ವೆಜ್‌ ಪಿಜ್ಜಾ ಹೇಳಿದ್ದವನಿಗೆ ನಾನ್‌ವೆಜ್‌ ಪಿಜ್ಜಾ ತಿನಿಸಿದ ಡೊಮಿನೊಸ್‌: 50 ಸಾವಿರ ದಂಡ!

0
87

ಧಾರವಾಡ: ಸಸ್ಯಾಹಾರ ಪಿಜ್ಜಾ ಆರ್ಡರ್ ಮಾಡಿದರೆ ಮಾಂಸಾಹಾರ ಪಿಜ್ಜಾ ಕಳುಹಿಸಿ ಧರ್ಮ ಭ್ರಷ್ಟ ಮತ್ತು ಸೇವಾ ನ್ಯೂನತೆ ಎಸಗಿದ ಡೊಮಿನೊಸ್‌ಗೆ ಬರೋಬ್ಬರಿ 50 ಸಾವಿರ ದಂಡ ಹಾಕಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಇಲ್ಲಿಯ ವಿದ್ಯಾಗಿರಿ ನಿವಾಸಿ ಪ್ರದ್ಯುಮ್ನ ಇನಾಮದಾರ ಎನ್ನುವವರು ಡೊಮಿನೊಸ್ ಜಾಹೀರಾತು ನೋಡಿ ಸಸ್ಯಹಾರಿ ಪದಾರ್ಥಗಳಾದ ಇಂಡಿ ತಂದೂರಿ ಪನೀರ್ ಪಿಜ್ಜಾ, ಪನೀರ್ ಟಿಕ್ಕಾ, ಸ್ಟಫ್ಡ್‌ ಗಾರ್ಲಿಕ್ ಬ್ರೆಡ್, ವೆಜ್ ಜಿಂಗಿ ಪಾರ್ಸೆಲ್ ಹಾಗೂ ಚೀಸ್‌ಡಿಪ್‌ನ್ನು 555 ರೂ. ಪಾವತಿಸಿ ಆರ್ಡರ್‌ ಮಾಡಿದ್ದರು. ಅದು ಮನೆಗೆ ಬಂದ ತಕ್ಷಣ ತಿನ್ನಲು ಪ್ರಾರಂಭಿಸಿದ್ದಾರೆ. ಆದರೆ, ನಂತರದಲ್ಲಿ ಅದು ಸಸ್ಯಾಹಾರ ಅಲ್ಲ ಮಾಂಸಾಹಾರ ಎನ್ನುವುದು ಗಮನಕ್ಕೆ ಬಂದಿದೆ.

ಅಲ್ಲದೇ, ಡೊಮಿನೊಸ್ ಕಳುಹಿಸಿದ ವೆಜ್‌ಜಿಂಗಿ' ಪಾರ್ಸೆಲ್ ಬಾಕ್ಸ್‌ ಮೇಲೆಹಸಿರು ಸ್ಟೀಕರ್’ ಅಂಟಿಸಿದೆ. ಆದರೆ, ಒಳಗಡೆ ಮಾಂಸಾಹಾರ ಪದಾರ್ಥ ಕಳುಹಿಸಿ ಸೇವನೆ ಮಾಡುವಂತೆ ಮಾಡಿದ್ದು, ಇದರಿಂದ ತಮ್ಮ ಧರ್ಮಭ್ರಷ್ಟ ಮಾಡಿದಂತಾಗಿದೆ ಜೊತೆಗೆ ಸೇವಾ ನ್ಯೂನತೆ ಎಸಗಿದ್ದಾರೆ ಎಂದು ಆರೋಪಿಸಿ ಪ್ರದ್ಯಮ್ನ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ ಬೋಳಶೆಟ್ಟಿ ಅವರು, ಪ್ರದ್ಯುಮ್ನ ವಿದ್ಯಾರ್ಥಿಯಾಗಿದ್ದು, ಸಂಪೂರ್ಣ ಸಸ್ಯಾಹಾರಿ ಆಗಿದ್ದಾರೆ. ಅಲ್ಲದೇ ಸಸ್ಯಹಾರಿ ಆಹಾರ ನೀಡುವಂತೆ ಹಣ ಪಾವತಿಸಿ ಆರ್ಡರ್ ಮಾಡಿದ್ದರೂ ಸರಿಯಾಗಿ ಗಮನಿಸದೇ ಸಸ್ಯಹಾರದ ಬದಲು ಮಾಂಸಹಾರ ಪದಾರ್ಥ ಕಳುಹಿಸಿ, ದೂರುದಾರರು ಸೇವಿಸುವಂತೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೇ ತಾವು ಹೊರಡಿಸಿದ ಜಾಹೀರಾತು ಹಾಗೂ ಶಿಸ್ತಿನ ಆಹಾರ ಪದಾರ್ಥ ಮತ್ತು ಅದರ ವಿತರಣೆಯ ಅಂಶಗಳನ್ನು ಗಮನದಲ್ಲಿಟ್ಟು ಕೆಲಸ ಮಾಡದೇ ಸೇವಾ ನ್ಯೂನತೆ ಎಸಗಿದ್ದೀರಿ. ಅದಕ್ಕಾಗಿ ದೂರುದಾರರ ಅನಾನುಕೂಲತೆ ಹಾಗೂ ಮಾನಸಿಕ ತೊಂದರೆಗೆ 50 ಸಾವಿರ ಪರಿಹಾರ ಹಾಗೂ 10 ಸಾವಿರ ಪ್ರಕರಣದ ಖರ್ಚು ನೀಡುವಂತೆ ಆಯೋಗ ಡೊಮಿನೊಸ್ ಪಿಜ್ಜಾಗೆ ಆದೇಶಿಸಿದೆ.

Previous articleಒಂದಾಗಲಿದ್ದಾರೆ ಕುಚಿಕು ಗೆಳೆಯರು, ಶ್ರಿರಾಮುಲು ಜೊತೆ ಸಿನಿಮಾ ನೋಡಲಿದ್ದಾರೆ ರೆಡ್ಡಿ!
Next articleRaichur: ಕೆಡಿಪಿ ಸಭೆಯಲ್ಲಿಯೇ ಕುಳಿತು ಮೊಬೈಲ್‌ನಲ್ಲಿ ರಮ್ಮಿ ಆಡಿದ ಅಧಿಕಾರಿ!

LEAVE A REPLY

Please enter your comment!
Please enter your name here