ಬೆಂಗಳೂರು: ರೇಣುಕಾಸ್ವಾಮಿ ಅಪಹರಣಕ್ಕೆ ಸೂಚನೆ ನೀಡಿದ್ದೇನೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಹೀಗಾಗಿ ಹೈಕೋರ್ಟ್ ನೀಡಿದ ಜಾಮೀನನ್ನು ರದ್ದುಗೊಳಿಸಬಾರದು ಎಂದು ನಟ ದರ್ಶನ್ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದು, ಲಿಖಿತ ರೂಪದ ಕಾರಣಗಳನ್ನು ನೀಡಿದ್ದಾರೆ.
ಈಗಾಗಲೇ ನಟ ದರ್ಶನ್ ಸೇರಿದಂತೆ 7 ಜನ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದ್ದು, ಅದನ್ನು ರದ್ದು ಮಾಡುವಂತೆ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಕುರಿತಂತೆ ವಾದ-ಪ್ರತಿವಾದ ಆಲಿಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಪೀಠ ಒಂದು ವಾರದೊಳಗೆ ನಿಮ್ಮ ವಾದ-ಪ್ರತಿವಾದವನ್ನು ಸಂಕ್ಷಿಪ್ತವಾಗಿ ಮೂರು ಪುಟಗಳಲ್ಲಿ ಸಲ್ಲಿಸಿ ಎಂದು ಸೂಚಿಸಿತ್ತು. ಅದರಂತೆ ಪ್ರಕರಣದ ಎ 2 ನಟ ದರ್ಶನ್, ಎ 1 ಪವಿತ್ರಾ ಗೌಡ ಪರ ವಕೀಲರು ಮತ್ತು ಬೆಂಗಳೂರು ಪೊಲೀಸರ ಪರ ವಕೀಲರು ನ್ಯಾಯಾಲಯಕ್ಕೆ ಲಿಖಿತ ರೂಪದಲ್ಲಿ ವಾದವನ್ನು ಸಲ್ಲಿಸಿದ್ದಾರೆ.
ಅದರಲ್ಲಿ ಸಾಕ್ಷಿ ಕೊರತೆ ಸೇರಿದಂತೆ ಹಲವು ಕಾರಣಗಳೊಂದಿಗೆ ಜಾಮೀನು ಏಕೆ ರದ್ದು ಮಾಡಬಾರದು ಎಂಬ ಅಂಶವನ್ನು ದರ್ಶನ್ ಪರ ವಕೀಲರು ನೀಡಿದ್ದರೆ, ಇತ್ತ ಪವಿತ್ರಾ ಗೌಡ ಅವರು ಕೌಟುಂಬಿಕ ಕಾರಣವನ್ನು ನೀಡಿದ್ದಾರೆ.
ನಟ ದರ್ಶನ್ ಪರ ವಾದವೇನು?
- ರೇಣುಕಾಸ್ವಾಮಿ ಅಪಹರಣದಲ್ಲಿ ದರ್ಶನ್ ಪಾತ್ರದ ಬಗ್ಗೆ ಯಾವುದೆ ಪುರಾವೆಗಳಿಲ್ಲ.
- ದರ್ಶನ್ ಯಾವುದೇ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ.
- ದರ್ಶನ್ ಮತ್ತು ಆರೋಪಿ 3 ಪವನ್ ನಡುವೆ ಕರೆಗಳು, ವಾಟ್ಸಾಪ್ ಸಂದೇಶಗಳ ವಿನಿಮಯವಾಗಿಲ್ಲ.
- ಸಾಕ್ಷಿಗಳಾದ ಕಿರಣ್, ಮಲ್ಲಿಕಾರ್ಜುನ್ ಮತ್ತು ನರೇಂದ್ರ ಸಿಂಗ್ ಅವರ ಹೇಳಿಕೆಗಳ ವಿಶ್ವಾಸಾರ್ಹತೆ ಬಗ್ಗೆ ಅನುಮಾನವಿದೆ.
