‘ಸಂಚಾರ ಸಾಥಿ’ ಆ್ಯಪ್ ಕಡ್ಡಾಯ: ಕೇಂದ್ರದ ಆದೇಶದ ವಿರುದ್ಧ ಕಿಡಿ

0
36

ನವದೆಹಲಿ: ದೇಶದಲ್ಲಿ ತಯಾರಾಗುವ ಅಥವಾ ಆಮದು ಮೂಲಕ ಮಾರಾಟವಾಗುವ ಪ್ರತಿಯೊಂದು ಹೊಸ ಮೊಬೈಲ್‌ ಫೋನ್‌ನಲ್ಲಿ ‘ಸಂಚಾರ ಸಾಥಿ’ ಸೈಬರ್ ಸುರಕ್ಷತಾ ಆ್ಯಪ್ ಅನ್ನು ಕಡ್ಡಾಯವಾಗಿ ಇನ್‌ಸ್ಟಾಲ್ ಮಾಡಬೇಕೆಂದು ಕೇಂದ್ರ ಸರ್ಕಾರ ನೀಡಿರುವ ಆದೇಶ ಈಗ ರಾಜಕೀಯ ಆವರಣದಲ್ಲೇ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಸೈಬರ್ ವಂಚನೆ, ಮೊಬೈಲ್ ಕಳ್ಳತನ, ನಂಬರಿನ ದುರುಪಯೋಗ ತಡೆಯಲು ಈ ಕ್ರಮ ಅಗತ್ಯವೆಂದು ಸರ್ಕಾರ ಹೇಳುತ್ತಿದ್ದರೆ, ಗೌಪ್ಯತೆ ಉಲ್ಲಂಘನೆಯ ಭೀತಿ ಹೆಚ್ಚಿದೆ ಎಂದು ವಿರೋಧ ಪಕ್ಷ ವಿಶೇಷವಾಗಿ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಕಿಡಿಕಾರಿಕೆ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸರ್ಕಾರದ ತೀರ್ಮಾನವನ್ನು ತೀವ್ರವಾಗಿ ವಿರೋಧಿಸಿ, ಇದು ಸಾಮಾನ್ಯ ಜನರ ವೈಯಕ್ತಿಕ ಗೌಪ್ಯತೆಗೆ ದೊಡ್ಡ ಹೊಡೆತ ಎಂದು ಆರೋಪಿಸಿದ್ದಾರೆ. “ಸೈಬರ್ ವಂಚನೆ ವರದಿ ಮಾಡುವ ಕ್ರಮ ಬೇಕು. ಆದರೆ ಮೊಬೈಲ್‌ಗಳಲ್ಲಿ ಸಂಚಾರ ಸಾಥಿ ಆ್ಯಪ್ ಕಡ್ಡಾಯಗೊಳಿಸುವುದು ಬಳಕೆದಾರರ ಗೌಪ್ಯತೆಯನ್ನು ಉಲ್ಲಂಘಿಸುವ ಸಾಧ್ಯತೆ ಹೆಚ್ಚಿಸುತ್ತದೆ.

ಇದು ಕೇವಲ ಒಂದು ಆ್ಯಪ್ ವಿಚಾರವಲ್ಲ. ಬಿಜೆಪಿ ದೇಶವನ್ನು ಸರ್ವಾಧಿಕಾರ ವ್ಯವಸ್ಥೆಯತ್ತ ತಳ್ಳುತ್ತಿದೆ.ಸಂಸತ್ತು ಕಾರ್ಯ ನಿರ್ವಹಿಸದಿರುವುದು ನಮ್ಮ ಕಾರಣದಿಂದಲ್ಲ, ಆಡಳಿತ ಪಕ್ಷವು ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುತ್ತಿಲ್ಲ. ಪ್ರಿಯಾಂಕಾ ಸರ್ಕಾರದ ಕ್ರಮವನ್ನು ನೇರವಾಗಿ ‘ಬೇಹುಗಾರಿಕೆ ಆ್ಯಪ್’ ಎಂದು ಕರೆದು ಆರೋಪಿಸಿದ್ದಾರೆ.

‘ಸರ್ವಾಧಿಕಾರಿ ಸರ್ಕಾರದ ನಡೆ’ : ಮೊಬೈಲ್ ತಯಾರಕರು ಹಾಗೂ ಆಮದುದಾರರು ಆ್ಯಪ್‌ನ್ನು ಅಳಿಸಲಾಗದ ರೀತಿಯಲ್ಲಿ ಲೋಡ್ ಮಾಡುವಂತೆ ಮಾಡಿದ ಡಾಟ್ ಆದೇಶವು ನಾಗರಿಕರ ಮೇಲೆ ವ್ಯಾಪಕ ಕಣ್ಣಾವಲಿ ಹಾಕುವಂತಾಗಿದೆ. ಈ ಕ್ರಮವು ಜನರ ಪ್ರತಿಯೊಂದು ಚಲನವಲನ, ಸಂವಹನಗಳನ್ನು ನಿಗಾದ ಉಪಕರಣದಡಿ ತರುವ ಆತಂಕವನ್ನು ಹುಟ್ಟಿಸುತ್ತದೆ. ಅವರು ಇದನ್ನು ಅಸಂವಿಧಾನಿಕ ಮತ್ತು ನೇತೃತ್ವದ ದುರುಪಯೋಗ ಎಂದು ಹೇಳಿದ್ದಾರೆ.

ಸೈಬರ್ ಸುರಕ್ಷತೆ vs ಗೌಪ್ಯತೆ – ಸೂಕ್ಷ್ಮ ಗಡಿ: ವಂಚನೆ ತಡೆಗಟ್ಟಲು ಪರಿಣಾಮಕಾರಿ ವ್ಯವಸ್ಥೆ ಬರಬೇಕು. ಆದರೆ ಅದಕ್ಕಾಗಿ ಪ್ರತಿಯೊಬ್ಬರ ಮೊಬೈಲ್ ಒಳಗೆ ಸರ್ಕಾರ ನೋಡಲು ಅವಕಾಶ ಇರಬಾರದು. ಸೈಬರ್ ಭದ್ರತೆ ಮತ್ತು ನಾಗರಿಕರ ಗೌಪ್ಯತೆಗೆ ಮಧ್ಯೆ ಸೂಕ್ಷ್ಮ ಗಡಿ ಇದೆ. ಸರ್ಕಾರ ಅದನ್ನು ದಾಟಬಾರದು. ಅವರು ದೇಶವ್ಯಾಪಿ ಚರ್ಚೆ ಹಾಗೂ ಸಂಸತ್ತಿನ ಅನುಮೋದನೆ ಇಲ್ಲದೆ ಇಂತಹ ಕಡ್ಡಾಯ ಕ್ರಮ ಕೈಗೊಂಡಿರುವುದನ್ನು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಹೋರಾಟಕ್ಕೆ ಸಜ್ಜು: ಈ ವಿಷಯದ ಕುರಿತು ಪಕ್ಷ ಮಟ್ಟದಲ್ಲಿ ಚರ್ಚಿಸಿ, ಅಗತ್ಯವಿದ್ದರೆ ಸಂಘಟಿತವಾಗಿ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

Previous articleಮೊಬೈಲ್ ಫೋನ್‌ಗಳಲ್ಲಿ ಇನ್ಮುಂದೆ `ಸಂಚಾರ್ ಸಾಥಿ’ ಆ್ಯಪ್ ಕಡ್ಡಾಯ

LEAVE A REPLY

Please enter your comment!
Please enter your name here