ಹುಬ್ಬಳ್ಳಿ: ದಲಿತರು ಖಂಡಿತವಾಗಿ ಮುಖ್ಯಮಂತ್ರಿ ಆಗ್ತಾರೆ. ಆದರೆ, ಈಗಲ್ಲ. ಆ ಸಮಯಕ್ಕಾಗಿ ಕಾಯಬೇಕು ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಇದಾರೆ. 2028ರ ವೇಳೆಗೆ ದಲಿತರಿಗೆ ಅವಕಾಶ ಕೇಳಬಹುದು ಎಂದರು.
ಪವರ್ ಶೇರಿಂಗ್ ವಿಚಾರವಾಗಿ ಹಿರಿಯ ನಾಯಕರು ಮಾತಾಡಬೇಡಿ ಎಂದು ಸೂಚನೆ ನೀಡಿದ್ದಾರೆ. ಹಾಗಾಗಿ ನಾವು ಪವರ್ ಶೇರಿಂಗ್ ವಿಚಾರ ಮಾತಾಡಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಡಿ ಟಾರ್ಗೆಟ್ ಮಾಡಿದೆ. ಈಗಾಗಲೇ ಸೈಟ್ ವಾಪಸ್ ಕೊಟ್ಟಿದ್ದಾರೆ. ಆದರೂ ಟಾರ್ಗೆಟ್ ಮಾಡಿದ್ದಾರೆ ಎಂದು ಆರೋಪಿಸಿದರು.
ಜಾತಿ ಗಣತಿಯನ್ನು ಜಾರಿ ಮಾಡಲೇಬೇಕು ಎಂದು ಆಗ್ರಹಿಸಿದ ಅವರು, ಬಹಳ ವೈಜ್ಞಾನಿಕವಾಗಿರುವ ವರದಿ ಅದು. ಅದನ್ನು ಬಹಿರಂಗಗೊಳಿಸುವಂತೆ ಸಿದ್ದರಾಮಯ್ಯಗೆ ನಾನು ಒತ್ತಾಯ ಮಾಡುತ್ತೇನೆ. ಅಲ್ಲದೆ, ಅದಕ್ಕೆ ಈ ಬಾರಿಯ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ಜಾತಿ ಗಣತಿ ಹಾಗೂ ಒಳ ಮೀಸಲಾತಿ ಎರಡೂ ಜಾರಿಯಾಗಬೇಕು ಎಂದರು.