೆ. ಈ ಉಳಿತಾಯದೊಂದಿಗೆ ಮನೆ ಕಟ್ಟುವುದು, ವಾಹನ ಖರೀದಿಸುವುದು, ಪ್ರವಾಸ ಹೋಗುವುದು ಸುಲಭವಾಗಲಿದೆ” ಎಂದು ಹೇಳಿದ್ದಾರೆ.
ಮೋದಿ ಅವರು 2017ರಲ್ಲಿ ಪ್ರಾರಂಭವಾದ ಜಿಎಸ್‌ಟಿ ವ್ಯವಸ್ಥೆಯು “ಒನ್ ನೇಷನ್, ಒನ್ ಟ್ಯಾಕ್ಸ್” ತತ್ವವನ್ನು ಬಲಪಡಿಸಿತು ಎಂದು ಸ್ಮರಿಸಿಕೊಂಡು, ಇದೀಗ ಕೈಗೊಳ್ಳುತ್ತಿರುವ ಸುಧಾರಣೆಗಳು ದೇಶವನ್ನು ಇನ್ನಷ್ಟು ಸುಲಭ, ಪಾರದರ್ಶಕ ಹಾಗೂ ಜನಹಿತಕರ ಮಾರ್ಗದಲ್ಲಿ ಮುನ್ನಡೆಸಲಿವೆ ಎಂದರು.
ಅದೇ ವೇಳೆ ಅವರು ಅಂಗಡಿಯವರು ಮತ್ತು ವ್ಯಾಪಾರಿಗಳು “ಮೇಡ್ ಇನ್ ಇಂಡಿಯಾ” ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಮನವಿ ಮಾಡಿದ್ದಾರೆ. “ನಾವು ಏನು ಖರೀದಿಸುತ್ತೇವೋ ಅದು ಸ್ವದೇಶಿ, ನಾವು ಏನು ಮಾರುತ್ತಿದ್ದೇವೋ ಅದು ಸ್ವದೇಶಿ ಎಂದು ಹೆಮ್ಮೆಯಿಂದ ಹೇಳೋಣ” ಎಂದು ಮೋದಿ ಕರೆ ನೀಡಿದ್ದಾರೆ.
ಇದಲ್ಲದೆ, ದೇಶದ ಸಣ್ಣ ಕೈಗಾರಿಕೆಗಳು, ವ್ಯಾಪಾರಿಗಳು, ಉದ್ಯಮಿಗಳು ಮತ್ತು MSME ಗಳಿಗೆ ಇದು ಹೆಚ್ಚು ಲಾಭಕಾರಿ ಎಂದು ತಿಳಿಸಿರುವ ಅವರು, ರಾಜ್ಯ ಸರ್ಕಾರಗಳು ಕೈಗಾರಿಕೆ ಹಾಗೂ ಹೂಡಿಕೆ ವಾತಾವರಣ ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂದೂ ತಿಳಿಸಿದ್ದಾರೆ.
ಕೊನೆಗೆ, ಪ್ರಧಾನಿ ಮೋದಿ ಅವರು ದೇಶದ ಪ್ರತಿಯೊಂದು ಕುಟುಂಬಕ್ಕೂ ಸಂತೋಷ, ಆರೋಗ್ಯ, ಸಮೃದ್ಧಿ ತರಲಿ ಎಂಬ ಹಾರೈಕೆ ವ್ಯಕ್ತಪಡಿಸಿದ್ದಾರೆ.