- ಸಾಕ್ಷಿಗಳು ಕೋರ್ಟ್‌ನಲ್ಲಿ ದರ್ಶನ್ ಹೆಸರನ್ನು ಉಲ್ಲೇಖಿಸಿಲ್ಲ.
- ಮೂರು ಸೆಕೆಂಡ್ ವೀಡಿಯೊ ಇದೆ ಎನ್ನುತ್ತಿರುವ ಬೆಂಗಳೂರು ಪೊಲೀಸರ ವಾದದಲ್ಲಿ ಹುರುಳಿಲ್ಲ.
- ಮೂರು ಸೆಕೆಂಡ್‌ಗಳ ವಿಡಿಯೋ ಅಸ್ತಿತ್ವದಲ್ಲೇ ಇಲ್ಲ.
- ವಿಡಿಯೋವನ್ನು ಚಾರ್ಜ್‌ಶೀಟ್‌ನಲ್ಲಿ ಅಥವಾ ಹೈಕೋರ್ಟ್‌ನಲ್ಲಿ ಸಲ್ಲಿಸಿಲ್ಲ.
- ಮರಣದ ಸಮಯವನ್ನು ಪ್ರಾಸಿಕ್ಯೂಷನ್ ಕಥೆಗೆ ಅನುಗುಣವಾಗಿ ನಿರ್ಧರಿಸಲಾಗಿದೆ.
- ಮೈಸೂರಿನಲ್ಲಿ ಬಂಧಿಸಿ, ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
- ಸಂಜೆ 6.30 ರವರೆಗೂ ಬಂಧಿಸಿರುವ ಕುರಿತಂತೆ ಲಿಖಿತವಾಗಿ ಕಾರಣವನ್ನು ನೀಡಿಲ್ಲ.
- ಘಟನೆ ನಡೆದ 7 ದಿನಗಳ ನಂತರ ಕಿರಣ್ ಹೇಳಿಕೆ ದಾಖಲಿಸಲಾಗಿದೆ.
ಈ ಎಲ್ಲ ಕಾರಣಗಳನ್ನು ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಪವಿತ್ರಾ ಗೌಡ ಪರ ವಾದವೇನು?
- ಪವಿತ್ರಾ ಗೌಡ, ರೇಣುಕಾಸ್ವಾಮಿಯಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದರು.
- ಪವಿತ್ರಾ ಹಾಗೂ ಆರೋಪಿಗಳ ಮಧ್ಯೆ ಸಂಭಾಷಣೆ ನಡೆದಿಲ್ಲ.
- ಪವಿತ್ರಾರಿಂದ ರೇಣುಕಾಸ್ವಾಮಿಗೆ ಮೇಲೆ ಮಾರಣಾಂತಿಕ ಹಲ್ಲೆಯಾಗಿಲ್ಲ.
- ಪವಿತ್ರಾ ಒಬ್ಬಂಟಿ ಪೋಷಕರು. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರು ಮಗಳಿದ್ದಾಳೆ.
- ವಯಸ್ಸಾದ ಪೋಷಕರಿಗೆ ಪವಿತ್ರಾ ಗೌಡ ಆಧಾರವಾಗಿದ್ದಾರೆ.
- ಯಾವುದೇ ಕ್ರಿಮಿನಲ್ ಕೇಸ್ ಹಿನ್ನಲೆ ಪವಿತ್ರಾ ಗೌಡ ಹೊಂದಿಲ್ಲ.
- ಪವಿತ್ರಾ ಗೌಡ ಬಂಧನಕ್ಕೆ ಕಾರಣಗಳನ್ನು ಲಿಖಿತವಾಗಿ ನೀಡಿಲ್ಲ
ಈ ಎಲ್ಲ ಕಾರಣಗಳನ್ನು ಪವಿತ್ರಾ ಗೌಡ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.