ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೊರಗೆ ಓಡಾಡುವುದೇ ದೊಡ್ಡ ಸಮಸ್ಯೆ. ಏಕೆಂದರೆ ಇಲ್ಲಿರುವ ಜನಸಂಖ್ಯೆ ಅದರೊಂದಿಗೆ ವಾಹನಗಳ ಓಡಾಟ. ಯಾವುದೇ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಬೇಕಾದರೆ ಜನರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿದಲ್ಲ. ಈ ಸಮಸ್ಯೆಯನ್ನು ತಗ್ಗಿಸಲು ಸರಕಾರವೂ ಹಲವಾರು ಯೋಜನೆಗಳನ್ನು ರೂಪಿಸಿದೆ. ಈಗ ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತು ಹೋಗಿರುವ ಜನರಿಗೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿಹಿ ಸುದ್ದಿ ನೀಡಿದ್ದಾರೆ.
ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದವರೆಗೆ 1.5 ಕಿ.ಲೋ ಮೀಟರ್ ಉದ್ದದ ಹೊಸ ಸುರಂಗ ರಸ್ತೆಯನ್ನು ಘೋಷಿಸಿದ್ದಾರೆ. ಈ ಯೋಜನೆಗೆ ಮುಂಬರುವ ಕ್ಯಾಬಿನೆಟ್‌ನಲ್ಲಿ ಅನುಮತಿಯನ್ನು ಪಡೆದು ಎರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆಯನ್ನು ಡಿ.ಕೆ. ಶಿವಕುಮಾರ್ ನೀಡಿದ್ದಾರೆ.
ಒಟ್ಟು 16.75 ಕಿ.ಮೀ. ಉದ್ದದ ಈ ಸುರಂಗ ಮಾರ್ಗದ ನಿರ್ಮಾಣಕ್ಕೆ ವಿಶೇಷ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ದೇಶದ ಹತ್ತು ಪ್ರಮುಖ ಕಂಪನಿಗಳು ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದೆ ಬಂದಿವೆ. ಸೋಮವಾರ ನಡೆದ ಪ್ರೀ-ಬಿಡ್ ಸಭೆಯಲ್ಲಿ, ಮೆಗಾ ಎಂಜಿನಿಯರಿಂಗ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಟರ್, ಅಫ್‌ಕಾನ್ಸ್ ಇನ್‌ಫ್ರಾಸ್ಟ್ರಕ್ಟರ್, ಐಟಿಡಿ ಸೆಮೆಂಟೇಷನ್ ಇಂಡಿಯಾ, ಸೀಗಲ್ ಇಂಡಿಯಾ, ವಿಶ್ವ ಸಮುದ್ರ ಎಂಜಿನಿಯರಿಂಗ್ ಲಿಮಿಟೆಡ್, ಜಯಶಂಕರ್, ಐಆರ್‌ಬಿ ಇನ್‌ಫ್ರಾಸ್ಟ್ರಕ್ಟರ್ ಕಂಪನಿಯ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಇದಕ್ಕೂ ಮುಂಚೆ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗೆ ಸುರಂಗ ಮಾರ್ಗ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿತ್ತು. ಸುಮಾರು 17,698 ಕೋಟಿ ರೂ. ವೆಚ್ಚದ ಈ ಯೋಜನೆಯ ಶೇ 60ರಷ್ಟು ಮೊತ್ತವನ್ನು ಗುತ್ತಿಗೆ ಪಡೆಯುವ ಕಂಪನಿಗಳು ಭರಿಸಬೇಕು. ಈ ಮೊತ್ತವು ಅಂದಾಜು 10,619 ಕೋಟಿ ರೂಪಾಯಿ ಆಗಲಿದೆ. ಇನ್ನು ಬಿಡ್ ಸಂದರ್ಭದಲ್ಲಿ 44 ಕೋಟಿ ರೂ. ಠೇವಣಿ ಇಡಬೇಕು. ಇದಕ್ಕೆ ಪ್ರತಿಯಾಗಿ 30 ವರ್ಷಗಳ ಅವಧಿಗೆ ಗುತ್ತಿಗೆದಾರ ಸಂಸ್ಥೆ ಟೋಲ್ ಸಂಗ್ರಹಿಸಲು ಅವಕಾಶ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮೂರು ಲೇನ್ ಹೊಂದಿರುವ ಸುರಂಗ ರಸ್ತೆಯ ವಿನ್ಯಾಸ ಮತ್ತು ನಿರ್ಮಾಣಕ್ಕಾಗಿ ಮೂರು ವಾರಗಳ ಹಿಂದೆ ಟೆಂಡರ್ ಕರೆಯಲಾಗಿತ್ತು. ಟೆಂಡರ್‌ನಲ್ಲಿ ಭಾಗವಹಿಸಿದ ಕಂಪನಿಗಳಲ್ಲಿ ಅದಾನಿ ಗ್ರೂಪ್, ಲಾರ್ಸೆನ್ ಎಂಡ್ ಟೂಬ್ರೋ (L&T) ಮತ್ತು ಟಾಟಾ ಪ್ರಾಜೆಕ್ಟ್ಸ್ ಪ್ರಮುಖವಾಗಿವೆ. ಎಂದು ಹೇಳಲಾಗುತ್ತಿದೆ. ಇನ್ನು ಪ್ರಾಜೆಕ್ಟ್ ಕುರಿತ ಪ್ರೀ-ಬಿಡ್ ಸಭೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಪ್ರಶ್ನೆಗಳನ್ನು ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಸರ್ಕಾರದ ಅಧಿಕಾರಿಗಳಿಗೆ ಕೇಳಿದ್ದಾರೆ ಎಂದು ಹೇಳಲಾಗಿದೆ.