ಆಯೋಗದ ತಪ್ಪಿಗೆ ಪರೀಕ್ಷಾರ್ಥಿಗಳು ಬೆಲೆ ಕಟ್ಟುವುದು ಅನ್ಯಾಯವಾಗುತ್ತದೆ
ಬೆಂಗಳೂರು: ಪ್ರಶ್ನೆ ಪತ್ರಿಕೆಯಲ್ಲಿ ಮಾಡಿರುವ ಸಾಲು ಎಡವಟ್ಟುಗಳಿಗೆ ಕರ್ನಾಟಕ ಲೋಕ ಸೇವಾ ಆಯೋಗ ನಿಗದಿ ಮಾಡಿರುವ ಕೃಪಾಂಕ ಅತಾರ್ಕಿಕ ಹಾಗೂ ಅವೈಜ್ಞಾನಿಕವಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಪ್ರಶ್ನೆ ಪತ್ರಿಕೆಯಲ್ಲಿ 39 ಪ್ರಶ್ನೆಗಳು ತಪ್ಪಾಗಿ ತರ್ಜುಮೆ, ವ್ಯಾಕರಣ ದೋಷ, ತಪ್ಪು ಪದಗಳ ಪ್ರಯೋಗ, ಅರ್ಥಹೀನ, ತರ್ಕರಹಿತವಾಗಿದ್ದವು. ಆದರೆ ಆಯೋಗ ಕೇವಲ 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡಿದೆ. ಉತ್ತರದಾಯಿತ್ವ ಇಲ್ಲದೆ, ಕಿಂಚಿತ್ತೂ ಜವಾಬ್ದಾರಿ ಇಲ್ಲದೆ ಲೋಕಸೇವಾ ಆಯೋಗ ಪರೀಕ್ಷಾರ್ಥಿಗಳ ಭವಿಷ್ಯದ ಕನಸನ್ನು ಹಾಳು ಮಾಡುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರತಿ ನಿಮಿಷ ಅತ್ಯಮೂಲ್ಯವಾಗಿರುತ್ತದೆ. ಅಸಂಬದ್ಧ ಪ್ರಶ್ನೆಗಳನ್ನು ಅರ್ಥೈಸಿಕೊಳ್ಳುವುದರಲ್ಲೇ ಪರೀಕ್ಷಾರ್ಥಿಗಳಿಗೆ ಸಮಯ ವ್ಯಯ ಆಗುತ್ತದೆ. ಇದು ಆಯೋಗದ ವೃತ್ತಿಪರತೆಯ ಕೊರತೆ, ಬೇಜವಾಬ್ದಾರಿತನದಿಂದ ಆಗಿದೆ. ಆಯೋಗದ ತಪ್ಪಿಗೆ ಪರೀಕ್ಷಾರ್ಥಿಗಳು ಬೆಲೆ ಕಟ್ಟುವುದು ಅನ್ಯಾಯವಾಗುತ್ತದೆ. ಪರೀಕ್ಷೆಗೆ ಸರ್ವಸನ್ನದ್ಧರಾಗಿ, ತಿಂಗಳುಗಟ್ಟಲೆ ಓದಿಕೊಂಡು, ಕೆಲಸದ ಜೊತೆ ರಾತ್ರಿ ವೇಳೆ ಅಭ್ಯಾಸ ಮಾಡಿ ಪರೀಕ್ಷೆ ತೆಗೆದುಕೊಂಡವರಿಗೆ ಆಯೋಗ ಅನ್ಯಾಯ ಮಾಡುತ್ತಿದೆ. ಕೃಪಾಂಕ ಎಷ್ಟು ಕೊಡಬೇಕೆಂದು ಉಪ ಕುಲಪತಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಿ ನ್ಯಾಯಬದ್ಧವಾಗಿ ಕೃಪಾಂಕವನ್ನು ನಿಗದಿ ಮಾಡಲಿ. ಕೃಪಾಂಕ ನಿಗದಿ ಮಾಡುವುದರಲ್ಲೂ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗದಿರಲಿ ಎಂದಿದ್ದಾರೆ.